ಮಡಿಕೇರಿ: ಇಡೀ ವಿಶ್ವವನ್ನೇ ಆವರಿಸಿರುವ ಕೊರೊನಾ ಮಹಾಮಾರಿ ಸೋಂಕಿತರನ್ನು ಬಲಿ ಪಡೆಯುತ್ತಿರುವುದರ ಜೊತೆಗೆ ಬಡವರ ಜೀವನವನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ.
ಕೊಡಗು ಜಿಲ್ಲೆಯ ಕುಶಾಲನಗರದ ಕರಿಯಪ್ಪ ಬಡಾವಣೆ ವೃದ್ಧ ದಂಪತಿ ಕೊರೊನಾ ಲಾಕ್‍ಡೌನ್‍ನಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ವಿಲನ್ಸ್ ಮತ್ತು ಜಯಲಕ್ಷ್ಮಿ ದಂಪತಿ ಕನಿಷ್ಠ ಊಟಕ್ಕೂ ಗತಿ ಇಲ್ಲದೆ ಕಣ್ಣೀರು ಇಡುತ್ತಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಅಪಘಾತದಲ್ಲಿ ವಿಲನ್ಸ್ ಅವರ ಕಾಲು ಮುರಿದುಹೋಗಿತ್ತು. ಬಳಿಕ ಅಕ್ಕಪಕ್ಕದ ಮನೆಯವರಿಂದ 40 ಸಾವಿರ ರೂ. ಸಾಲ ಪಡೆದು ಸುಳ್ಯದಲ್ಲಿ ಅವರಿಗೆ ಶಸ್ತ್ರಚಿಕಿತ್ಸೆಗೆ ಮಾಡಿಸಲಾಗಿತ್ತು. ಬಳಿಕ ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿತ್ತು. ಆದರೆ ಲಾಕ್‍ಡೌನ್‍ನಿಂದ ಹಣಕಾಸಿನ ಸಮಸ್ಯೆ ಎದುರಾಗಿ ಅವರು ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವೇ ಆಗಿಲ್ಲ.
ಕೂಲಿ ಮಾಡಿ ಬದುಕುತ್ತಿದ್ದ ವಿಲನ್ಸ್ ಅವರಿಗೆ ಕಾಲು ಮುರಿದ ಮೇಲೆ ಅವರ ಪತ್ನಿ ಜಯಲಕ್ಷ್ಮಿ ಹೋಟೆಲ್‍ನಲ್ಲಿ ಕೆಲಸ ಮಾಡಿ ಪತಿಗೆ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಲಾಕ್‍ಡೌನ್‍ನಿಂದ ಹೋಟೆಲ್‍ಗಳೆಲ್ಲಾ ಬಂದ್ ಆಗಿವೆ. ಹೀಗಾಗಿ ಕೊರೊನಾ ಈ ವೃದ್ಧ ದಂಪತಿಯ ಕೂಲಿಯನ್ನೂ ಕಿತ್ತುಕೊಂಡಿದೆ.
ಬಾಡಿಗೆ ಮನೆಯಲ್ಲಿ ಬದುಕು ನಡೆಸುತ್ತಿರುವ ಇವರಿಗೆ ಸದ್ಯ ಪಡಿತರ ಅಂಗಡಿಯಿಂದ ವಿತರಣೆ ಮಾಡಿರುವ ಅಕ್ಕಿ, ಗೋಧಿ ಬಿಟ್ಟರೆ ಬೇರೆನೂ ಇಲ್ಲ. ಚಿಕಿತ್ಸೆಯ ಮಾತಿರಲಿ ಕನಿಷ್ಠ ಊಟಕ್ಕೂ ವ್ಯವಸ್ಥೆ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದ್ದು, ಪ್ರತಿದಿನ ವೃದ್ಧ ದಂಪತಿ ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ.