ಬೆಂಗಳೂರು : ರಾಜ್ಯದಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯರ ಕೊರತೆಯನ್ನು ಎರಡು ತಿಂಗಳೊಳಗಾಗಿ ನಿವಾರಣೆ ಮಾಡುವುದಾಗಿ ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಶಾಸಕರಾದ ಎ.ಟಿ.ರಾಮಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಶ್ರೀರಾಮುಲು, ಈ ಮೊದಲು ಲೋಕಸೇವಾ ಆಯೋಗದ ಮೂಲಕ ವೈದ್ಯg ನೇಮಕಾತಿಯಾಗುತ್ತಿತ್ತು. ಸಚಿವರು, ಶಾಸಕರ ಒತ್ತಾಯದ ಮೆರೆಗೆ ನೇರ ನೇಮಕಾತಿಗೆ ಮುಖ್ಯಮಂತ್ರಿ ಅವರು ಅವಕಾಶ ಮಾಡಿಕೊಟ್ಟಿದ್ದಾರೆ
ಅಲ್ಲದೆ ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಿಸಿಕೊಳ್ಳಲು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಒಟ್ಟು 2359 ಪ್ರಾಥಮಿP ಆರೋಗ್ಯ ಕೇಂದ್ರಗಳಿವೆ. 1437 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಯಂ ವೈದ್ಯರಿದ್ದಾರೆ. 436 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಎಸ್ ಗುತ್ತಿಗೆ ವೈದ್ಯ ಅಧಿಕಾರಿಗಳು 236 ಕೇಂದ್ರಗಳಲ್ಲಿ ಆಯುಷ್ ವೈದ್ಯಾಧಿಕಾರಿಗಲು 55 ಕೇಂದ್ರಗಳಲ್ಲಿ ಕಡ್ಡಾಯ ಗ್ರಾಮೀಣ ಸೇವೆಯಡಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದಲ್ಲದೆ ಎನ್‍ಎಚ್‍ಎಂ ಅಡಿ 159 ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವಿವರಣೆ ನೀಡಿದರು. ನಮ್ಮ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಶೇ.60ರಷ್ಟು ಬಡ ಮತ್ತು ಮಧ್ಯಮ ವರ್ಗದವರು ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ನಮಗೆ ಬಡವರ ಮೇಲೆ ಕಳಕಳಿಯ ಕಾಳಜಿ ಇದೆ. ಖಾಸಗಿಯಂತೆ ಸರ್ಕಾರಿ ಆಸ್ಪತ್ರೆಗಳಲ್ಲೂ ಉತ್ತಮ ಸೌಲಭ್ಯವಿರಬೇಕೆಂದು ಕೆಲಸ ಮಾಡುತ್ತಿದ್ದೇವೆ. ಇತ್ತೀಚೆಗಷ್ಟೇ 800 ನರ್ಸ್‍ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಇನ್ನು ಎರಡು ತಿಂಗಳಲ್ಲಿ ಸರಿಸುಮಾರು ಏಪ್ರಿಲ್‍ನೊಳಗೆ ನೇಮಕಾತಿಯನ್ನು ಪೂರ್ಣಗೊಳಿಸಿ ಕೊರತೆಯನ್ನು ನೀಗಿಸಲಾಗುವುದು ಎಂದರು.
ಪ್ರತಿಪಕ್ಷದ ಶಾಸಕರಾದ ಎ.ಟಿ.ರಾಮಸ್ವಾಮಿ ಮಾತನಾಡಿ, 2016ರಿಂದಲೂ ಗುತ್ತಿಗೆ ಆಧಾರದ ಮೇಲೆ ವೈದ್ಯರ ನೇಮಕಾತಿ ಆಗುತ್ತಿದೆ. ಅವರು ಒಂದೆರಡು ತಿಂಗಳು ಕೆಲಸ ಮಾಡಿ ಬಿಟ್ಟು ಹೋಗುತ್ತಾರೆ. ಖಾಯಂ ವ್ಯವಸ್ಥೆ ಮಾಡಿ ಎಂದರು. ಶಿವಾನಂದ್ ಪಾಟೀಲ್ ಮಾತನಾಡಿ, ಆರೋಗ್ಯ ಇಲಾಖೆ ಮತ್ತುವೈದ್ಯಕೀಯ ಶಿಕ್ಷಣ ಇಲಾಖೆ ನಡುವೆ ವೇತನದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ವೈದ್ಯಕೀಯಶಿಕ್ಷಣ ಇಲಾಖೆಯಲ್ಲಿ ಹೆಚ್ಚಿನ ವೇತನ ಸಿಗುತ್ತಿದೆ. ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಸ್ಥಾಪನೆ ವೇಳೆ ಜಿಲ್ಲಾಸ್ಪತ್ರೆಗಳು ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾವಣೆಗೊಳ್ಳುತ್ತಿವೆ. ಆಗ ಅವರ ವೇತನಶ್ರೇಣಿ ಹೆಚ್ಚಾಗುತ್ತಿದೆ.
