Breaking News
Home / ಜಿಲ್ಲೆ / ಬೆಂಗಳೂರು / ಇಲ್ಲಿದೆ ಮುತ್ತಪ್ಪ ರೈ ಬದುಕಿನ ಅಸಲಿ ಕಹಾನಿ………..

ಇಲ್ಲಿದೆ ಮುತ್ತಪ್ಪ ರೈ ಬದುಕಿನ ಅಸಲಿ ಕಹಾನಿ………..

Spread the love

ಬೆಂಗಳೂರು, ಮೇ 15- ಆಕಸ್ಮಿಕವಾಗಿ ಅಪರಾಧ ಜಗತ್ತಿಗೆ ಕಾಲಿಟ್ಟು ಸಮಾಜ ಸೇವಕರಾಗಿ ಪರಿವರ್ತನೆಗೊಂಡು ಜನಸೇವೆಯಲ್ಲಿ ನಿರತರಾದ ಮುತ್ತಪ್ಪ ರೈ ಅವರ ಇತಿಹಾಸವೇ ರೋಚಕ. ಪುತ್ತೂರಿನಲ್ಲಿ ಸುಸಂಸ್ಕøತ ಕುಟುಂಬದ ನೆತ್ತಾಲ ನಾರಾಯಣ ರೈ ಮತ್ತು ಸುಶೀಲಾ ರೈ ದಂಪತಿ ಪುತ್ರನಾಗಿ ಜನಿಸಿದ ನೆತ್ತಾಲ ಮುತ್ತಪ್ಪ ರೈ ಅವರು ಬ್ಯಾಂಕ್ ಉದ್ಯೋಗಿಯಾಗಿದ್ದು, ದುರದೃಷ್ಟವಶಾತ್ ಅಪರಾಧ ಜಗತ್ತಿಗೆ ಕಾಲಿಡುವ ಸನ್ನಿವೇಶ ಎದುರಾಯಿತು.

ಸಕಲೇಶಪುರದ ಕಾಫಿ ಎಸ್ಟೇಟ್ ವಿವಾದದ ಮೂಲಕ ಆಕಸ್ಮಿಕವಾಗಿ ಅಪರಾಧ ಜಗತ್ತಿಗೆ ಇಳಿದ ಮುತ್ತಪ್ಪ ರೈ ನಂತರ ತಮ್ಮ ವಾಸ್ತವ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸಿ ಬ್ರಿಗೇಡ್ ರಸ್ತೆಯಲ್ಲಿ ಕಚೇರಿ ತೆರೆದು ರಿಯಲ್ ಎಸ್ಟೇಟ್ ವ್ಯವಹಾರ ಆರಂಭಿಸಿದರು.

1993-94ರ ಕಾಲದಲ್ಲಿ ಬೆಂಗಳೂರಿನಲ್ಲಿ ರೌಡಿ ಚಟುವಟಿಕೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಎನ್‍ಕೌಂಟರ್ ಕಾರ್ಯಾಚರಣೆ ಆರಂಭಿಸಿದರು. ಹೀಗಾಗಿ ರೈ ಅವರು ಬೆಂಗಳೂರಿನಿಂದ ಮುಂಬೈಗೆ ಸ್ಥಳಾಂತರಗೊಂಡರು. ಮಂಗಳೂರಿನಿಂದ ಬೆಂಗಳೂರು, ಬೆಂಗಳೂರಿನಿಂದ ಮುಂಬೈ, ಮುಂಬೈನಿಂದ ದುಬೈಗೆ ತೆರಳಿ ದೇಶದ್ರೋಹಿ ದಾವೂದ್ ಇಬ್ರಾಹಿಂ ಅವರನ್ನು ಎದುರು ಹಾಕಿಕೊಂಡು ಭೂಗತ ಲೋಕದ ಹಲವಾರು ಪಾತಕಗಳನ್ನು ಕಣ್ಣಾರೆ ಕಂಡವರು ಮುತ್ತಪ್ಪ ರೈ.

ಡಾಲ್ಫಿನ್ ರಿಗೊ ಜೋಸೆಫ್ ಹೆಸರಿನಲ್ಲಿ ನಕಲಿ ಪಾಸ್‍ಪೋರ್ಟ್ ಬಳಸಿ ಮುಂಬೈನಿಂದ ದುಬೈಗೆ ತೆರಳಿ ನೆಲೆ ಕಂಡುಕೊಂಡಿದ್ದ ರೈ ಅವರನ್ನು 2002ರಲ್ಲಿ ದುಬೈ ಪೊಲೀಸರು ಬಂಧಿಸುವವರೆಗೂ ಅವರನ್ನು ಮುತ್ತಪ್ಪ ರೈ ಎಂದು ಯಾರೂ ಗುರುತಿಸಿರಲಿಲ್ಲ.

ದುಬೈ ಪೊಲೀಸರು ರೈ ನಮ್ಮ ದೇಶದಲ್ಲಿರುವ ವಿಷಯವನ್ನು ಕರ್ನಾಟಕ ಪೊಲೀಸರಿಗೆ ಮುಟ್ಟಿಸಿದ್ದರು. ಅಂದಿನ ಡಿಸಿಪಿ ಕ್ರೈಂ ರವೀಂದ್ರ ಪ್ರಸಾದ್ ಹಾಗೂ ಸಿಸಿಬಿ ಇನ್ಸ್‍ಪೆಕ್ಟರ್‍ಗಳಾದ ಎಸ್.ಕೆ.ಉಮೇಶ್ ಮತ್ತು ಗಾಂವ್ಕರ್ ಅವರು ದುಬೈಗೆ ತೆರಳಿ ರೈ ಅವರನ್ನು ಬೆಂಗಳೂರಿಗೆ ಕರೆತಂದರು.

ಆ ಸಂದರ್ಭದಲ್ಲಿ ರೈ ವಿರುದ್ಧ ಬಿಲ್ಡರ್ ಸುಬ್ಬರಾಜು ಕೊಲೆ ಪ್ರಕರಣ ಸೇರಿದಂತೆ 12 ಪ್ರಕರಣಗಳು ದಾಖಲಾಗಿದ್ದವು. ನಂತರ ಅವರ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳೂ ಖುಲಾಸೆಗೊಂಡ ನಂತರ ಜನಸೇವೆ ಮಾಡಬೇಕು ಎಂಬ ಉದ್ದೇಶದಿಂದ ಜಯಕರ್ನಾಟಕ ಸಂಘಟನೆ ಸ್ಥಾಪಿಸಿ ರಾಜ್ಯದ ಜನರ ಒಳಿತಿಗಾಗಿ ತಮ್ಮನ್ನೇ ತೊಡಗಿಸಿಕೊಂಡರು.

ರಾಜ್ಯಾದ್ಯಂತ ಯುವ ಪಡೆಯನ್ನು ಕಟ್ಟಿಕೊಂಡು ಜನರ ಶೋಷಣೆ ಮಾಡುವವರ ವಿರುದ್ಧ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪುತ್ತೂರಿನಲ್ಲಿ ಬೆಳೆದು ದುಬೈವರೆಗಿನ ಅವರ ಜೀವನ ಕಥೆಯನ್ನಾಧರಿಸಿ ಬಾಲಿವುಡ್ ಖ್ಯಾತ ನಿರ್ಮಾಪಕ ರಾಮ್‍ಗೋಪಾಲ್ ವರ್ಮ ಅವರು ರೈ ಹೆಸರಿನಲ್ಲಿ ಚಲನಚಿತ್ರ ನಿರ್ಮಾಣ ಮಾಡಿದ್ದರು.

ಈ ಚಿತ್ರ ಮಂಗಳೂರು, ಬೆಂಗಳೂರು, ಮುಂಬೈ, ದುಬೈ ಮತ್ತು ಲಂಡನ್‍ನಲ್ಲಿ ಚಿತ್ರೀಕರಣಗೊಂಡಿದ್ದು ವಿಶೇಷವಾಗಿತ್ತು.ಕಂಚಿಲ್ದಾ ಬಾಲೆ ಎಂಬ ತುಳು ಚಿತ್ರದಲ್ಲಿ ಸ್ವತಃ ಮುತ್ತಪ್ಪ ರೈ ಅವರೇ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.

ದಾವೂದ್ ಇಬ್ರಾಹಿಂ ಅವರಿಂದ ಜೀವ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಶತ್ರುಗಳಿಂದ ರಕ್ಷಿಸಿಕೊಳ್ಳಲು ತಮ್ಮ ಸುತ್ತ ರಕ್ಷಣಾ ಕೋಟೆಯನ್ನೇ ನಿರ್ಮಿಸಿಕೊಂಡಿದ್ದರು.
ರೇಖಾ ರೈ ಅವರನ್ನು ವಿವಾಹವಾಗಿದ್ದ ಮುತ್ತಪ್ಪ ರೈ ಅವರಿಗೆ ರಿಕ್ಕಿ ಮತ್ತು ರಾಖಿ ಎಂಬ ಇಬ್ಬರು ಗಂಡುಮಕ್ಕಳಿದ್ದು, ಅವರು ವಿದೇಶದಲ್ಲಿ ವ್ಯಾಸಂಗ ಮುಗಿಸಿದ್ದಾರೆ.

2013ರಲ್ಲಿ ರೇಖಾ ರೈ ನಿಧನರಾದ ನಂತರ ತಮ್ಮ ಸಂಪೂರ್ಣ ಜೀವನವನ್ನು ಸಮಾಜಸೇವೆಗೆ ಮುಡುಪಾಗಿರಿಸಿದ್ದ ಮುತ್ತಪ್ಪ ರೈ ಅವರು ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಉಡುಪಿಯ ಶ್ರೀಕೃಷ್ಣ ಮಠಕ್ಕೆ ರಥ ಸಮರ್ಪಣೆ ಮಾಡುವುದರ ಜತೆಗೆ ಬಡವರ ಕಣ್ಣೀರು ಒರೆಸುವ ಹಲವಾರು ಯೋಜನೆಗಳಲ್ಲೂ ಗುರುತಿಸಿಕೊಂಡಿದ್ದರು.

ಆಕಸ್ಮಿಕವಾಗಿ ಅಪರಾಧ ಜಗತ್ತಿಗೆ ಕಾಲಿಟ್ಟು ಸಮಾಜಸೇವಕರಾಗಿ ಪರಿವರ್ತನೆಗೊಂಡ ಮುತ್ತಪ್ಪ ರೈ ಅವರು ಇಂದು ನಿಧನರಾಗುವ ಮೂಲಕ ಅವರ ರೋಚಕ ಅಧ್ಯಯನ ಅಂತ್ಯಗೊಂಡಂತಾಗಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ