Breaking News
Home / ಜಿಲ್ಲೆ / ಬೆಂಗಳೂರು / ಕೊರೋನ ಸಂಕಷ್ಟ ನಿಭಾಯಿಸಲು ಆಗದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಿ: ಡಿ.ಕೆ.ಶಿವಕುಮಾರ್

ಕೊರೋನ ಸಂಕಷ್ಟ ನಿಭಾಯಿಸಲು ಆಗದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಿ: ಡಿ.ಕೆ.ಶಿವಕುಮಾರ್

Spread the love

ಬೆಂಗಳೂರು, ಎ. 18: ಒಂದೂವರೆ ವರ್ಷದಿಂದಲೂ ಎದುರಾಗಿರುವ ಕೊರೋನ ಸಂಕಷ್ಟವನ್ನು ನಿಭಾಯಿಸಲಾಗದಿದ್ದ ಮೇಲೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೊಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟ ಮುಗಿಯುವವರೆಗೂ ರಾಜ್ಯದ ಎಲ್ಲ ಜನರಿಗೂ ಉಚಿತ ಆರೋಗ್ಯ ಸೇವೆ ಒದಗಿಸಬೇಕು. ಕೋವಿಡ್ ಆರಂಭದಿಂದ ಈವರೆಗೂ ಪ್ರತಿಪಕ್ಷವಾಗಿ ಕಾಂಗ್ರೆಸ್ ಸರಕಾರಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಜಾರಿಗೊಳಿಸಲಾದ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ. ಗಂಟೆ ಹೊಡಿಯಿರಿ, ಚಪ್ಪಾಳೆ ತಟ್ಟಿ ಎಂದಾಗಲೂ ಜನ ಅದನ್ನು ಅನುಸರಿಸಿದ್ದಾರೆ. ಆದರೆ, ಕೇಂದ್ರ ಮತ್ತು ರಾಜ್ಯ ಸರಕಾರ ಕೊರೋನ ನಿಯಂತ್ರಣಕ್ಕೆ ಗಂಭೀರ ಕ್ರಮ ಕೈಗೊಳ್ಳದೆ ಜನರ ಜೀವ ಮತ್ತು ಜೀವನದ ಜೊತೆ ಆಟವಾಡುತ್ತಿದೆ ಎಂದು ದೂರಿದರು.

ರಾಜ್ಯ ಸರಕಾರ ಆರೋಗ್ಯ, ಶಿಕ್ಷಣ, ಉದ್ಯೋಗದಂತಹ ವಿಚಾರದಲ್ಲಿ ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಆರ್ಥಿಕ ಚೈತನ್ಯ ನೀಡುವ ಮೂಲಕ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ಪರೀಕ್ಷೆಗಳಿಲ್ಲದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಉದ್ಯೋಗದ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು. ಅದಕ್ಕಾಗಿ ಸ್ಪಷ್ಟವಾದ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಶಿವಕುಮಾರ್ ಒತ್ತಾಯಿಸಿದರು.

ಆರು ತಿಂಗಳ ಕಾಲ ಬ್ಯಾಂಕ್ ಬಡ್ಡಿ ದರ ಮನ್ನಾ ಮಾಡಬೇಕು. ಬ್ಯಾಂಕ್ ಕಂತು ಪಾವತಿಯಿಂದ ವಿನಾಯ್ತಿ ನೀಡಬೇಕು. ಆಸ್ತಿ ತೆರಿಗೆಗಳನ್ನು ರದ್ದುಪಡಿಸಬೇಕು. ರಾಜ್ಯದ ಎಲ್ಲರಿಗೂ ಉಚಿತ ಆರೋಗ್ಯ ಸೇವೆ ನೀಡಬೇಕು ಎಂದು ಆಗ್ರಹಿಸಿದ ಶಿವಕುಮಾರ್, ಕೊರೋನ ಕಾಲದಲ್ಲಿ ಜನ ಸಂಕಷ್ಟದಿಂದ ಬಳಲುತ್ತಿರುವಾಗ ಸರಕಾರ ಕರುಣೆ ತೋರಿಸಿಲ್ಲ. ಆಸ್ತಿ ತೆರಿಗೆ, ವಿದ್ಯುತ್ ದರ, ಪೆಟ್ರೋಲ್-ಡೀಸೆಲ್, ರಸಗೊಬ್ಬರದ ಬೆಲೆಗಳನ್ನು ಹೆಚ್ಚಳ ಮಾಡಿದೆ. ಜಿಎಸ್ಟಿ ಪಾವತಿ ವಿಳಂಬಕ್ಕೂ ದಂಡ ವಿಧಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕೋವಿಡ್ ಹಿನ್ನೆಲೆಯಲ್ಲಿ ನಗರ ಪ್ರದೇಶದಲ್ಲಿ ಆನ್‍ಲೈನ್ ತರಗತಿಗಳು ನಡೆಯುತ್ತಿವೆ. ಆದರೆ, ಗ್ರಾಮೀಣ ಮಕ್ಕಳ ಪರಿಸ್ಥಿತಿ ಏನು ಎಂದು ಸರಕಾರ ಯೋಚನೆ ಮಾಡಿಲ್ಲ. ಉದ್ಯೋಗ ನಷ್ಟವಾಗಿದೆ. ಯಾರು ಯಾವ ಕ್ಷೇತ್ರದಲ್ಲಿ ಎಷ್ಟು ಉದ್ಯೋಗಗಳು ಹೋಗಿವೆ ಎಂಬ ಅಂಕಿ ಅಂಶಗಳೇ ಸರಕಾರದ ಬಳಿ ಇಲ್ಲ. ಮೊದಲ ಅಲೆಯ ಬಳಿಕ 2ನೆ ಅಲೆ ಕಾಡಬಹುದು ಎಂಬ ಅಂದಾಜು ಸರಕಾರಕ್ಕಿತ್ತು. ಆದರೆ, ಅದನ್ನು ನಿಭಾಯಿಸಲು ಯಾವುದೇ ಪೂರ್ವ ತಯಾರಿ ಮಾಡಿಕೊಂಡಿಲ್ಲ. ಅಧಿಕಾರಿಗಳು, ಸಚಿವರ ಬದಲಾವಣೆಯಲ್ಲೇ ಕಾಲಹರಣ ಮಾಡಿದ್ದಾರೆ ಎಂದು ಶಿವಕುಮಾರ್ ದೂರಿದರು.

ಸ್ಮಶಾನದಲ್ಲಿನ ಅವ್ಯವಸ್ಥೆ ಸರಿಪಡಿಸಿ: ಕೋವಿಡ್ ಸೋಂಕಿನಿಂದ ಮೃತಪಟ್ಟವರ ಹೆಣ ಸುಡಲು ಲಂಚ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳಲ್ಲಿ ಔಷಧಿ, ಬೆಡ್ ಯಾವುದೂ ಇಲ್ಲ. ಅಧಿಕಾರಿಗಳು, ಸಚಿವರ ಕಚೇರಿ ಬಿಟ್ಟು ಹೊರಗಡೆ ಹೋಗುತ್ತಿಲ್ಲ. ಜಿಲ್ಲಾ ಮಟ್ಟದಲ್ಲಿ ಕೆಟ್ಟ ಪರಿಸ್ಥಿತಿಯಿದೆ. ಸ್ಮಶಾನದಲ್ಲಿ ಇರುವ ಅವ್ಯವಸ್ಥೆಯನ್ನು ಸರಿಪಡಿಸಲು ಸರಕಾರಕ್ಕೆ ಆಗುವುದಿಲ್ಲವೆಂದರೆ ಅಧಿಕಾರಿಗಳು ಸಂಬಳ ಪಡೆದು ಏನು ಕೆಲಸ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಲಾಕ್‍ಡೌನ್‍ಗೆ ವಿರೋಧ: ಕೋವಿಡ್ ಎರಡನೆ ಅಲೆ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ಇತರೆಡೆಗಳಲ್ಲಿ ಲಾಕ್‍ಡೌನ್‍ಗೆ ನಮ್ಮ ವಿರೋಧವಿದೆ. ಜೀವ ಉಳಿಯಬೇಕು. ಜೊತೆಗೆ ಬದುಕು ಉಳಿಯಬೇಕು. ಶಾಸಕರು/ ಸಂಸದರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಪಾಲ್ಗೊಳ್ಳಲಿದ್ದು, ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ