Breaking News

ಕಿತ್ತೂರು ಉತ್ಸವದಲ್ಲಿ ತೋಟಗಾರಿಕಾ ಇಲಾಖೆ, ಬೆಳಗಾವಿ ಜಿ.ಪಂ. ಸಹಯೋಗದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಿದ್ದು, ಗಮನ ಸೆಳೆಯುತ್ತಿದೆ.

Spread the love

ಬೆಳಗಾವಿ: ಸಿರಿಧಾನ್ಯಗಳಲ್ಲಿ ತಯಾರಿಸಿರುವ ವೀರರಾಣಿ ಕಿತ್ತೂರು‌ ಚನ್ನಮ್ಮಾಜಿಯ ಅಶ್ವಾರೂಢ ಮೂರ್ತಿ ಕಿತ್ತೂರು ಉತ್ಸವದ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿದೆ.

ತರಕಾರಿ, ಹೂವುಗಳಿಂದ ತಯಾರಿಸಿದ ನಾನಾ ರೀತಿಯ ಕಲಾಕೃತಿಗಳು ಜನರ ಕುತೂಹಲ ಕೆರಳಿಸಿವೆ. ಸಿರಿಧಾನ್ಯಗಳಾದ ಜೋಳ, ಸಜ್ಜೆ, ನವನೆ, ರಾಗಿ, ಚನ್ನಂಗಿ ಬೇಳೆಗಳನ್ನು ಬಳಸಿ ತಯಾರಿಸಿರುವ 6.5 ಅಡಿ ಎತ್ತರದ ಚನ್ನಮ್ಮಾಜಿ ವಿಗ್ರಹವನ್ನು ಕಲಾವಿದ ಶಿವಲಿಂಗಪ್ಪ ಬಡಿಗೇರ ರಚಿಸಿದ್ದಾರೆ.

ಕಲ್ಲಂಗಡಿಯಲ್ಲಿ ಮಹನೀಯರ ಚಿತ್ರಗಳು: ಕಲ್ಲಂಗಡಿ ಹಣ್ಣಿನಲ್ಲಿ ಅರಳಿರುವ ರಾಣಿ ಚನ್ನಮ್ಮ‌, ಸಂಗೊಳ್ಳಿ ರಾಯಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಡಾ. ರಾಜ್‌ಕುಮಾರ್, ಡಾ.ಪುನೀತ್‌ ರಾಜ್‌ಕುಮಾರ್, ಕಾಂತಾರ ಚಿತ್ರಗಳು ಎಲ್ಲರನ್ನೂ ಕೈಬೀಸಿ ಕರೆಯುತ್ತಿವೆ. ಕುಂಬಳಕಾಯಿಯಲ್ಲಿ ಕೆತ್ತಿದ ವಿವಿಧ ಕಲಾಕೃತಿಗಳು, ಬದನೆ, ಮೂಲಂಗಿ, ಗಜ್ಜರಿ, ಸೌತೆಕಾಯಿ, ಅಲಂಕಾರಿಕ ಅಸ್ಪರಾಗಸ್ ಬಳ್ಳಿಯಿಂದ ರಚನೆಯಾದ ನವಿಲು, ಸೋರೆಕಾಯಿ ಮತ್ತು ಹಾಗಲ ಕಾಯಿಯಿಂದ ತಯಾರಿಸಿರುವ ಮೊಸಳೆ ಕಲಾಕೃತಿಗಳು ವಿಶೇಷವಾಗಿವೆ.

ಜರ್ಬೆರಾ, ಬಟನ್ ರೋಜ್, ಕಾರ್ನೇಶನ್ ಹೂವುಗಳಿಂದ ತಯಾರಿಸಿರುವ ಭೂಮಂಡಲದ ಚಿತ್ರವನ್ನು ಇಲ್ಲಿ ನೋಡಬಹುದು. ಸೇವಂತಿ, ಬಟನ್ ರೋಜ್ ಹೂವುಗಳಿಂದ ಕಪ್ಪು ಮತ್ತು ಸಾಸರ್ ರಚಿಸಲಾಗಿದೆ. ಒಂದು ಕಪ್ಪಿನಲ್ಲಿ ಹಾಲು ಮತ್ತೊಂದು ಕಪ್ಪಿನಲ್ಲಿ ಕಾಫಿ ಸುರಿಯುವಂತೆ ತಯಾರಿಸಲಾಗಿದೆ. ಥರ್ಮಾಕೋಲ್​ನಿಂದ ಮತ್ಸ್ಯ ಕನ್ಯೆಯ ಪ್ರತಿರೂಪ ನಿರ್ಮಿಸಲಾಗಿದೆ. ಸೇವಂತಿ, ಆರ್ಕಿಡ್, ಆಂಥೂರಿಯಮ್ ಹೂವುಗಳನ್ನು ಇದಕ್ಕಾಗಿ ಬಳಸಲಾಗಿದೆ. ನಮ್ಮ ಹೆಮ್ಮೆಯ ಕರ್ನಾಟಕ ಘೋಷವಾಕ್ಯದೊಂದಿಗೆ ರೋಜ್ ಬಟನ್ ಮತ್ತು ಹಳದಿ ಸೇವಂತಿ ಹೂವುಗಳಿಂದ ಕರ್ನಾಟಕದ ಭೂಪಟ ರಚಿಸಿದ್ದು ಆಕರ್ಷಣೀಯವಾಗಿದೆ.

ರಂಗೋಲಿಯಲ್ಲಿ ಬಾಳಪ್ಪ, ರಾಯಣ್ಣ: ಕಿತ್ತೂರು ನಾಡಿನ ಕಲಿಗಳಾದ ಅಮಟೂರ ಬಾಳಪ್ಪ ಮತ್ತು ಸಂಗೊಳ್ಳಿ ರಾಯಣ್ಣನ ಭಾವಚಿತ್ರಗಳನ್ನು ರಂಗೋಲಿಯಿಂದ ರಚಿಸಿದ್ದು ಫಲಪುಷ್ಪ ಪ್ರದರ್ಶನದ ಮತ್ತೊಂದು ವಿಶೇಷತೆ.

ಸಹಾಯಕ ತೋಟಗಾರಿಕಾ ಅಧಿಕಾರಿ ಅಶ್ವಿನಿ ಯದ್ದಲಗುಂಡಿ ಅವರು ಈಟಿವಿ ಭಾರತ ಜತೆಗೆ ಮಾತನಾಡಿ, “ಫಲಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿನ ಕಲಾಕೃತಿಗಳನ್ನು ನೋಡಿ ಜನ ಖುಷಿಪಡುತ್ತಿದ್ದಾರೆ” ಎಂದು ತಿಳಿಸಿದರು.

ಚಿಕ್ಕ ಹಟ್ಟಿಹೊಳಿಯಿಂದ ಉತ್ಸವಕ್ಕೆ ಆಗಮಿಸಿರುವ ವಿದ್ಯಾರ್ಥಿನಿ ಲಕ್ಷ್ಮೀ ಮಾತನಾಡಿ, “ಸಿರಿಧಾನ್ಯಗಳಿಂದ ತಯಾರಿಸಿರುವ ರಾಣಿ ಚನ್ನಮ್ಮಾಜಿ ಮೂರ್ತಿ ವಿಶಿಷ್ಟವಾಗಿದೆ‌. ಇಂತಹ ಅದ್ಭುತ ಕಲಾಕೃತಿಗಳನ್ನು ತಯಾರಿಸಿರುವ ಈ ಕಲಾವಿದರಿಗೆ ರಾಜ್ಯಮಟ್ಟದಲ್ಲಿ ಪ್ರಾಶಸ್ತ್ಯ‌ ನೀಡಬೇಕು” ಎಂದು ಹೇಳಿದರು.


Spread the love

About Laxminews 24x7

Check Also

ಹರಗಾಪುರ: ಗುಡ್ಡ ಕುಸಿತ, ಪ್ರಾಣಾಪಾಯ ಇಲ್ಲ

Spread the love ಹುಕ್ಕೇರಿ: ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಹರಗಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗುಡ್ಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ