Breaking News
Home / ಜಿಲ್ಲೆ / ಬೆಳಗಾವಿ / ಬೆಳಗಾವಿ: ಮೂರು ಹೆಣ್ಣುಮಕ್ಕಳ ಹೆತ್ತಿದ್ದೇ ತಪ್ಪಾಯಿತೇ…

ಬೆಳಗಾವಿ: ಮೂರು ಹೆಣ್ಣುಮಕ್ಕಳ ಹೆತ್ತಿದ್ದೇ ತಪ್ಪಾಯಿತೇ…

Spread the love

ಬೆಳಗಾವಿ: ‘ಗಂಡ ಸಾಲ ಮಾಡಿ ಓಡಿಹೋದ. ಸಾಲ ಕೊಟ್ಟವರು ದಿನವೂ ಕಾಡತೊಡಗಿದರು. ಎಳೆಯ ಮಕ್ಕಳು ಹಸಿವಿನಿಂದ ಅಳುತ್ತಿದ್ದವು. ಹೆಣ್ಣು ಹೆತ್ತಿದ್ದೇನೆ ಎಂಬ ಕಾರಣಕ್ಕೆ ಅತ್ತೆ-ಮಾವನೂ ದೂರ ಮಾಡಿದ್ದಾರೆ. ತವರಿನಲ್ಲೂ ಕಷ್ಟವಿದೆ. ಬದುಕು ಬೀದಿಗೆ ಬಿತ್ತು.

ಈ ಜೀವ ಇಟ್ಟು ಇನ್ನೇನು ಮಾಡುವುದು ಎಂದು ಸಾಯಲು ಹೊರಟೆ. ನಾನು ಹೋದ ಮೇಲೆ ಮಕ್ಕಳು ಹಸಿವಿನಿಂದ ಸಾಯಬಾರದು ಎಂದು ಅವರಿಗೂ ಫಿನೈಲ್‌ ಕುಡಿಸಿದೆ…’

ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಸರಸ್ವತಿ ಅದೃಶ್ಯಪ್ಪ ಹಂಪಣ್ಣವರ (40) ತಮ್ಮ ಕಣ್ಣೀರ ಕತೆಯನ್ನು ಹೊರ ಹಾಕುತ್ತಲೇ ಇದ್ದರು. ಯಾರ ಬಳಿ, ಏನು ಸಹಾಯ ಕೇಳಬೇಕು ಎಂಬುದು ಗೊತ್ತಾಗದೇ ಸಾವಿನ ದಾರಿ ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದರು.

ಒಂದೆಡೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಭ್ರಮವಿದ್ದರೆ, ಇನ್ನೊಂದೆಡೆ ಮಹಿಳೆ ಮಕ್ಕಳೊಂದಿಗೆ ಸಾಮೂಹಿಕವಾಗಿ ಸಾವಿಗೆ ಶರಣಾಗಲು ಯತ್ನಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದಿದ್ದ ಸರಸ್ವತಿ ಅವರಿಗೆ ಜಿಲ್ಲಾಧಿಕಾರಿಯನ್ನು ಭೇಟಿ ಆಗಲು ಸಾಧ್ಯವಾಗಲಿಲ್ಲ. ಹತಾಶರಾದ ಅವರು ಫಿನೈಲ್‌ ಕುಡಿದು, ಮಕ್ಕಳಾದ ಸೃಷ್ಟಿ (14), ಸಾಕ್ಷಿ (8) ಹಾಗೂ ಸಾನ್ವಿ (3) ಅವರಿಗೂ ಕುಡಿಸಿದರು. ನಾಲ್ವರಿಗೂ ಚಿಕಿತ್ಸೆ ಮುಂದುವರಿಸಲಾಗಿದೆ.

ನೆರವಿಗೆ ಬರದವರು: ಸಾಮೂಹಿಕ ಆತ್ಮಹತ್ಯೆಗೆ ಯತ್ನ ನಡೆಸಿದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಶಾಸಕರಾಗಲೀ, ಜಿಲ್ಲಾಧಿಕಾರಿ, ಮಹಿಳಾ ಆಯೋಗ, ಮಹಿಳಾ ಪೊಲೀಸ್ ಠಾಣೆ, ಮಹಿಳಾ ಸಂಘಟನೆಗಳು ಸೇರಿದಂತೆ ಯಾರೊಬ್ಬರೂ ಸರಸ್ವತಿ ಅವರಿಗೆ ಸ್ಪಂದಿಸಿಲ್ಲ. ಸೌಜನ್ಯಕ್ಕೂ ಕಣ್ಣೆತ್ತಿ ನೋಡಿಲ್ಲ. ಇದು ಅವರನ್ನು ಮತ್ತಷ್ಟು ಕುಗ್ಗಿಸಿದೆ.

‘ಸತ್ತಿದ್ರ ಛಲೋ ಇತ್ರಿ…’ ಎನ್ನುವ ಅವರ ಮಾತಲ್ಲಿ ನೋವು ಮಡುಗಟ್ಟಿತ್ತು.

ಈ ಬಗ್ಗೆ ‘ಪ್ರಜಾವಾಣಿ’ ವಿಚಾರಿಸಿದ ಮೇಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಸರಸ್ವತಿ ಸವದತ್ತಿ ತಾಲ್ಲೂಕಿನ ಮುರಗೋಡದವರು. ಗಂಡ, ಬೈಲಹೊಂಗಲದ ಅದೃಶ್ಯಪ್ಪ ಅಂಗವಿಕಲ ಕೂಡ. ಸಾಲ ಮಾಡಿ ಮುರಗೋಡದಲ್ಲಿಯೇ ಕಟಿಂಗ್‌ ಶಾಪ್‌ ಇಟ್ಟಿದ್ದರು. ಲಾಕ್‌ಡೌನ್‌ ಕಾರಣ ಹಾನಿ ಆಯಿತು. ಸಾಲ ತೀರಿಸಲಾಗದೇ ಗಂಡ ಬೆಳಗಾವಿಗೆ ಓಡಿಹೋದರು. ಬಾಡಿಗೆ ತುಂಬದ ಕಾರಣ ಸವದತ್ತಿ ಎಪಿಎಂಸಿ ಅಧಿಕಾರಿಗಳು ₹ 5 ಲಕ್ಷ ಮೌಲ್ಯದ ಕಟಿಂಗ್‌ ಶಾಪ್‌ ಹರಾಜು ಮಾಡಿದರು.

ಬಳಿಕ, ಪತಿಯನ್ನು ಹುಡುಕುತ್ತ ಬಂದ ಸರಸ್ವತಿ ಕೂಡ ಬೆಳಗಾವಿ ನಗರದ ಅನಗೋಳದಲ್ಲಿ ಹೊಸ ಜೀವನ ಆರಂಭಿಸಿದರು. ಜೀವನ ನಿರ್ವಹಣೆಗಾಗಿ ಇಲ್ಲಿಯೂ ಸಾಲ ಮಾಡಿದ ಪತಿ, ಒಂದೂವರೆ ತಿಂಗಳ ಹಿಂದೆ ಪತ್ನಿ‍-ಮಕ್ಕಳನ್ನು ಬಿಟ್ಟು ಮತ್ತೆ ತಲೆಮರೆಸಿಕೊಂಡಿದ್ದಾರೆ.

‘ಗಂಡನನ್ನು ಹುಡುಕಿಕೊಡಿ ಎಂದು ಟಿಳಕವಾಡಿ ಪೊಲೀಸ್‌ ಠಾಣೆಗೆ ಹೋದೆ. ದೂರು ತೆಗೆದುಕೊಳ್ಳಲಿಲ್ಲ. ಆದರೆ, ಈಗ ನಾನು ಠಾಣೆಗೇ ಬಂದಿಲ್ಲ ಎನ್ನುತ್ತಿದ್ದಾರೆ. ಡಿ.ಸಿ ಆಫೀಸಿಗೆ ಬಂದೆ. ಅಲ್ಲಿ ಯಾರನ್ನು ಕೇಳಬೇಕು ಗೊತ್ತಾಗದೇ, ಕೆಟ್ಟ ನಿರ್ಧಾರ ಮಾಡಿದೆ’ ಎಂದರು.

‘ನಾನು ಎಸ್ಸೆಸ್ಸೆಲ್ಸಿ ಓದಿದ್ದೇನೆ. ಕೆಲಸ ಕೊಡಿಸಿದರೆ ಮಕ್ಕಳನ್ನು ಸಾಕುತ್ತೇನೆ. ಇಲ್ಲದಿದ್ದರೆ, ಆರ್ಥಿಕ ಸಹಾಯ ಮಾಡಿದರೆ ಸಾಲ ತೀರಿಸುವೆ’ ಎನ್ನುತ್ತಾರೆ ಸರಸ್ವತಿ.

*

‘ಸ್ವಾಧಾರ’ದಲ್ಲಿ ಆಶ್ರಯ

‘ಮಹಿಳೆ ಹಾಗೂ ಮೂವರೂ ಮಕ್ಕಳಿಗೆ ‘ಸ್ವಾಧಾರ’ದಲ್ಲಿ ಆಶ್ರಯ ಕಲ್ಪಿಸುತ್ತೇವೆ. ಅಲ್ಲಿಯೇ ಮಕ್ಕಳ ಶಿಕ್ಷಣಕ್ಕೂ ವ್ಯವಸ್ಥೆ ಮಾಡುತ್ತೇವೆ. ಮಹಿಳೆ ಗುಣವಾದ ಮೇಲೆ ಕೆಲಸವನ್ನೂ ಕೊಡಿಸುತ್ತೇವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎ.ಎಂ. ಬಸವರಾಜ ತಿಳಿಸಿದರು.

‘ಈ ವಿಷಯವನ್ನು ‘ಪ್ರಜಾವಾಣಿ’ ಗಮನಕ್ಕೆ ತಂದ ನಂತರ, ಅಧಿಕಾರಿಗಳನ್ನು ಕಳುಹಿಸಿ ಮಾಹಿತಿ ‍ಪಡೆದಿದ್ದೇನೆ. ನಾನೂ ಖುದ್ದು ಭೇಟಿ ನೀಡುವೆ’ ಎಂದರು.

*

₹4.3 ಲಕ್ಷ ಸಾಲ

‘ಗಂಡನಿಗೆ ನೆರವಾಗಲಿ ಎಂದು ತವರಿನ ಮನೆ ಅಡ ಇಟ್ಟು ಮುರಗೋಡದ ಅಕ್ಕಮಹಾದೇವಿ ಬ್ಯಾಂಕಿನಲ್ಲಿ ₹ 1.50 ಲಕ್ಷ, ಚನ್ನಮ್ಮ ಬ್ಯಾಂಕಿನಲ್ಲಿ ₹ 80 ಸಾವಿರ ಸಾಲ ಕೊಡಿಸಿದರು. ಈಗ ತವರಿನಲ್ಲೂ ನನ್ನನ್ನು ಸಾಕುವಷ್ಟು ಶಕ್ತಿವಂತರು ಇಲ್ಲ. ಗಂಡ ಬೆಳಗಾವಿಯಲ್ಲೂ ₹2 ಲಕ್ಷ ಸೇರಿ ಒಟ್ಟು ₹4.3 ಲಕ್ಷ ಸಾಲ ಮಾಡಿದ್ದಾರೆ’ ಎನ್ನುತ್ತಾರೆ ಸರಸ್ವತಿ ಹಂಪಣ್ಣವರ.

*

ನೆರವಿಗೆ ಮೊರೆ

ಸರಸ್ವತಿ ಅವರಿಗೆ ಆರ್ಥಿಕ ಸಹಾಯ ಮಾಡುವವರು ಅವರ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ ಅಕೌಂಟ್‌ ನಂಬರ್‌ 89150189504, ಐಎಫ್‌ಎಸ್‌ಸಿ ಕೋಡ್‌: KVGB0002204 ಇದಕ್ಕೆ ಸಂದಾಯ ಮಾಡಬಹುದು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ