Home / ಜಿಲ್ಲೆ / ಬೆಂಗಳೂರು / ಸಚಿವ ಸಂಪುಟ ಸಭೆಯಲ್ಲಿ ಸಚಿವರಾದ ಮಾಧುಸ್ವಾಮಿ-ವಿ.ಸೋಮಣ್ಣ ನಡುವೆ ಫೈಟ್..!

ಸಚಿವ ಸಂಪುಟ ಸಭೆಯಲ್ಲಿ ಸಚಿವರಾದ ಮಾಧುಸ್ವಾಮಿ-ವಿ.ಸೋಮಣ್ಣ ನಡುವೆ ಫೈಟ್..!

Spread the love

ಬೆಂಗಳೂರು, -ಬೆಂಗಳೂರು ಮಹಾನಗರದಲ್ಲಿ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಸಂಬಂಧ ಇಬ್ಬರು ಸಚಿವರ ನಡುವೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರೀ ಮಾತಿನ ಚಕಮಕಿ ನಡೆದಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ನಗರಾಭಿವೃದ್ಧಿ ಸಚಿವ ವಿ.ಸೋಮಣ್ಣ ನಡುವೆ ಪರಸ್ಪರ ಏಕವಚನದ ಬೈಗುಳ ನಡೆದಿದೆ.
ಒಂದು ಹಂತದಲ್ಲಿ ಸೋಮಣ್ಣ ಮತ್ತು ಮಾಧುಸ್ವಾಮಿ ನಡುವೆ ಏಕವಚನದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಯುತ್ತಿದ್ದ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಧ್ಯ ಪ್ರವೇಶಿಸಿ ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವೇ ಹೀಗೆ ಕಿತ್ತಾಡಿಕೊಂಡರೆ ಹೇಗೆ ಎಂದು ಸಮಾಧಾನಪಡಿಸಿದ್ದಾರೆ.

ನಡೆದದ್ದೇನು? ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ಕರೆಯಲಾಗಿತ್ತು. ಬೆಂಗಳೂರು ಮಹಾನಗರದಲ್ಲಿ ಬಿಡಿಎ ಕಾಯ್ದೆ ಉಲ್ಲಂಘನೆ ಮಾಡಿ ಮನೆ ಕಟ್ಟಿಕೊಂಡಿರುವವರಿಗೆ ದಂಡ ಕಟ್ಟಿಸಿಕೊಂಡು ಕಾನೂನುಬದ್ಧ ಮಾಡುವ ವಿಷಯದಲ್ಲೇ ಕಿತ್ತಾಟ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಮನೆ ಕಟ್ಟಿಸಿಕೊಂಡು 12 ವರ್ಷವಾದರೆ ಅಂತಹವರಿಗೆ ನಿರ್ದಿಷ್ಟ ಪ್ರಮಾಣದ ದಂಡ ವಿಧಿಸಿ ಕಾನೂನುಬದ್ಧಗೊಳಿಸಲು ಮಾಧುಸ್ವಾಮಿ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸೋಮಣ್ಣ, ಸದ್ಯದ ಪರಿಸ್ಥಿತಿಯಲ್ಲಿ ಅನುಷ್ಠಾನ ಮಾಡುವುದು ಬೇಡ.

ಮೊದಲೇ ಕೊರೊನಾ ಬಂದು ಲಾಕ್‍ಡೌನ್ ಜಾರಿಯಾದ ಪರಿಣಾಮ ಜನರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕಟ್ಟಡಗಳಿಗೆ ದಂಡ ವಿಧಿಸಲು ಮುಂದಾದರೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಸೋಮಣ್ಣ ಮನವರಿಕೆ ಮಾಡುವ ಪ್ರಯತ್ನ ಮಾಡಿದರು.

ನಾನು ಇರುವ ಕಾನೂನಿನ ಬಗ್ಗೆ ಮಾತನಾಡಿದ್ದೇನೆ. ನಿಮ್ಮ ರಾಜಕೀಯ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮಾತನಾಡಿದರೆ ನಾನೇನು ಮಾಡಲಿ ಎಂದು ಸೋಮಣ್ಣಗೆ ಮಾಧುಸ್ವಾಮಿ ತಿರುಗೇಟು ನೀಡಿದರು.

ಕಟ್ಟಡಗಳನ್ನು ಕಾನೂನುಬದ್ಧ ಮಾಡಿ ನಿಮಗೆ ರಾಜಕೀಯವಾಗಿ ಹಿನ್ನಡೆಯಾಗಬಹುದು ಎಂಬ ನಿಮ್ಮ ಉದ್ದೇಶವಾಗಿದೆ. ದಂಡ ವಿಧಿಸಿದರೆ ಬೊಕ್ಕಸಕ್ಕೆ ಆದಾಯ ಬರಲಿದೆ. ಅದನ್ನುತಡೆಗಟ್ಟಬೇಕೆ ಎಂದು ಪ್ರಶ್ನಿಸಿದರು.

ನಿನಗೆ ಬೆಂಗಳೂರಿನ ರಾಜಕೀಯ ಗೊತ್ತಿಲ್ಲ. ಕಟ್ಟಡಗಳಿಗೆ ದಂಡ ವಿಧಿಸಿದರೆ ನಮ್ಮ ಎದುರಾಳಿಗಳು ಅದನ್ನೇ ಅಸ್ತ್ರ ಮಾಡಿಕೊಳ್ಳುತ್ತಾರೆ. ನಾವು ರಾಜಕೀಯವಾಗಿ ನಿರ್ನಾಮವಾಗಬೇಕೆ ಎಂದು ಸೋಮಣ್ಣ ಮಾಧುಸ್ವಾಮಿ ವಿರುದ್ಧ ತಿರುಗಿಬಿದ್ದರು.

ಬೆಂಗಳೂರು ನಿಮ್ಮಪ್ಪಂದೂ ಅಲ್ಲ, ನಮ್ಮಪ್ಪಂದೂ ಅಲ್ಲ. ಯಾರಿಗೆ ಹಿನ್ನಡೆಯಾಗುತ್ತದೆಯೋ, ಮುನ್ನಡೆಯಾಗುತ್ತದೋ ನಮಗೆ ಬೇಕಾಗಿಲ್ಲ. ಮುಖ್ಯಮಂತ್ರಿಗಳು ಹೇಳಿದಂತೆ ನಾನು ಇದನ್ನು ಜಾರಿ ಮಾಡಿದ್ದೇನೆ.

ಉಳಿದದ್ದು ನಿಮ್ಮ ಹಣೆಬರಹ ಎಂದು ಮಾಧುಸ್ವಾಮಿ ಸಭೆ ಎದ್ದು ಹೋಗಲು ಮುಂದಾದರು. ತಕ್ಷಣವೇ ಸಿಎಂ ಮಧ್ಯಪ್ರವೇಶಿಸಿ ಇಬ್ಬರಿಗೂ ಬುದ್ಧಿ ಹೇಳಿ ಸಮಾಧಾನಪಡಿಸಿದರು ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ