ಚಾಮರಾಜನಗರ- ಮೇ 3ರ ವರೆಗೆ ರಾಜ್ಯದ ಯಾವುದೇ ಭಾಗದಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ. ರಾಜ್ಯಕ್ಕೆ ಇದರಿಂದ ನಷ್ಟವಾಗುತ್ತಿದ್ದರೂ ಜನತೆ ಹಿತದೃಷ್ಟಿಯಿಂದ ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹಲವು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಬಳಿಕ ಸಭೆ ನಡೆಸಿ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಾಮಾಜಿಕ ಅಂತರವನ್ನು ಎಲ್ಲ ಕಡೆಯೂ ಕಾಯ್ದುಕೊಳ್ಳಲು ಎಷ್ಟೇ ಮನವಿ ಮಾಡಿದರೂ ಕೆಲವು ಕಡೆ ವಿಫಲವಾಗುತ್ತಿದೆ. ಇಂಥ ಸಂದರ್ಭದಲ್ಲಿ ಬಾರ್‍ಗಳನ್ನು ತೆರೆದರೆ ಕಥೆ ಏನು? ಈ ನಿಟ್ಟಿನಲ್ಲಿ ಸದ್ಯಕ್ಕೆ ಈ ನಿರ್ಧಾರ ಮಾಡಲಾಗಿಲ್ಲ ಎಂದು ಸಚಿವರು ತಿಳಿಸಿದರು.
ಕೇಂದ್ರ ಸರ್ಕಾರ 1 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು ಬೆಂಬಲ ಬೆಲೆ (ಕನಿಷ್ಠ ಬೆಂಬಲ ಬೆಲೆ) ಆಧಾರದಲ್ಲಿ ಖರೀದಿಸಲು ಅನುಮತಿ ನೀಡಿದೆ. ತೊಗರಿಯನ್ನು ಸರ್ಕಾರದಿಂದ ಕ್ವಿಂಟಾಲ್‍ಗೆ ತಲಾ 6100 ರೂ.ನಂತೆ (ಕೇಂದ್ರದಿಂದ 5,800 ರೂ. ಹಾಗೂ ರಾಜ್ಯದಿಂದ 300ರೂ.) ಬೆಂಬಲ ಬೆಲೆಯಾಗಿ ಖರೀದಿ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಾನೇ ಕರೆಸಿಕೊಂಡಿದ್ದೇನೆ. ಅವರ ತಂಡ ಮೈಸೂರು ಜಿಲ್ಲೆಯಲ್ಲಿ ಸುತ್ತಾಡಿ ಪರಿಶೀಲನೆ ನಡೆಸಿದೆ. ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅವರು ಸೂಚಿಸಿದ್ದಲ್ಲದೆ, ವೈದ್ಯಕೀಯವಾಗಿ ಬೇಕಾಗಿರುವ ಅಗತ್ಯ ನೆರವು ನೀಡಿದ್ದಾರೆ ಎಂದು ಸಚಿವರು ತಿಳಿಸಿದರು. ಬೆಂಗಳೂರಿನ ಪಾದರಾಯಣಪುರ ಘಟನೆ ಅಕ್ಷಮ್ಯ ಅಪರಾಧ.
ಇಂಥದ್ದನ್ನು ಸರ್ಕಾರ ಸಹಿಸದು. ಸುಶಿಕ್ಷಿತರು ಮಾಡುವಂತಹ ಕೃತ್ಯ ಇದಲ್ಲ. ಹೀಗಾಗಿ ಇವರ ಮೇಲೆ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 1.40 ಲಕ್ಷ ರೈತರಿಗೆ ಸಾಲಮನ್ನಾ ಮಾಡುವುದು ಬಾಕಿ ಇದ್ದು, ಅವರು ದಾಖಲಾತಿ ಸಲ್ಲಿಸಿದ ಮೇಲೆ ಪ್ರಕ್ರಿಯೆ ನಡೆಯುತ್ತಿದೆ.
ಸುಸ್ತಿಮನ್ನಾ ಅವಧಿಯನ್ನೂ ವಿಸ್ತರಿಸಲಾಗಿದೆ. ಅದರ ಬಡ್ಡಿದರವನ್ನು ಈ 3 ತಿಂಗಳು ಸರ್ಕಾರವೇ ಭರಿಸುವ ತೀರ್ಮಾನ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಎಪಿಎಂಸಿ ಆವರಣದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅಲ್ಲದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಹಾಗೂ ಸ್ಯಾನಿಟೈಸರ್‍ಗಳನ್ನು ರೈತರು ಹಾಗೂ ವರ್ತಕರಿಗೆ ಕಡ್ಡಾಯವಾಗಿ ವಿತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಎಪಿಎಂಸಿಯಲ್ಲಿ ಕೋಲ್ಡ್ ಸ್ಟೋರೇಜ್ ಬೇಕೆಂಬ ಮನವಿ ಬಂದಿದೆ. ಪ್ರಸ್ತಾವನೆ ಸಲ್ಲಿಸಿದರೆ ತತ್‍ಕ್ಷಣವೇ ಮಂಜೂರು ಮಾಡಿಕೊಡುತ್ತೇನೆ ಎಂದು ಸಚಿವರು ತಿಳಿಸಿದರು. ಬೆಲ್ಲದ ಮಾರಾಟದ ಬಗ್ಗೆ ಸಚಿವರು ಖುದ್ದು ಮಾಹಿತಿ ಪಡೆದುಕೊಂಡರು. ಶಾಸಕರಾದ ನಿರಂಜನ, ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ್ ಕುಮಾರ್ ಸಚಿವರ ಜತೆಗಿದ್ದರು.