ಚಿಕ್ಕಮಗಳೂರು: ಅಪ್ಪ-ಅಮ್ಮ ಕೊಟ್ಟ ಹಣವನ್ನು ಸೈಕಲ್ ತೆಗೆದುಕೊಳ್ಳಲು ಕೂಡಿಟ್ಟಿದ್ದ ಐದನೇ ತರಗತಿ ವಿದ್ಯಾರ್ಥಿನಿಯೋರ್ವಳು ಆ ಹಣವನ್ನ ಸಿಎಂ ಕೊರೊನಾ ನಿಧಿಗೆ ನೀಡಿದ್ದಾರೆ.
ನಗರದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ವಾಸವಿರುವ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರದೀಪ್ ಹಾಗೂ ಸುಮಿತ್ರ ಪುತ್ರಿ ಪ್ರಣತಿ ತನ್ನ ಹುಂಡಿಯ ಐದು ಸಾವಿರ ಹಣವನ್ನು ಕೊರೊನಾ ನಿಧಿಗೆ ನೀಡಿದ್ದಾರೆ. ಆರಂಭದಲ್ಲಿ ಈ ಹಣವನ್ನು ಪಿಎಂ ನಿಧಿಗೆ ನೀಡಬೇಕೆಂದು ಬಾಲಕಿಯ ಆಸೆ ಇತ್ತು. ಆದರೆ ಪಿಎಂ ಹಾಗೂ ಸಿಎಂ ಯಾರ ನಿಧಿಗೆ ಕೊಟ್ಟರೂ ಬಡವರಿಗೆ ಅನುಕೂಲವಾಗುತ್ತದೆ ಎಂದು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.
ಸೈಕಲ್ ತೆಗೆದುಕೊಳ್ಳಲು ಕೂಡಿಟ್ಟ ಹಣ ಒಳ್ಳೆಯದಕ್ಕೆ ಉಪಯೋಗವಾಗಲೆಂದು ವಿದ್ಯಾರ್ಥಿನಿ ಈ ಕೊರೊನಾ ಫಂಡ್‍ಗೆ ಕೊಟ್ಟಿದ್ದಾಳೆ. ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆಗಿದೆ. ಜನ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಹಾಗಾಗಿ ಮತ್ತೆ ಹಣ ಜೋಡಿಸಿ ಸೈಕಲ್ ತೆಗೆದುಕೊಳ್ಳುತ್ತೇನೆ. ಈ ಹಣದಿಂದ ಯಾರಿಗಾದರೂ ಸಹಾಯವಾಗಲಿ ಎಂದು ಸಿಎಂ ಕೊರೊನಾ ನಿಧಿಗೆ ನೀಡಿದ್ದಾಳೆ.
ಆರಂಭದಲ್ಲಿ ವಿಷಯ ತಿಳಿಯದ ಬಾಲಕಿ ತನ್ನ ಅಣ್ಣನ ಜೊತೆ ಒಂದು, ಎರಡು, ಐದು ರೂಪಾಯಿಯ ಕಾಯಿನ್ ಸೇರಿ ಐದು ಸಾವಿರ ಹಣದೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದಾರೆ. ಆದರೆ ಅಧಿಕಾರಿಗಳು ಹಣ ತೆಗೆದುಕೊಳ್ಳುವುದಿಲ್ಲ ಚೆಕ್ ನೀಡಬೇಕೆಂದು ಹೇಳಿದಕ್ಕೆ ಆ ಚಿಲ್ಲರೆ ಹಣವನ್ನು ಸಂಬಂಧಿಕರ ಬ್ಯಾಂಕ್ ಖಾತೆಗೆ ಕಟ್ಟಿ ಚೆಕ್ ತಂದು ಕೊಟ್ಟಿದ್ದಾರೆ. ವಿದ್ಯಾರ್ಥಿನಿಯ ಈ ನಿರ್ಧಾರಕ್ಕೆ ಕಾಫಿನಾಡಿನ ಜನ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಖುಷಿ ಪಟ್ಟಿದ್ದಾರೆ. ಇದೇ ವೇಳೆ ಬಾಲಕಿಯೊಂದಿಗೆ ಅಣ್ಣ ಲಿಖಿತ್ ಹಾಗೂ ಅಜ್ಜಿ ಸುಂದರಮ್ಮ ಜೊತೆಗಿದ್ದರು.