ವೀಸಾ ನಿರ್ಬಂಧ : ಏ.15ರ ವರೆಗೆ ವಿದೇಶಿ ಆಟಗಾರರು ಅಲಭ್ಯ, ಐಪಿಎಲ್ ಮೇಲೆ ಅನಿಶ್ಚಿತತೆ ಕಾರ್ಮೋಡ
ಮುಂಬೈ/ನವದೆಹಲಿ – ಕೊರೋನಾ ವೈರಸ್ ಕಾಟದಿಂದಾಗಿ ಕೇಂದ್ರ ಸರ್ಕಾರವು ಏ.15ರ ವರೆಗೆ ವೀಸಾ ನಿರಾಕರಿಸಿರುವ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ಕ್ರಿಕೆಟ್ ಪಂದ್ಯಾವಳಿ ಮೇಲೆ ಅನಿಶ್ಚಿತತೆಯ ಕಾರ್ಮೋಡ ಆವರಿಸಿದೆ.
ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ಏ.15ರ ವರೆಗೆ ವಿವಿಧ ದೇಶಗಳ ಕ್ರಿಕೆಟ್ ಪಟುಗಳು ಐಪಿಎಲ್‍ಗೆ ಅಲಭ್ಯವಾಗಿರುವುದರಿಂದ ಈ ಪಂದ್ಯಾವಳಿ ನಡೆಯುವುದು ಅನುಮಾನ ಎಂಬಂತಾಗಿದೆ ಎಂಬ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉನ್ನತಾಧಿಕಾರಿಯೊಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದೇ ತಿಂಗಳು 26 ರಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿದ್ದು, ಕೊರೋನಾ ವೈರಸ್ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದಲೂ ಈ ಪಂದ್ಯಾವಳಿ ಮೇಲೆ ಅನಿಶ್ಚಿತತೆಯ ಕರಾಳ ನೆರಳು ಆವರಿಸಿದೆ. ಮಾ.16ರಂದು ಈ ಸಂಬಂಧ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ನಡೆಯಲಿದ್ದು, ಐಪಿಎಲ್ ಪಂದ್ಯಾವಳಿ ಮುಂದೂಡಬೇಕೆ ಅಥವಾ ಬೇಡವೆ ಎಂಬ ಬಗ್ಗೆ ತೀರ್ಮಾನ ಹೊರಬೀಳಲಿದೆ.