Breaking News
Home / Uncategorized / ಸಾರ್ವಜನಿಕರು ಸುರಕ್ಷತೆಯ ಕಡೆಗೆ ಹೆಚ್ಚಿನ ಗಮನ ನೀಡಿಬಾಲಚಂದ್ರ ಜಾರಕಿಹೊಳಿಸೂಚನೆ ಮೇರೆಗೆ ನಡೆಸಿದ ಮುಂಜಾಗ್ರತಾ ಸಭೆ

ಸಾರ್ವಜನಿಕರು ಸುರಕ್ಷತೆಯ ಕಡೆಗೆ ಹೆಚ್ಚಿನ ಗಮನ ನೀಡಿಬಾಲಚಂದ್ರ ಜಾರಕಿಹೊಳಿಸೂಚನೆ ಮೇರೆಗೆ ನಡೆಸಿದ ಮುಂಜಾಗ್ರತಾ ಸಭೆ

Spread the love

ಗೋಕಾಕ : ವಿಶ್ವ ವ್ಯಾಪಿಯಾಗಿ ದಿನದಿಂದ ದಿನಕ್ಕೆ ಹರಡುತ್ತಿರುವ ಕೊರೋನಾ ವೈರಸ್ ಕೌಜಲಗಿಯ ಮಿರಾಳ ತೋಟಕ್ಕೂ ಪ್ರವೇಶಿಸಿದ್ದು, ಸಾರ್ವಜನಿಕರು ಸುರಕ್ಷತೆಯ ಕಡೆಗೆ ಹೆಚ್ಚಿನ ಗಮನ ನೀಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು.

ಶುಕ್ರವಾರದಂದು ತಾಲ್ಲೂಕಿನ ಕೌಜಲಗಿ ಗ್ರಾಪಂ ಕಾರ್ಯಾಲಯದ ಆವರಣದಲ್ಲಿ ಶಾಸಕ ಮತ್ತು ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಮೇರೆಗೆ ನಡೆಸಿದ ಮುಂಜಾಗ್ರತಾ ಸಭೆಯಲ್ಲಿ ಗ್ರಾಮಸ್ಥರನ್ನುದ್ಧೇಶಿಸಿ ಅವರು ಮಾತನಾಡಿದರು.
ಕೌಜಲಗಿ ಗ್ರಾಮದಿಂದ 3 ಕಿ.ಮೀ ಅಂತರದಲ್ಲಿರುವ ಮಿರಾಳ ತೋಟದ ಹತ್ತಿರ ಸೊಂಕಿತ ಬಾಲಕಿ ಕುಟುಂಬದ ಸುತ್ತಮುತ್ತಲಿನ 50 ಮೀಟರ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಸಂಬಂಧ 32 ಜನರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. 14 ದಿನಗಳವರೆಗೆ ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಲಾಗಿದೆ. ಒಂದು ವೇಳೆ ಸರ್ಕಾರದ ನಿಯಮವನ್ನು ಉಲ್ಲಂಘಿಸಿದರೇ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬರೂ ಸಾಮಾಜಿಕ ಅಂತರವನ್ನು ಕಾಪಾಡಬೇಕು. ಮಾಸ್ಕ್‍ಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಜೊತೆಗೆ ಸುರಕ್ಷತೆಗಾಗಿ ಸ್ಯಾನಿಟೈಜ್‍ರ್ ಬಳಸಬೇಕು. ನಾವು, ನಮ್ಮ ಕುಟುಂಬ ಮತ್ತು ಸಮಾಜವು ಆರೋಗ್ಯದಿಂದ ಸುರಕ್ಷಿತವಾಗಿರಬೇಕಾದರೇ ಸರ್ಕಾರದ ಎಲ್ಲ ನಿಯಮಗಳನ್ನು ಪರಿಪಾಲನೆ ಮಾಡುವಂತೆ ತಿಳಿಸಿದರು.

ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ದೂರವಾಣಿ ಕರೆ ಮಾಡಿ ಕೌಜಲಗಿಯಲ್ಲಿ ತುರ್ತು ಸಭೆ ನಡೆಸಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರ ಹಿನ್ನೆಲೆಯಲ್ಲಿ ಈ ಸಭೆಯನ್ನು ಕರೆಯಲಾಗಿದೆ. ಕೊರೋನಾ ಸಂದರ್ಭದಲ್ಲಿ ಕ್ಷೇತ್ರದಲ್ಲಿ ತಮ್ಮ ವೈಯಕ್ತಿಕ ಅನುದಾನದಲ್ಲಿ 2.50 ಲಕ್ಷ ಮಾಸ್ಕ್‍ಗಳನ್ನು ನೀಡಿದ್ದಾರೆ. ಪ್ರತಿ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು ವಿತರಿಸಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯವನ್ನು ಶ್ಲಾಘಿಸಿದರು.

ಮಿರಾಳ ತೋಟದಲ್ಲಿ ಕೊರೋನಾ ಸೊಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ನಾವೆಲ್ಲರೂ ಇಂದಿನಿಂದ 7 ದಿನಗಳವರೆಗೆ ಕಡ್ಡಾಯವಾಗಿ ದಿಗ್ಬಂಧನ ವಿಧಿಸಿಕೊಳ್ಳಬೇಕಾಗಿದೆ. ಹೊಟೇಲ್, ದಾಬಾ, ಕ್ಷೌರಿಕ ಅಂಗಡಿಗಳನ್ನು ಮುಚ್ಚಲಾಗುತ್ತದೆ. ಮುಂಜಾನೆ 7 ರಿಂದ 10 ಗಂಟೆಯವರೆಗೆ ಕಿರಾಣಿ ಅಂಗಡಿಗಳು ತೆರೆಯಲಿವೆ. ಆಸ್ಪತ್ರೆ, ಔಷಧ ಅಂಗಡಿ ಹಾಗೂ ಹಾಲಿನ ಅಂಗಡಿಗಳು ದಿನನಿತ್ಯದಂತೆ ಸೇವೆಯಲ್ಲಿರಲಿವೆ. ಒಂದು ವೇಳೆ ಸಾರ್ವಜನಿಕರು ಮಾಸ್ಕ್ ಹಾಕಿಕೊಳ್ಳದೇ ತಿರುಗಾಡಿದರೇ ಅಂತಹವರಿಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಮಾತನಾಡಿ, ಗೋಕಾಕದಿಂದ ತಮ್ಮ ಸಂಬಂಧಿಕರ ಮನೆಗೆ ಬಂದಿರುವ ಮಿರಾಳ ತೋಟದ ಬಾಲಕೀಯೋರ್ವಳಿಗೆ ಕೊರೋನಾ ಸೊಂಕು ತಗುಲಿದ್ದರಿಂದ ಆ ಪ್ರದೇಶವನ್ನು ನಿರ್ಬಂಧಗೊಳಿಸಿ ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಾಮಾಜಿಕ ಅಂತರದ ಜೊತೆಗೆ ಮಾಸ್ಕ್‍ಗಳನ್ನು ಧರಿಸಿ ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆಯನ್ನು ವಹಿಸುವಂತೆ ಶಾಸಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆಂದು ಹೇಳಿದರು.

ಗ್ರಾಪಂ ಅಧ್ಯಕ್ಷ ರಮಜಾನ್ ಪೋದಿ, ತಾಪಂ ಸದಸ್ಯ ಶಾಂತಪ್ಪ ಹಿರೇಮೇತ್ರಿ, ಶಿವಾನಂದ ಲೋಕನ್ನವರ, ಅಡಿವೆಪ್ಪ ದಳವಾಯಿ, ರವಿ ಪರುಶೆಟ್ಟಿ, ರಾಯಪ್ಪ ಬಳೋಲದಾರ, ನೀಲಪ್ಪ ಕೇವಟಿ, ಸುಭಾಸ ಕೌಜಲಗಿ, ಮಹೇಶ ಪಟ್ಟಣಶೆಟ್ಟಿ, ಜಗದೀಶ ಭೋವಿ, ಶ್ರೀಕಾಂತ ಪರುಶೆಟ್ಟಿ, ಬಿ.ಸಿ. ಸಜ್ಜನ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಬಿಇಓ ಅಜೀತ ಮನ್ನಿಕೇರಿ, ಕುಲಗೋಡ ಪಿಎಸ್‍ಐ ಎಚ್.ಕೆ. ನರಳೆ, ವೈದ್ಯಾಧಿಕಾರಿ ಡಾ. ರವಿ ನಾಡಗೌಡ, ಕೌಜಲಗಿ ಕಂದಾಯ ನಿರೀಕ್ಷಕ ಎಂ.ಐ. ಹಿರೇಮಠ, ಗ್ರಾಮ ಲೆಕ್ಕಿಗ ಎಸ್.ಎನ್. ದೇಶಪಾಂಡೆ, ಗ್ರಾಪಂ ಕಾರ್ಯದರ್ಶಿ ಹನಮಂತ ಲಿಂಬೋಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

SIT ವಿಚಾರಣೆ ವೇಳೆ, ನ್ಯಾಯಾಧೀಶರ ಮುಂದೆಯೂ ಕೈಯ್ಯಲ್ಲಿ 3 ನಿಂಬೆಹಣ್ಣು ಹಿಡಿದಿದ್ದ ಎಚ್.ಡಿ ರೇವಣ್ಣ!

Spread the loveಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಕೇಸ್​ನಲ್ಲಿ ಮೊದಲ ಆರೋಪಿಯಾಗಿರುವ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ