ಒಂದೆಡೆ ಕಲಬುರಗಿಯಲ್ಲಿ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯಕ್ಕಾಗಿ ಆಗ್ರಹಿಸಲಾಗುತ್ತಿದ್ದು, ಬೆಳಗಾವಿಯಲ್ಲಿ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ನಾಡದ್ರೋಹಿ ಎಂಇಎಸ್‌ನಿಂದ ಕರಾಳ ದಿನಾಚರಣೆ ಆಚರಿಸುತ್ತಿದೆ. ಈ ಎಲ್ಲ ನಿಟ್ಟಿನಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಕಲಬುರಗಿ: ಕನ್ನಡ ಮಾತನಾಡುವ ಪ್ರದೇಶಗಳು ಭೌಗೋಳಿಕವಾಗಿ ಒಂದುಗೂಡಿದ ಹೆಮ್ಮೆಯ ದಿನವಿಂದು. ನಾಡಿನ ಸಮಸ್ತ ಜನರು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿದ್ದರೆ ಕಲಬುರಗಿಯಲ್ಲಿ ಪ್ರತ್ಯೇಕ ಕಲ್ಯಾಣ ರಾಜ್ಯಕ್ಕಾಗಿ ಆಗ್ರಹಿಸಲಾಗುತ್ತಿದೆ. ಮಾತ್ರವಲ್ಲದೆ ಇಂದು ಪ್ರತ್ಯೇಕ ರಾಜ್ಯ ಧ್ವಜಾರೋಹಣ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ, ಇನ್ನೊಂದೆಡೆ ಬೆಳಗಾವಿಯಲ್ಲಿ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ನಾಡದ್ರೋಹಿ ಎಂಇಎಸ್‌ನಿಂದ ಕರಾಳ ದಿನಾಚರಣೆ ಆಚರಿಸಲಾಗುತ್ತಿದೆ.
ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಕರ್ನಾಟಕ ರಾಜೋತ್ಸವ ದಿನದಂದೆ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತಿದ್ದು, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸಿದ್ಧತೆ ನಡೆಸಿದೆ. ಇಂದು ಮುಂಜಾನೆ 7.30 ಕ್ಕೆ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡುವುದಾಗಿ ಸಮಿತಿ ಸದಸ್ಯರು ಹೇಳಿದ್ದರು. ಕಲಬುರಗಿ ನಗರದ ಸರ್ಧಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಧ್ವಜಾರೋಹಣ ಮಾಡಲು ಮುಂದಾಗಿದ್ದರು. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯಿಂದ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಹಿನ್ನೆಲೆ ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತ ಸೇರಿ ನಗರದಲ್ಲಿ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.