ಧಾರವಾಡ: ಪಾದರಾಯನಪುರವೇನು ಜಮೀರ್ ಅಜ್ಜನಾ ಆಸ್ತಿನಾ? ಶಾಸಕರಾದ ತಕ್ಷಣ ಪಾಳೆಗಾರಿಕೇನಾ? ಶಾಸಕ ಜಮೀರ್ ಅಹ್ಮದ್ ಚಾಮರಾಜ್ ಪೇಟೆಯ ಶಾಸಕ ಅಷ್ಟೇ, ಚಾಮರಾಜ್ ಕೋಟೆಯ ಶಾಸಕ ಅಲ್ಲ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಪಾದರಾಯನಪುರದಂತ ಘಟನೆಗಳು ಪದೇ ಪದೇ ನಡೆದಿರುವುದು ಖಂಡನೀಯ. ಇದರ ಹಿಂದೆ ಒಂದು ಕೈವಾಡವಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ಪಾದರಾಯನಪುರ ಪಾಕಿಸ್ತಾನದಲ್ಲಿ ಇಲ್ಲ, ನಮ್ಮ ದೇಶದಲ್ಲೇ ಇದೆ. ಇಲ್ಲಿ ಹೋಗುವಾಗ ನಮ್ಮನ್ನ ಕೇಳಿ ಹೋಗಬೇಕು ಅಂತಿರಲ್ಲಾ ಎಂದು ಶಾಸಕ ಜಮೀರ್ ವಿರುದ್ಧ ಆಕ್ರೋಶ ಹೊರಹಾಕಿದರು. ಅವರನ್ನ ಅಮಾಯಕರು ಎಂದು ಹೇಳುವುದು ಸರಿಯಲ್ಲ. ಇದಕ್ಕೆ ಸಮರ್ಥನೆ ಮಾಡಿಕೊಳ್ಳಬೇಡಿ. ನೀವೇ ಈ ಘಟನೆಗೆ ಕಾರಣ. ಮೇಲಿಂದ ಮೇಲೆ ಈ ಘಟನೆಯಾಗುತ್ತಿರುವುದು ಕೊರೊನಾ ಹಬ್ಬಿಸಲಿಕ್ಕೆ ಎಂದು ಆರೋಪಿಸಿದರು.
ರಾತ್ರಿ ಅಲ್ಲಿ ಗಲಭೆ ಮಾಡಿದ್ದು ಸರಿಯಲ್ಲ. ವೈದ್ಯರನ್ನ ಹಾಗೂ ಪೊಲೀಸರನ್ನ ಓಡಿಸಿದವರು ಮನುಷ್ಯರಾ ಎಂದು ಮುತಾಲಿಕ್ ಪ್ರಶ್ನಿಸಿದರು. ಈ ರೋಗ ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿದೆ. ಕೆಲವರು 24 ಗಂಟೆ ಕೆಲಸ ಮಾಡುತ್ತಿದ್ದಾರೆ, ಅವರ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ. ಇದರ ಹಿಂದೆ ಧರ್ಮ ಇಲ್ಲಾ ಎನ್ನುತ್ತಾರೆ. ಹಾಗಾದ್ರೆ ತಬ್ಲಿಘಿ ಯಾವ ಧರ್ಮ ಎಂದು ಪ್ರಶ್ನೆ ಮಾಡಿದರು.