ದೆಹಲಿಯಲ್ಲಿ ನಡೆದ ಸಭೆಗೆ ತಮಿಳುನಾಡು ತತ್ತರ
– ನಿನ್ನೆ 50 ಮಂದಿ, ಇಂದು 110 ಜನರಿಗೆ ಸೋಂಕು ದೃಢತಮಿಳುನಾಡಿನಲ್ಲಿ ಇಂದು 110 ಮಂದಿಗೆ ಕೊರೊನಾ – ಪಾಸಿಟಿವ್ ಬಂದವರೆಲ್ಲ ದೆಹಲಿ ಸಭೆಯಲ್ಲಿ ಭಾಗಿ
ಚೆನ್ನೈ: ಇಂದು ಒಂದೇ 110 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಎಲ್ಲ 110 ಮಂದಿ ದೆಹಲಿ ಮಸೀದಿಯ ಕಾರ್ಯಕ್ರಮಕ್ಕೆ ತೆರಳಿದವರು ಎಂದು ತಮಿಳುನಾಡು ಸರ್ಕಾರ ಹೇಳಿದೆ.
ಒಂದೇ ದಿನದಲ್ಲಿ 110 ಪ್ರಕರಣಗಳು ಬೆಳಕಿಗೆ ಬಂದ ಪರಿಣಾಮ ತಮಿಳುನಾಡಿನ ಕೊರೊನಾ ಪೀಡಿತರ ಸಂಖ್ಯೆ 234ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ನಡೆದ ಸಭೆಗೆ ತಮಿಳುನಾಡಿನ 19 ಜಿಲ್ಲೆಗಳಿಗೆ ಸೇರಿದ ಜನರು ಭಾಗವಹಿಸಿದ್ದರು. ಹೀಗಾಗಿ ರಾಜ್ಯದಲ್ಲಿ ಮತ್ತಷ್ಟು ಆತಂಕದ ವಾತಾವರಣ ನಿರ್ಮಾಣವಾಗಿದೆ.
ದೆಹಲಿಯಲ್ಲಿ ಇಸ್ಲಾಮಿಕ್ ಸಂಘಟನೆ ತಬ್ಲಘಿ ಜಮಾತ್ ಆಯೋಜಿಸಿದ್ದ ಸಮಾವೇಶದಲ್ಲಿ ತಮಿಳುನಾಡಿನ ಅನೇಕರು ಭಾಗವಿಸಿದ್ದರು. ಈ ಪೈಕಿ 110 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರೆಲ್ಲರ ವರದಿ ಸರ್ಕಾರದ ಕೈಸೇರಿದೆ. ಎಲ್ಲರಲ್ಲಿಯೂ ಕೊರೊನಾ ಸೋಂಕು ಪತ್ತೆಯಾಗಿದ್ದು, ಅವರನ್ನು ಪ್ರತ್ಯೇಕಗೊಳಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಮಿಳುನಾಡು ಆರೋಗ್ಯ ಇಲಾಖೆ ಕಾರ್ಯದರ್ಶಿ ಬೀಲಾ ರಾಜೇಶ್ ಮಾಹಿತಿ ನೀಡಿದ್ದಾರೆ.
ತಮಿಳುನಾಡು ಸರ್ಕಾರ ಮಂಗಳವಾರ, ದೆಹಲಿಯಲ್ಲಿ ತಬ್ಲಘಿ ಜಮಾತ್ ಮಾರ್ಚ್ 8ರಿಂದ 21ರ ನಡುವೆ ಆಯೋಜಿಸಿದ್ದ ಸಭೆಗೆ ಹಾಜರಾದವರು ದಯವಿಟ್ಟು ಬಂದು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ 1,103 ಮಂದಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು. ಈ ಪೈಕಿ 110 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಇಲಾಖೆ ಕಾರ್ಯದರ್ಶಿ ಬೀಲಾ ರಾಜೇಶ್, ರಾಜ್ಯ ಸರ್ಕಾರದ ಮನವಿಯ ಬೆನ್ನಲ್ಲೇ ದೆಹಲಿ ಸಮಾವೇಶದಲ್ಲಿ ಭಾಗವಹಿಸಿದ್ದ ಜನರು ಮಂಗಳವಾರ ರಾತ್ರಿಯಿಂದಲೇ ಆಸ್ಪತ್ರೆಗಳಿಗೆ ಬರಲು ಪ್ರಾರಂಭಿಸಿದರು. ಇದರಿಂದಾಗಿ ನಮ್ಮ ವೈದ್ಯಕೀಯ ಸಿಬ್ಬಂದಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ರೋಗಿಗಳು?
ತಮಿಳುನಾಡಿನ ಜಿಲ್ಲಾವಾರು ಕೊರೊನಾ ಸೋಂಕಿತರ ಸಂಖ್ಯೆ ಹೀಗಿದೆ. ತಿರುನೆಲ್ವೇಲಿನಲ್ಲಿ 6 ಜನ, ಕೊಯಮತ್ತೂರಿನಲ್ಲಿ 28 ಮಂದಿ, ಈರೋಡ್‍ನಲ್ಲಿ ಇಬ್ಬರು, ಥೇನಿಯಲ್ಲಿ 20 ಜನ, ದಿಂಡಿಗಲ್‍ನಲ್ಲಿ 17 ಮಂದಿ ಕೊರೊನಾ ಸೋಂಕಿತರಿದ್ದಾರೆ. ಉಳಿದಂತೆ ಮಧುರೈನಲ್ಲಿ 9 ಜನ, ತಿರುಪಾಥೂರ್ ನಲ್ಲಿ 7 ಜನ, ಚೆಂಗಲ್‍ಪೇಟೆಯಲ್ಲಿ 7 ಮಂದಿ, ಶಿವಗಂಗೈನಲ್ಲಿ 5 ಮಂದಿ, ತೂತುಕುಡಿಯಲ್ಲಿ ಇಬ್ಬರು, ತಿರುವರೂರಿನಲ್ಲಿ ಇಬ್ಬರು, ಕರೂರಿನಲ್ಲಿ ಓರ್ವ, ಕಂಚಿಯಲ್ಲಿ ಇಬ್ಬರು, ಚೆನ್ನೈನಲ್ಲಿ ಓರ್ವ ಮತ್ತು ತಿರುವಣ್ಣಾಮಲೈನಲ್ಲಿ ಓರ್ವ ಕೊರೊನಾ ಸೋಂಕಿತರಿದ್ದಾರೆ.
ಒಟ್ಟಾರೆಯಾಗಿ ರಾಜ್ಯದಲ್ಲಿ 2,726 ಜನರ ರಕ್ತದ ಮಾದರಿಗಳನ್ನು ಪರೀಕ್ಷಿಸಿದ್ದು, ಅದರಲ್ಲಿ 234 ಜನರು ರಿಪೋರ್ಟ್ ಪಾಸಿಟೀವ್ ಬಂದಿದೆ. ಇಂದು ಪತ್ತೆಯಾದ 110 ಹೊಸ ಪ್ರಕರಣಗಳಲ್ಲಿ ಒಬ್ಬ ವ್ಯಕ್ತಿ ಮ್ಯಾನ್ಮಾರ್ ಮತ್ತು ಇನ್ನೊಬ್ಬರು ಇಂಡೋನೇಷ್ಯಾದ ಪ್ರಜೆಯಾಗಿದ್ದಾರೆ.
ಮಂಗಳವಾರ 57 ಹೊಸ ಪ್ರಕರಣಗಳು ವರದಿಯಾಗಿತ್ತು. ಅದರಲ್ಲಿ 50 ರೋಗಿಗಳು ದೆಹಲಿಯಲ್ಲಿ ನಡೆದ ತಬ್ಲಘಿ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದ್ದರೇ ಆಗಿದ್ದರು. ಅವರನ್ನು ಕನ್ಯಾಕುಮಾರಿ (5 ರೋಗಿಗಳು), ತಿರುನೆಲ್ವೇಲಿ (23 ರೋಗಿಗಳು), ಚೆನ್ನೈ (4 ರೋಗಿಗಳು) ಮತ್ತು ನಮಕ್ಕಲ್ (18 ರೋಗಿಗಳು), ಮಧುರೈ (2 ರೋಗಿಗಳು), ವಿಲ್ಲುಪುರಂ (3 ರೋಗಿಗಳು) ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.