ಧಾರವಾಡ: ಕೊರೊನಾದಿಂದ ಉಂಟಾಗಿರುವ ಸಂಕಷ್ಟ ಪರಿಹಾರೋಪಾಯ ಕಾರ್ಯಕ್ಕಾಗಿ ಈಗಾಗಲೇ ಸಾಕಷ್ಟು ನೆರವು ನೀಡಿರುವ ಇನ್ಫೋಸಿಸ್ ಪ್ರತಿಷ್ಠಾನವು ಈಗ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ 20 ಲಕ್ಷ ರೂ.ಗಳ ಪ್ರತ್ಯೇಕ ನೆರವು ಘೋಷಿಸಿದೆ.
ಧಾರವಾಡ ಜಿಲ್ಲೆ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕು ಒಳಗೊಂಡು ಪರಿಹಾರ ಕಾರ್ಯ ಕೈಗೊಳ್ಳುವುದಕ್ಕಾಗಿ ಸುಧಾಮೂರ್ತಿಯವರು ಈ ನೆರವು ನೀಡಿದ್ದು, ಸಾಫಲ್ಯ ಪ್ರತಿಷ್ಠಾನ ಮತ್ತು ಗ್ರಾಮ ವಿಕಾಸ ಸಂಸ್ಥೆಗಳ ಮೂಲಕ ಈ ಪರಿಹಾರ ಕಾರ್ಯಗಳು ನಡೆಯಲಿವೆ.
ಈ ಹಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ಪೌರ ಕಾರ್ಮಿಕರಿಗೆ ವೈಯಕ್ತಿಕ ಸ್ಯಾನಿಟೈಜರ್ ವಿತರಣೆ, ಉತ್ತಮ ಗುಣಮಟ್ಟದ ವೈದ್ಯಕೀಯ ಮಾಸ್ಕ್ ವಿತರಣೆ ಮಾಡಲಾಗುತ್ತದೆ. ಜೊತೆಗೆ ಸಂಕಷ್ಟದಲ್ಲಿರುವ ಹುಬ್ಬಳ್ಳಿ ತಾಲೂಕಿನ ಗೋಕುಲ ಹಾಗೂ ಸುತ್ತಮುತ್ತಲಿನ ಗೋಸಾವಿ, ಹರಿಣಶಿಕಾರಿ, ಕುಂಚಿಕೊರವ ಸಮಾಜದ ಜನರಿಗೆ ಹತ್ತು ದಿನಗಳಿಗೆ ಆಗುವಷ್ಟು ದಿನಸಿ ವಿತರಣೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.