Breaking News
Home / ಜಿಲ್ಲೆ / ಬೆಳಗಾವಿ / ಜನರ ಅನುಕೂಲತೆ ದೃಷ್ಟಿಯಿಂದ ರಾಜ್ಯದ ಅತೀದೊಡ್ಡ ಜಿಲ್ಲೆ ಬೆಳಗಾವಿಯ ವಿಭಜನೆ ಯಾವಾಗ?

ಜನರ ಅನುಕೂಲತೆ ದೃಷ್ಟಿಯಿಂದ ರಾಜ್ಯದ ಅತೀದೊಡ್ಡ ಜಿಲ್ಲೆ ಬೆಳಗಾವಿಯ ವಿಭಜನೆ ಯಾವಾಗ?

Spread the love

ಬೆಳಗಾವಿ: ಜನರ ಅನುಕೂಲತೆ ದೃಷ್ಟಿಯಿಂದ ರಾಜ್ಯದ ಅತೀದೊಡ್ಡ ಜಿಲ್ಲೆ ಬೆಳಗಾವಿಯ ವಿಭಜನೆ ಯಾವಾಗ? ಇದು ಪ್ರತಿಯೊಬ್ಬರನ್ನು ಕಾಡುತ್ತಿರುವ ಬಹಳ ದೊಡ್ಡ ಯಕ್ಷ ಪ್ರಶ್ನೆ. ಕೃಷ್ಣಾ ನದಿ ತೀರದ ವಿಧಾನಸಭಾ ಕ್ಷೇತ್ರಗಳಲ್ಲಿ ಈಗಲಂತೂ ಇದು ಚುನಾವಣೆಯ ಬಹು ದೊಡ್ಡ ಅಸ್ತ್ರ.

ಬೆಳಗಾವಿ ಜಿಲ್ಲೆಯ ವಿಭಜನೆ, ಚಿಕ್ಕೋಡಿ ನೂತನ ಜಿಲ್ಲಾ ರಚನೆ ಎಂಬ ಭರವಸೆ ಚಿಕ್ಕೋಡಿ ವಿಭಾಗದ ಅಥಣಿ, ಕಾಗವಾಡ, ರಾಯಬಾಗ, ಕುಡಚಿ, ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ಮತ್ತು ಯಮಕನಮರಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಮಾನ್ಯದ ಮಾತಾಗಿಬಿಟ್ಟಿದೆ. ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಇದನ್ನೇ ತಮ್ಮ ಚುನಾವಣೆಯ ಪ್ರಮುಖ ವಿಷಯವನ್ನಾಗಿ ಮಾಡಿಕೊಳ್ಳಲಾರಂಭಿಸಿವೆ. ಆದರೆ ಯಾರಿಂದಲೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಬೇರೆ ಮಾತು.

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಬಂತೆಂದರೆ ಸಾಕು ಜಿಲ್ಲಾ ವಿಭಜನೆಯ ಮಾತು ತಾನಾಗೇ ಮುನ್ನೆಲೆಗೆ ಬರುತ್ತಿದೆ. ಕೆಲವು ನಾಯಕರಂತೂ ಇದನ್ನು ಪೈಪೋಟಿ ಮೇಲೆ ತಮ್ಮ ಚುನಾವಣ ವಿಷಯವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ಈ ವಿಷಯ ಗೊತ್ತಿಲ್ಲದಂತೆ ತೆರೆಗೆ ಸರಿಯುತ್ತಿದೆ. ಚುನಾವಣೆಯಲ್ಲಿ ಇದನ್ನು ಪ್ರಚಾರದ ವಿಷಯವನ್ನಾಗಿ ಬಳಕೆ ಮಾಡಿಕೊಂಡ ರಾಜಕೀಯ ಪಕ್ಷಗಳು ಸಹ ಮತ್ತೆ ವಿಷಯ ಪ್ರಸ್ತಾವಿಸದೆ ಮೌನಕ್ಕೆ ಜಾರುತ್ತಿವೆ. ಹೀಗಾಗಿ ಜಿಲ್ಲಾ ವಿಭಜನೆ ಎಂಬುದು ಕೇವಲ ಚುನಾವಣೆ ವಿಷಯವಾಗಿ ಸೀಮಿತವಾದಂತೆ ಭಾಸವಾಗುತ್ತಿದೆ.

ಕಳೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸ್ಥಳೀಯ ನಾಯಕರು ಜಿಲ್ಲಾ ರಚನೆ ವಿಷಯವನ್ನು ಚುನಾವಣೆಯ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದ್ದರು. ಇದರಿಂದ ತಮಗೆ ಸಾಕಷ್ಟು ಅನುಕೂಲವಾಗಲಿದೆ ಎಂಬುದು ಎರಡೂ ಪಕ್ಷಗಳ ಲೆಕ್ಕಾಚಾರವಾಗಿತ್ತು. ಬಹುತೇಕ ಪ್ರಚಾರ ಸಭೆಗಳಲ್ಲಿ ನಾಯಕರು ಮತದಾರರಿಗೆ ಇದನ್ನೇ ಮುಖ್ಯ ಭರವಸೆಯನ್ನಾಗಿ ನೀಡಿದ್ದರು. ಇನ್ನೊಂದು ಕಡೆ ಹೋರಾಟದಲ್ಲಿ ಸಂಪೂರ್ಣವಾಗಿ ಭಾಗವಹಿಸಿ ಅದರ ಶ್ರೇಯಸ್ಸು ತಮ್ಮದಾಗಿಸಿಕೊಳ್ಳಲು ಬಿಜೆಪಿ ನಾಯಕರು ಆಲೋಚನೆ ಮಾಡಿದ್ದರು. ಹೀಗಾಗಿ ಜಿಲ್ಲಾ ರಚನೆ ಹೋರಾಟದ ಫಲಾಫಲ ರಾಜಕೀಯ ಪಕ್ಷಗಳ ಕೈಯಲ್ಲಿ ಉಳಿದುಕೊಂಡಿತ್ತು.

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರವಿದ್ದಾಗ ಚಿಕ್ಕೋಡಿಯಲ್ಲಿ ನಡೆದ ಹೋರಾಟದ ಹಿಂದೆ ಬಿಜೆಪಿ ಪ್ರಾಯೋಜಕತ್ವ ಇದೆ ಎಂಬ ಮಾತುಗಳು ಚಿಕ್ಕೋಡಿ ಭಾಗದಲ್ಲಿ ಬಹಳ ವೇಗವಾಗಿ ಹರಿದಾಡಿತ್ತು. ಹೋರಾಟಕ್ಕೆ ಮಣಿದು ಸರಕಾರ ಜಿಲ್ಲಾ ರಚನೆ ಘೋಷಣೆ ಮಾಡಿದರೆ ಇದು ನಮ್ಮ ಪ್ರತಿಭಟನೆಯ ಫಲ. ಬೇಡಿಕೆ ಈಡೇರದೇ ಇದ್ದರೆ ಸರಕಾರಕ್ಕೆ ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವ ಇಚ್ಛಾಶಕ್ತಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮಾತಿನಂತೆ ನಡೆದುಕೊಂಡಿಲ್ಲ ಎಂದು ಜನರ ಮುಂದೆ ಹೇಳಲು ಬಿಜೆಪಿ ಆಲೋಚನೆ ಮಾಡಿತ್ತು. ಆದರೆ ಅಂದುಕೊಂಡಂತೆ ಯಾವುದೂ ಅಗಲಿಲ್ಲ. ಹೋರಾಟ ಮಾಡಿದವರೂ ಸುಮ್ಮನಾದರು.

ಮೌನಕ್ಕೆ ಕಾರಣ ಏನು?: ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳು ಚಿಕ್ಕೋಡಿ ಜಿಲ್ಲಾ ಮಾಡುವ ಭರವಸೆಯನ್ನು ತಮ್ಮ ಚುನಾವಣ ಭಾಷಣದಲ್ಲಿ ಸೇರಿಸಿಕೊಂಡಿದ್ದರು. ನಾಯಕರ ಮಾತಿಗೆ ಆಗ ಹೋರಾಟಗಾರರು ಹಾಗೂ ಮತದಾರರು ತಲೆದೂಗಿದ್ದರು. ಚಿಕ್ಕೋಡಿ ಬಿಜೆಪಿ ಘಟಕ ಇದಕ್ಕೆ ದನಿಗೂಡಿಸಿತ್ತು. ಚುನಾವಣೆ ಮುಗಿಯಿತು. ಜಿಲ್ಲಾ ವಿಭಜನೆಯ ಭರವಸೆ ನೀಡಿದ್ದವರು ಗೆದ್ದು ಬಂದು ಶಾಸಕರಾದರು. ಆದರೆ ಅನಂತರ ಚಿಕ್ಕೋಡಿ ಜಿಲ್ಲಾ ರಚನೆ ಬಗ್ಗೆ ಬಲವಾದ ಮಾತು ಆಡಲಿಲ್ಲ. ಒತ್ತಡ ಹಾಕಲಿಲ್ಲ.

ಹೋರಾಟಗಾರರನ್ನು ಸಮಾಧಾನ ಮಾಡಬೇಕು ಎಂಬ ಏಕೈಕ ಉದ್ದೇಶದಿಂದ ಬಿಜೆಪಿ ಮತ್ತು ಕಾಂಗ್ರೆಸ್‌ ಚುನಾವಣೆ ಸಮಯದಲ್ಲಿ ಚಿಕ್ಕೋಡಿ ಜಿಲ್ಲಾ ರಚನೆ ಮತ್ತು ಹೋರಾಟದ ಬಗ್ಗೆ ಮಾತನಾಡುತ್ತಾರೆ. ಹೋರಾಟಗಾರರಿಗೆ ಮಾತು ಕೊಡುತ್ತಾರೆ. ಇದು ಅಷ್ಟಕ್ಕೆ ಮಾತ್ರ ಸೀಮಿತವಾಗಿದೆ. ಚುನಾವಣೆ ಮುಗಿದ ಮೇಲೆ ಯಾವ ಪಕ್ಷವೂ ಇದನ್ನು ಮೈಮೇಲೆ ತೆಗೆದುಕೊಳ್ಳುತ್ತಿಲ್ಲ ಎಂಬುದು ಹೋರಾಟಗಾರರ ಅಭಿಪ್ರಾಯ


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ