ನವದೆಹಲಿ : ವಿಶ್ವದಾದ್ಯಂತ ಕೊರೊನಾದಿಂದ ಆಗಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ತೈಲ ಬೆಲೆಯು ಮತ್ತಷ್ಟು ನೆಲಕಚ್ಚಿ ಹೋಗಿದೆ. ಪೆಟ್ರೋಲ್, ಡೀಸೆಲ್ ಬೇಡಿಕೆ ಗಣನೀಯ ಕುಸಿತ ಕಾಣುತ್ತಿದ್ದು, ಅಮೆರಿಕಾದಲ್ಲಿ ಕಚ್ಚಾ ತೈಲ ಬೆಲೆ ಎರಡು ದಶಕಗಳ ಹಿಂದಕ್ಕೆ ಹೋಗಿ ತಲುಪಿದೆ. ಅಮೆರಿಕಾದ ವೆಸ್ಟ್ ಟೆಕ್ಸಾಸ್ ಮಧ್ಯಂತರ(ಡಬ್ಲ್ಯುಟಿಐ) ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 12 ಡಾಲರ್‌ಗಿಂತಲೂ ಕಡಿಮೆಯಾಗಿದೆ. ಇದು ಕಳೆದ 21 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟವಾಗಿದೆ.
ಕೊರೊನಾವೈರಸ್ ಬಿಕ್ಕಟ್ಟಿನ ಮಧ್ಯೆ ದುರ್ಬಲ ಬೇಡಿಕೆಯ ಹಿನ್ನೆಲೆಯಲ್ಲಿ ತೈಲ ಬೆಲೆಗಳ ಕುಸಿತವು ಕಂಡು ಬರುತ್ತಿದೆ. ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ(ಒಪೆಕ್) ಮತ್ತು ಅದರ ಮಿತ್ರ ರಾಷ್ಟ್ರಗಳ ನಡುವಿನ ಇತ್ತೀಚಿನ ಉತ್ಪಾದನಾ ಕಡಿತದ ಒಪ್ಪಂದದ ಹೊರತಾಗಿಯೂ ಈ ಕುಸಿತ ಕಂಡುಬಂದಿದೆ.
ಒಪ್ಪಂದವು ತೈಲ ಬೆಲೆಗಳನ್ನು ಸ್ಥಿರಗೊಳಿಸುತ್ತದೆ ಎಂಬ ಭರವಸೆಗಳು ಇದ್ದವು, ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗವು ಮುಂದುವರಿಯುವುದರೊಂದಿಗೆ, ಬೇಡಿಕೆಯಲ್ಲಿ ದೊಡ್ಡ ಕುಸಿತ ಕಂಡುಬಂದಿದೆ. ಪ್ರಸ್ತುತ ಮಾರುಕಟ್ಟೆಯು ಕುಗ್ಗುತ್ತಿರುವ ಬೇಡಿಕೆಯ ಮೇಲೆ ಅತಿಯಾಗಿ ಪೂರೈಕೆಯಾಗಿದ್ದು, ಕಚ್ಚಾ ಮುಕ್ತ ಕುಸಿತದ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ.
ಉತ್ಪಾದನಾ ಕಡಿತದ ಕುರಿತಾದ ಒಪೆಕ್-ರಷ್ಯಾ ಮಾತುಕತೆ ಕಳೆದ ತಿಂಗಳ ಆರಂಭದಲ್ಲಿ ವಿಫಲವಾದ ಬೆನ್ನಲ್ಲೇ, ಕಚ್ಚಾ ತೈಲ 25 ಪರ್ಸೆಂಟ್‌ಕ್ಕಿಂತಲೂ ಹೆಚ್ಚು ಕುಸಿದಿದೆ. ಇದು 1991ರ ಕೊಲ್ಲಿ ಯುದ್ಧದ ನಂತರದ ಅತಿದೊಡ್ಡ ಕುಸಿತ, ಮಾರ್ಚ್ 9 ರಂದು ಬ್ಯಾರೆಲ್‌ಗೆ 34 ಡಾಲರ್‌ಗೆ ಇಳಿದಿತ್ತು.
ಇನ್ನು ಬೆಂಗಳೂರು ಸೇರಿ ದೇಶದೆಲ್ಲೆಡೆ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಏಪ್ರಿಲ್ 1 ರಂದು ಕೆಲ ರಾಜ್ಯಗಳಲ್ಲಿ ಬಜೆಟ್ ಪರಿಣಾಮದಿಂದ ತೈಲ ಬೆಲೆಯಲ್ಲಿ ಏರಿಕೆಯಾಗಿದ್ದು ಬಿಟ್ಟರೆ ತೈಲ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.