ಶಾಸಕರಾದ ಎಚ್.ಕೆ. ಕುಮಾರಸ್ವಾಮಿ ಹಾಗೂ ಕೆ.ಎಂ. ಶಿವಲಿಂಗೇಗೌಡ ಅವರು ಯೋಜನೆ ಬಗ್ಗೆ ಸಚಿವರಿಗೆ ಮಾಹಿತಿ ನೀಡಿ ತುರ್ತಾಗಿ ಕಾಮಗಾರಿಗಳು ಪೂರ್ಣವಾಗಬೇಕು. ಭೂಮಿ ಕಳೆದುಕೊಂಡವರಿಗೆ ತ್ವರಿತವಾಗಿ ಪರಿಹಾರ ವಿತರಣೆಯಾಗಬೇಕು ಹಾಗೂ ಮೊದಲ ಹಂತದ ಯೋಜನೆ ಆದಷ್ಟು ಬೇಗ ಮುಗಿಯಬೇಕು ಎಂದು ಮನವಿ ಮಾಡಿದರು.
ಹಾಸನ: ಜಲ ಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳೆ ಅವರು ಇಂದು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಎತ್ತಿನ ಹೊಳೆ ಯೋಜನೆ ಕಾಮಗಾರಿ ಪರಿಶೀಲನೆ ನಡೆಸಿದರು.
ಸಕಲೇಶಪುರ ತಾಲ್ಲೂಕಿನ ಕುಂಬರಡಿ, ಕಾಡುಮನೆ, ಹೆಬ್ಬನಳ್ಳಿ ಗ್ರಾಮಗಳಲ್ಲಿನ ಯೋಜನಾ ಸ್ಥಳಗಳಿಗೆ ಭೇಟಿ ನೀಡಿದ ಸಚಿವರು ಬಯಲು ಸೀಮೆಗೆ ನೀರುಣಿಸುವ ಎತ್ತಿನಹೊಳೆ ಯೋಜನೆ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಅಮೃತ ಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ನಿಂದ ನೀರನ್ನು ಲಿಫ್ಟ್ ಮಾಡುವ ತಂತ್ರಜ್ಞಾನ ಕಾಮಗಾರಿ ಕೈಗೊಂಡಿದ್ದು, ಉತ್ತಮವಾಗಿ ಕೆಲಸ ನಡೆಯುತ್ತಿದೆ. ಭರದಿಂದ ಕೆಲಸ ಸಾಗುತ್ತಿದ್ದು, ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಡ್ವಾನ್ಸ್ ಟೆಕ್ನಾಲಜಿಯುಳ್ಳ ಉತ್ತಮ ಗುಣಮಟ್ಟದ ಯಂತ್ರಗಳನ್ನು ಅಳವಡಿಸಲಾಗಿದೆ. ಎತ್ತಿನಹೊಳೆ ಕಾಮಗಾರಿ ವೀಕ್ಷಣೆ ವೇಳೆ ಅಮೃತ ಕನ್ಸ್‌ಟ್ರಕ್ಷನ್ ವ್ಯವಸ್ಥಾಪಕ ನಿರ್ದೇಶಕರಾದ ಪಿವಿ ರಾವ್ ಅವರಿಂದ ಸಚಿವ ರಮೇಶ್ ಜಾರಕಿಹೊಳಿ ಮಾಹಿತಿ ಪಡೆದರು.
ಕಾಮಗಾರಿ ವೀಕ್ಷಣೆ ಬಳಿಕ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, 2021 ರ ಮಾರ್ಚ್ ವೇಳೆಗೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಿ 37 ಕಿ.ಮೀ. ವರೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು. ಕೋವಿಡ್ 19 ಹಿನ್ನೆಲೆಯಲ್ಲಿ ಕಾಮಗಾರಿ ವಿಳಂವಾಗಿದೆ. ಇನ್ನು ಮಂದೆ ಕ್ಷಿಪ್ರವಾಗಿ ಕೆಲಸ ನಡೆಸಲಾಗುವುದು. ಆದಷ್ಟು ಬೇಗ ಬಯಲು ಸೀಮೆಗೆ ನೀರು ಹರಿಸಬೇಕೆಂಬುದು ಸರ್ಕಾರದ ಗುರಿಯಾಗಿದೆ ಎಂದರು.
ಯೋಜನೆಯಿಂದ ಬಾದಿತವಾಗಿರುವ ಸಕಲೇಶಪುರ ಆಲೂರು ತಾಲ್ಲೂಕುಗಳಲ್ಲಿ ಈಗಾಗಾಲೇ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಗಮನಹರಿಸಲಾಗಿದ್ದು, ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
ನೀರಿನ ವಿಚಾರದಲ್ಲಿ ಮಾತ್ರ ಯಾರೂ ಯಾವುದೇ ರಾಜಕೀಯ ಮಾಡಬಾರದು. ಅನುದಾನ ಒದಗಿಸುವ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ಆದರೆ ಮುಂದಿನ ದಿನಗಳಲ್ಲಿ ಎಲ್ಲವನ್ನು ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದರು.
ಕಳೆದ ಫೆಬ್ರವರಿಯಲ್ಲಿ ತಾವು ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಅಂದಿನಿಂದ ಎಲ್ಲಾ ಜಲಾಶಯಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದೇನೆ. ಜೊತೆಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಜ್ಯದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು.ಎತ್ತಿನಹೊಳೆ ನೀರನ್ನು ಉತ್ತರ ಭಾಗಕ್ಕೆ ಕೊಂಡೊಯ್ಯುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಎಲ್ಲಾ ಭಾಗದ ರೈತರು ನಮ್ಮವರೇ. ಹಾಗಾಗಿ ಎಲ್ಲರ ಹಿತ ಕಾಪಾಡಬೇಕಾಗುತ್ತದೆ. ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಲಾಗುವುದು ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನೀರಾವರಿ ಬಗ್ಗೆ ಹೆಚ್ಚಿನ ಕಾಳಜಿ ಇರುವುದರಿಂದ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳಲು ಯಾವುದೇ ರೀತಿಯ ಸಮಸ್ಯೆ ಆಗದು. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆದಷ್ಟು ಬೇಗ ರೈತರಿಗೆ ಪರಿಹಾರ ನೀಡುವ ಮೂಲಕ ನೀರಾವರಿಗೆ ಬೇಕಾಗುವಂತಹ ಎಲ್ಲಾ ರೀತಿಯ ಹಣದ ಸಮಸ್ಯೆಯನ್ನು ನಾವು ಬಗೆಹರಿಸುತ್ತೇವೆ. ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ವಿಶೇಷ ಸಭೆ ನಡೆಸಿದ್ದು, ಯೋಜನೆ ಅನುಷ್ಠಾನಕ್ಕೆ ಮತ್ತಷ್ಟು ಹೆಚ್ಚಿನ ಒತ್ತು ನೀಡುತ್ತೇವೆ ಎಂದು ತಿಳಿಸಿದರು.
ಇಲಾಖೆಯ ಸರ್ವೆ ಪ್ರಕಾರ ಎತ್ತಿನಹೊಳೆಯಲ್ಲಿ ಮಳೆಗಾಲದಲ್ಲಿ ಅಂದಾಜು 24.1 ಟಿ.ಎಂ.ಸಿ ನೀರು ಲಭ್ಯವಿದೆ. ಈಗಾಗಲೇ ಚೆಕ್ ಡ್ಯಾಮ್ ಗಳ ಕೆಲಸ ಮುಗಿಯುವ ಹಂತಕ್ಕೆ ತಲುಪಿದ್ದು 100 ಮೀಟರ್ ಎತ್ತರಕ್ಕೆ ನೀರನ್ನು ಹರಿಸಲಾಗುವುದು. ಕೊರೋನಾದಿಂದ ಕೆಲವರು ಈಗಾಗಲೇ ಜಿಲ್ಲೆಯಿಂದ ತಮ್ಮ ಸ್ವಂತ ರಾಜ್ಯಕ್ಕೆ ತೆರಳಿದ್ದಾರೆ. ಆ ಕಾರಣಕ್ಕೆ ಯೋಜನೆ ವಿಳಂಬವಾಗಲು ಬಿಡುವುದಿಲ್ಲ. ಪರ್ಯಾಯ ಮಾರ್ಗಗಳನ್ನು ಕಂಡುಕೊಂಡು ಯೋಜನೆಯನ್ನು ಮುಂದುವರೆಸಿ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಶಾಸಕರಾದ ಎಚ್.ಕೆ. ಕುಮಾರಸ್ವಾಮಿ ಹಾಗೂ ಕೆ.ಎಂ. ಶಿವಲಿಂಗೇಗೌಡ ಅವರು ಯೋಜನೆ ಬಗ್ಗೆ ಸಚಿವರಿಗೆ ಮಾಹಿತಿ ನೀಡಿ ತುರ್ತಾಗಿ ಕಾಮಗಾರಿಗಳು ಪೂರ್ಣವಾಗಬೇಕು. ಭೂಮಿ ಕಳೆದುಕೊಂಡವರಿಗೆ ತ್ವರಿತವಾಗಿ ಪರಿಹಾರ ವಿತರಣೆಯಾಗಬೇಕು ಹಾಗೂ ಮೊದಲ ಹಂತದ ಯೋಜನೆ ಆದಷ್ಟು ಬೇಗ ಮುಗಿಯಬೇಕು ಎಂದು ಮನವಿ ಮಾಡಿದರು.