Breaking News
Home / ಜಿಲ್ಲೆ / ಬೆಂಗಳೂರು / ರಾಜ್ಯಕ್ಕೆ ಲಭ್ಯವಾದ ಆಮ್ಲಜನಕ ಎಷ್ಟು? ಎಚ್‌ಡಿಕೆ -ತೇಜಸ್ವಿ ಸೂರ್ಯ ಟ್ವೀಟ್‌ ಜಗಳ

ರಾಜ್ಯಕ್ಕೆ ಲಭ್ಯವಾದ ಆಮ್ಲಜನಕ ಎಷ್ಟು? ಎಚ್‌ಡಿಕೆ -ತೇಜಸ್ವಿ ಸೂರ್ಯ ಟ್ವೀಟ್‌ ಜಗಳ

Spread the love

ಬೆಂಗಳೂರು: ರಾಜ್ಯಕ್ಕೆ ಕೇಂದ್ರ ಸರ್ಕಾರ ಎಷ್ಟು ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಮಾಡಿದೆ ಎಂಬ ಬಗ್ಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಂಸದ ತೇಜಸ್ವಿ ಸೂರ್ಯ ಅವರ ಮಧ್ಯೆ ಟ್ವೀಟ್‌ ಸಮರ ನಡೆಸಿದೆ.

‘ಕರ್ನಾಟಕಕ್ಕೆ ಪ್ರತಿ ನಿತ್ಯದ 1,200 ಟನ್‌ ಆಮ್ಲಜನಕ ಪೂರೈಸಬೇಕು ಎಂಬ ನ್ಯಾಯಾಲಯದ ಆದೇಶ ನಂತರವೂ ಕೇಂದ್ರ ಸರ್ಕಾರ ಕೇವಲ 120 ಟನ್‌ ಆಮ್ಲಜನಕ ಪೂರೈಕೆ ಮಾಡಿದೆ. ಆದರೆ, ಉತ್ತರ ಪ್ರದೇಶಕ್ಕೆ 1,680 ಟನ್‌ ಆಮ್ಲಜನಕ ಪೂರೈಕೆ ಮಾಡುವ ಮೂಲಕ ತಾರತಮ್ಯ ಮಾಡಿದೆ. ಈ ಒಕ್ಕೂಟದಲ್ಲಿ ಕನ್ನಡಿಗರೇನು ತಬ್ಬಲಿ ಮಕ್ಕಳೇ?’ ಎಂದು ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

‘ಕರ್ನಾಟಕದ ವಿಚಾರದಲ್ಲಿ ಹೇಳತೀರದ ತಾರತಮ್ಯ ಮಾಡುತ್ತಿರುವ ಕೇಂದ್ರ ಸರ್ಕಾರ ಒಂದು ವಿಷಯ ಸ್ಪಷ್ಟವಾಗಿ ಅರಿಯಬೇಕು. ಇದು ಒಕ್ಕೂಟ ವ್ಯವಸ್ಥೆ. ಒಕ್ಕೂಟ ಸರ್ಕಾರ ನಡೆಸುತ್ತಿರುವವರು ಎಲ್ಲ ರಾಜ್ಯಗಳಿಗೂ ಸಮಾನ ಆದ್ಯತೆ ನೀಡಬೇಕು. ಅನಿವಾರ್ಯದಲ್ಲಿರುವವರ ಅಗತ್ಯಗಳನ್ನು ಮೊದಲು ಪೂರೈಸಬೇಕು. ಅದನ್ನು ಬಿಟ್ಟು ತಾತ್ಸಾರ ಮಾಡಿದರೆ ಜನ ದಂಗೆ ಎದ್ದಾರು’ ಎಂದು ಎಚ್ಚರಿಕೆ ನೀಡಿದ್ದಾರೆ.

ನಮ್ಮಿಂದ ತಪ್ಪಾಗಿದೆ: ಡಿವಿಎಸ್‌
‘ಆಮ್ಲಜನಕ ಕೊರತೆ ವಿಚಾರದಲ್ಲಿ ನಮ್ಮಿಂದ ತಪ್ಪಾಗಿದೆ. ಇದರಿಂದಾಗಿ ಕೆಲವು ಕಡೆಗಳಲ್ಲಿ ರೋಗಿಗಳು ಮೃತಪಟ್ಟಿದ್ದಾರೆ. ಇದರಲ್ಲಿ ರಾಜಕಾರಣ ಬೆರೆಸಬಾರದು. ರಾಜಕಾರಣದಲ್ಲೂ ಅಂತಃಕರಣ ಇದೆ ಎಂಬುದನ್ನು ತೋರಿಸಬೇಕಾಗಿದೆ’ ಎಂದು ಸದಾನಂದಗೌಡ ಹೇಳಿದರು.

ಕೊರೊನಾ ಮೊದಲ ಅಲೆಯ ವೇಳೆಯಲ್ಲಿ ಆಮ್ಲಜನಕದ ಕೊರತೆ ಆಗಿರಲಿಲ್ಲ. ಎರಡನೇ ಅಲೆಯ ವೇಳೆ ಕೊರತೆ ಆಗಿದೆ. ರಾಜ್ಯಕ್ಕೆ 1015 ಟನ್‌ ಆಮ್ಲಜನಕವನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. ಅದರಲ್ಲಿ 500 ಟನ್‌ ಕಂಟೈನರ್‌ ಯಾವುದೇ ಕ್ಷಣದಲ್ಲಾದರೂ ರಾಜ್ಯಕ್ಕೆ ಬರಲಿದೆ ಎಂದರು.

ರೆಮ್‌ಡಿಸಿವಿರ್‌ ಫೆಬ್ರುವರಿ ಕೊನೆಯಲ್ಲಿ 23 ಲಕ್ಷ ಉತ್ಪಾದನೆ ಆಗುತ್ತಿತ್ತು. ತಯಾರಿಕಾ ಕಂಪನಿಗಳ ಜತೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿದ ಪರಿಣಾಮ ಏಪ್ರಿಲ್‌ 12 ಕ್ಕೆ 35 ಲಕ್ಷಕ್ಕೆ ತಲುಪಿತು. ಮೇ 4 ರ ವೇಳೆಗೆ 1.05 ಕೋಟಿ ಉತ್ಪಾದನೆ ಆಗುತ್ತಿದೆ ಎಂದು ಹೇಳಿದರು.

120 ಅಲ್ಲ, 1071 ಟನ್: ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದ ತೇಜಸ್ವಿ ಸೂರ್ಯ, ‘ರಾಜ್ಯಕ್ಕೆ 1015 ಟನ್‌ ಜತೆಗೆ ವಿಶೇಷವಾಗಿ 60 ಟನ್‌ ಸೇರಿ ಒಟ್ಟು 1071 ಟನ್‌ ಆಮ್ಲಜನಕ ನೀಡಿದೆ. ಕುಮಾರಸ್ವಾಮಿಯವರು ನೀಡಿರುವ ಲೆಕ್ಕ, ಆಕ್ಸಿಜನ್‌ ಎಕ್ಸ್‌ಪ್ರೆಸ್‌ ಮೂಲಕ ಬಂದಿರುವ ಆಮ್ಲಜನಕದ್ದಾಗಿದೆ’ ಎಂದು ಹೇಳಿದ್ದಾರೆ.

‘ಕರ್ನಾಟಕಕ್ಕೆ ಏಪ್ರಿಲ್‌ 15 ರ ವೇಳೆಯಲ್ಲಿ 300 ಟನ್‌ ಸಿಗುತ್ತಿತ್ತು. ಈಗ ಮೇ 11 ಕ್ಕೆ 1015 ಟನ್‌ಗೆ ಏರಿಕೆ ಆಗಿದೆ. ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಆಮ್ಲಜನಕ ಪ್ರಮಾಣವನ್ನೂ ಹೆಚ್ಚಿಸಲಾಗಿದೆ’ ಎಂದು ಹೇಳಿರುವ ಅವರು ತಮ್ಮ ಟ್ವೀಟ್‌ನಲ್ಲಿ ಕೇಂದ್ರ ಬಿಡುಗಡೆ ಮಾಡಿರುವ ಆಮ್ಲಜನಕದ ಪ್ರಮಾಣಕ್ಕೆ ಸಂಬಂಧಿಸಿದಂತೆ ಆದೇಶ ಪತ್ರಗಳ ಮಾಹಿತಿಯನ್ನೂ ಲಗತ್ತಿಸಿದ್ದಾರೆ. ತಪ್ಪು ಮಾಹಿತಿಯ ಟ್ವೀಟ್‌ ಅನ್ನು ತೆಗೆದುಹಾಕುವಂತೆಯೂ ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ