Breaking News
Home / ಜಿಲ್ಲೆ / ಬೆಳಗಾವಿ / ಉದ್ಯೋಗ ಅರಸಿ ವಲಸೆ ಹೋಗುವವರ ಸಮಸ್ಯೆ ನೀಗಿಸುರುವರೇ ಶಾಸಕ ಮಹಾಂತೇಶ ಕೌಜಲಗಿ?

ಉದ್ಯೋಗ ಅರಸಿ ವಲಸೆ ಹೋಗುವವರ ಸಮಸ್ಯೆ ನೀಗಿಸುರುವರೇ ಶಾಸಕ ಮಹಾಂತೇಶ ಕೌಜಲಗಿ?

Spread the love

ಬೈಲಹೊಂಗಲ: ಬೈಲಹೊಂಗಲ ಮತಕ್ಷೇತ್ರದ ಹೆಸರಲ್ಲೇ ಒಂದು ಐತಿಹಾಸಿಕ, ಕ್ರಾಂತಿಕಾರಕ ಶಕ್ತಿ ಅಡಗಿದೆ. ಎರಡನೇ ಬಾರಿ ಆಯ್ಕೆಯಾದ ಶಾಸಕ ಮಹಾಂತೇಶ ಕೌಜಲಗಿ ಅವರು ಹಳೆಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಜೊತೆಗೆ ಕ್ಷೇತ್ರದ ಜನರ ಹೊಸ ನಿರೀಕ್ಷೆಗಳನ್ನು ಈಡೇರಿಸುವ ಸವಾಲು ಎದುರಿಸಬೇಕಾಗಿದೆ.‌

ಈ ಕ್ಷೇತ್ರದಲ್ಲಿ ಅವರ ಎರಡೂ ಗೆಲುವುಗಳಿಗೆ ಅವರಿಗಿಂತ ಹೆಚ್ಚಾಗಿ ಬಿಜೆಪಿ ನಾಯಕರ ಒಳಜಗಳವೇ ಕಾರಣ ಎಂಬುದು ಈಗ ಜನಜನಿತ. ಈ ಅವಕಾಶವು ಮಹಾಂತೇಶ ಅವರಿಗೆ ಎರಡು ಬಾರಿ ಒಲಿದಿದೆ. ಆದರೆ, ಇದು ಪದೇಪದೇ ಒದಗುತ್ತದೆ ಎನ್ನಲಾಗುವುದಿಲ್ಲ. ಸಿಕ್ಕ ಅವಕಶವನ್ನು ಬಳಸಿಕೊಂಡು ಅವರು ಕ್ಷೇತ್ರದ ಮೇಲೆ ಸ್ವಂತ ಹಿಡಿತ ಸಾಧಿಸಬೇಕು. ಪಾರಮ್ಯ ಮೆರೆಯಬೇಕು. ಅದಕ್ಕಾಗಿ ತಮ್ಮ ಭರವಸೆಗಳನ್ನು ಈಡೇರಿಸಬೇಕು. ಈ ಹಿಂದಿನ ಬಿಜೆಪಿ, ಕೆಜೆಪಿ ಶಾಸಕರು ಹಾಗೂ ಮಹಾಂತೇಶ ಅವರು ಸೇರಿ ಭರವಸೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಆದರೆ, ಮೂವರಿಂದಲೂ ಅವುಗಳನ್ನು ಪೂರ್ಣಗೊಳಿಸುವ ಕೆಲಸ ಆಗಿಲ್ಲ ಎನ್ನುವುದು ಜನರ ದೂರು.

ಈ ಹಿಂದಿನ ಅವಧಿಯಲ್ಲಿ ಕೆಲವು ಅಭಿವೃದ್ಧಿ ಕಾಮಗಾರಿ ಮಾಡಿದ್ದರೂ, ಇನ್ನೂ ಹಲವು ಕಾಮಗಾರಿಗಳು ಪೂರ್ಣಗೊಳ್ಳಬೇಕಿದೆ. ಅವರದ್ದೇ ಪಕ್ಷವಾದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೇರಿದೆ. ಹಾಗಾಗಿ ದಶಕದಿಂದ ನನೆಗುದಿಗೆ ಬಿದ್ದಿರುವ ಪ್ರಮುಖ ಕಾಮಗಾರಿಗಳು ಹೆಚ್ಚಿನ ವೇಗ ಪಡೆದು ಅನುಷ್ಠಾನಕ್ಕೆ ಬರಬೇಕಿವೆ.

ಕೈಗಾರಿಕೆ ವಲಯ:

ಕ್ಷೇತ್ರದಲ್ಲಿ ರಸ್ತೆ, ಚರಂಡಿ, ಕೆರೆ ತುಂಬಿಸುವ ಯೋಜನೆಯ ಕೆಲಸ ಹೊರತುಪಡಿಸಿದರೆ, ಯಾವುದೇ ಕೈಗಾರಿಕೆ ವಲಯ ಇಲ್ಲ. ದುಡಿಮೆಗಾಗಿ ವಲಸೆ ಹೋಗುವುದು ಅನಿವಾರ್ಯ. ಅದನ್ನು ತಪ್ಪಿಸಿ ಸ್ಥಳೀಯವಾಗಿಯೇ ದುಡಿಯುವ ಕೈಗಳಿಗೆ ಕೆಲಸ ಕೊಡಲು ಯಾವುದಾದರೂ ಒಂದು ಕೈಗಾರಿಕಾ ವಲಯ ಸ್ಥಾಪಿಸಬೇಕು ಎಂಬುದು ಜನರ ಆಗ್ರಹ. ಈ ಭಾಗದ ಯುವಕ, ಯುವತಿಯರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಜವಾಬ್ದಾರಿಯೂ ಅವರ ಮೇಲಿದೆ. ದೊಡ್ಡ ಉದ್ದಿಮೆಗಳನ್ನು ಕ್ಷೇತ್ರಕ್ಕೆ ತರಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕೆನ್ನುವ ಕೂಗು ಬಲವಾಗಿದೆ.

ನೀರಾವರಿ ಸೌಲಭ್ಯ ಈಡೇರುವುದೇ:

ಮಲಪ್ರಭಾ ನದಿ ಬೈಲಹೊಂಗಲ ಪಟ್ಟಣದಿಂದ ಕೇವಲ 8 ಕಿ.ಮೀ ಅಂತರದಲ್ಲಿದೆ. ಇದೇ ಕ್ಷೇತ್ರದಲ್ಲಿದ್ದರೂ ಇದುವರೆಗೂ ಯಾವುದೇ ನೀರಾವರಿ ಸೌಲಭ್ಯವಾಗಿಲ್ಲ. ಬಹುತೇಕ ಕಾಲುವೆಗಳು ದುಸ್ಥಿತಿ ತಲುಪಿವೆ. ದುರಸ್ತಿಗೆ ಆದ್ಯತೆ ನೀಡಿ ಕೊನೆಯ ಹಂತದವರೆಗೂ ನೀರು ಹರಿಸಲು ಕ್ರಮವಹಿಸಬೇಕಿದೆ. ನಯಾನಗರ ಗ್ರಾಮದ ಮಲಪ್ರಭಾ ನದಿಯಲ್ಲಿನ ಹೊಳು ತೆಗೆಯುವ ಮೂಲಕ ಬೇಸಿಗೆ ದಿನಗಳಲ್ಲಿ ನದಿ ನೀರು ಕಡಿಮೆ ಆಗದಂತೆ ತಡೆದು ನೀರು ಸಂಗ್ರಹಿಸುವ ಕಾರ್ಯವಾಗಬೇಕು. ಶಾಶ್ವತ ನೀರಾವರಿ ಯೋಜನೆಯ ಸೌಲಭ್ಯ ಕಲ್ಪಿಸಬೇಕಿದೆ.

ಬಜಾರ್‌ ರಸ್ತೆ ವಿಸ್ತರಣೆ ಕನಸು:

ಪಟ್ಟಣದ ಬೆಳಗಾವಿ ರಸ್ತೆಯ ಚನ್ನಮ್ಮನ ವೃತ್ತದಿಂದ ರಾಯಣ್ಣ ವೃತ್ತ ಹಾಗೂ ರಾಯಣ್ಣ ವೃತ್ತದಿಂದ ಬಜಾರ್‌ ರಸ್ತೆಯ ಅಂಬೇಡ್ಕರ್‌ ಉದ್ಯಾನದವರೆಗೆ ಸಂಚಾರ ಸಮಸ್ಯೆ ಉಂಟಾಗಿದೆ. ರಾಯಣ್ಣ ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ಸಂಚಾರ ಸಮಸ್ಯೆ ನೀಗಿಸಬೇಕಿದೆ.

2011ರ ಜನಗಣತಿ ಪ್ರಕಾರ ಬೈಲಹೊಂಗಲ ಪಟ್ಟಣದಲ್ಲಿ 49,182 ಜನರು ವಾಸ ಮಾಡುತ್ತಿದ್ದರು. ಈಗ ಇನ್ನೂ ಹೆಚ್ಚಾಗಿದೆ. ಇಷ್ಟು ದೊಡ್ಡ ನಗರವನ್ನು ನಗರಸಭೆ ಆಗಿ ಪರಿವರ್ತಿಸಿ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ.

ಗ್ರಾಮೀಣ ಬೇಡಿಕೆಗಳೇನು:

ಬೀದರಗಡ್ಡಿ, ಬುಡರಕಟ್ಟಿ, ಬೆಳವಡಿ ಭಾಗದಲ್ಲಿ ಮಲಪ್ರಭಾ ನದಿಯಿಂದ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಮುರಗೋಡ, ಚಚಡಿ ಏತ ನೀರಾವರಿ ಯೋಜನೆ ಸರಿಯಾಗಿ ಜಾರಿಗೊಂಡಿಲ್ಲ. ಹೆಸರಿಗೆ ಮಾತ್ರ ಯೋಜನೆ ಆಗಿದೆ. ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮೊದಲಿನ ಗತ ವೈಭವ ಸೃಷ್ಟಿಯಾಗಬೇಕಿದೆ. ರೈತರಿಗೆ ಸಹಕಾರಿ ಆಗುವ ದೃಷ್ಟಿಯಲ್ಲಿ ಮರಳಿ ವ್ಯಾಪಾರ, ವಹಿವಾಟು ನಡೆಯಬೇಕಿದೆ ಎನ್ನುತ್ತಾರೆ ಜನ.

ಸವದತ್ತಿ ತಾಲ್ಲೂಕಿನ 32 ಹಳ್ಳಿಗಳಲ್ಲಿ ಬಹುಬೇಡಿಕೆಯ ಹಳ್ಳಿಗಳನ್ನು ಬೈಲಹೊಂಗಲ ತಾಲ್ಲೂಕಿಗೆ ಸೇರ್ಪಡೆಗೊಳ್ಳಬೇಕು. ಆಗದಿದ್ದರೆ ಮುರಗೋಡ ತಾಲ್ಲೂಕು ರಚನೆಯಾಗಬೇಕು. ಇದು ಬಹು ದಿನಗಳ ಬೇಡಿಕೆಯಾಗಿದೆ. ಬೈಲಹೊಂಗಲ ಪಟ್ಟಣದಲ್ಲಿ ರಿಂಗ್ ರೋಡ್ ನಿರ್ಮಾಣ ಆದಷ್ಟು ಬೇಗ ಆಗಬೇಕು. ರೈತ ಭವನದಲ್ಲಿ ತರಕಾರಿ ಮಾರುಕಟ್ಟೆ ಉನ್ನತೀಕರಿಸಬೇಕು ಎನ್ನುತ್ತಾರೆ ಜನ.

 ಮಹಾಂತೇಶ ಕೌಜಲಗಿಸಂಗೊಳ್ಳಿಯಲ್ಲಿ ಸೈನಿಕ ಶಾಲೆ ರಾಕ್ ಗಾರ್ಡನ್‌ ಮಲಪ್ರಭಾ ನದಿಯಿಂದ ಬೈಲಹೊಂಗಲದವರೆಗೆ ಕುಡಿಯುವ ನೀರು ಯೋಜನೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳಾಗಿವೆ. ಕ್ಷೇತ್ರದ ಜನರ ಆರೋಗ್ಯದ ಹಿತದೃಷ್ಠಿಯಿಂದ ಬರುವ ದಿನಗಳಲ್ಲಿ ಆರೋಗ್ಯ ಶಿಕ್ಷಣ ಕುಡಿಯುವ ನೀರು ನೀರಾವರಿ ಯೋಜನೆಗೆ ಮೂಲ ಆದ್ಯತೆ ನೀಡುವ ಮೂಲಕ ಕ್ಷೇತ್ರದ ಜನರಿಗೆ ಮೂಲಸೌಕರ್ಯ ಕಲ್ಪಿಸಲಾಗುವುದು. ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳ ರಾಷ್ಟ್ರೀಯ ಸ್ಮಾರಕವನ್ನಾಗಿಸಬೇಕೆಂಬ ಕೂಗು ದಶಕಗಳಿಂದ ಇದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವೆ ಎನ್ನುತ್ತಾರೆ ಶಾಸಕ ಮಹಾಂತೇಶ ಕೌಜಲಗಿ.


Spread the love

About Laxminews 24x7

Check Also

ಬೆಂ.ಗ್ರಾದಲ್ಲಿ ಕಾಂಗ್ರೆಸ್​ನಿಂದ ಗ್ಯಾರಂಟಿ ಕಾರ್ಡ್​​ ಹಂಚಿಕೆ ಆರೋಪ; BJP-JDS ಕಾರ್ಯಕರ್ತರ ಮೇಲೆ ಹಲ್ಲೆ!

Spread the love ರಾಮನಗರ: ಬೆಂಗಳೂರು ಗ್ರಾಮಾಂತರದ (Bengaluru Rural) ರಾಮನಗರದಲ್ಲಿ (Ramanagara) ಕಾಂಗ್ರೆಸ್ ಕಾರ್ಯಕರ್ತರು, ಡಿಸಿಎಂ ಡಿಕೆ ಶಿವಕುಮಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ