ಪುತ್ತೂರು(ಡಿಸೆಂಬರ್. 22): ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಸವಣೂರು ಸಮೀಪದ ನಿವಾಸಿಯಾಗಿರುವ ಪಿಯುಸಿ ಓದುತ್ತಿರುವ ಬಾಲಕಿಗೆ ಸಾಮಾಜಿಕ ಜಾಲತಾಣದಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಪ್ರೀತಿಸುವಂತೆ ಕಿರುಕುಳ ಕೊಡುತ್ತಿದ್ದ ಆರೋಪದ ಮೇರೆಗೆ ಸವಣೂರಿನ ಮೆಸ್ಕಾಂ ಸಿಬ್ಬಂದಿಯೊಬ್ಬನನ್ನು ಪೋಕ್ಸೋ ಕಾಯ್ದೆಯಡಿ ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ಪೋಷಕರ ದೂರಿನ ಹಿನ್ನಲೆಯಲ್ಲಿ ಪೊಲೀಸರು ಮೆಸ್ಕಾಂ ಉದ್ಯೋಗಿಯಾಗಿರುವ ಸೊಯೂಬ್ ಕೊತ್ವಾಲ್ ಎಂಬಾತನನ್ನು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ಮೂಲಕ ಪ್ರೀತಿಸುವಂತೆ ಕಿರುಕುಳ ಕೊಡುತ್ತಿರುವುದಲ್ಲದೆ, ಬಾಲಕಿಗೆ ಅಸಭ್ಯವಾಗಿ ಸಂದೇಶ ರವಾನಿಸುತ್ತಿದ್ದ ಎಂದು ದೂರಲಾಗಿದೆ. ಅನ್ಯಜಾತಿಯ ಬಾಲಕಿಯನ್ನು ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದ ಎಂದು ಬಾಲಕಿ ದೂರಿನಲ್ಲಿ ಆರೋಪಿಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯಿಂದ ಮಾಹಿತಿ ಪಡೆದ ಪೋಷಕರು ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.
ಸೋಯೂಬ್ ಯುವತಿಗೆ ಮೆಸೆಜ್ ಮೂಲಕ ಕಿರುಕುಳ ಹಾಗೂ ಉಡುಗೊರೆ ಪಡೆಯುವಂತೆ ಒತ್ತಾಯಿಸುತ್ತಿದ್ದ ಸಂದೇಶಗಳು ಮೊಬೈಲ್ ನಲ್ಲಿ ದಾಖಲಾಗಿದ್ದು, ಮೊಬೈಲ್ ಸಂದೇಶ ಆಧಾರದಲ್ಲಿ ಪೋಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.