ಬೆಂಗಳೂರು: ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರು ಮತ್ತು ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಪೌರ ಕಾರ್ಮಿಕರಿಗೆ 30 ಲಕ್ಷ ರೂ. ಜೀವ ವಿಮೆ ಸೌಲಭ್ಯವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಘೋಷಿಸಿದೆ. ಈ ಮೂಲಕ ಕೊರೋನಾ ವಿರುದ್ಧದ ಸಮರದಲ್ಲಿ ಸಾವನ್ನಪ್ಪುವ ವಾರಿಯರ್ಸ್ಗೆ 30 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಲಾಗಿದೆ. ಆದರೀಗ, ವೈದ್ಯರು, ಪೊಲೀಸರು, ಪೌರ ಕಾರ್ಮಿಕರು ಮತ್ತು ಅಂಗನವಾಡಿ ಕಾರ್ಯಕರ್ತರಂತೆಯೇ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹಗಲು ರಾತ್ರಿಯೆನ್ನದೇ ಶ್ರಮಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ಅಂದರೆ ಪತ್ರಕರ್ತರಿಗೆ ಯಾಕೇ ಸರ್ಕಾರ ವಿಮೆ ಘೋಷಿಸಿಲ್ಲ ಎಂಬುದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಕೆಯಾಗಿದೆ.
ಕೋರಮಂಗಲ ನಿವಾಸಿ ಜಾಕಬ್ ಜಾರ್ಜ್ ಎಂಬ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಚ್. ಸುನೀಲ್ ಕುಮಾರ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ರಾಜ್ಯ & ಕೇಂದ್ರ ಸರ್ಕಾರಗಳು ಈಗಾಗಲೇ ವೈದ್ಯಕೀಯ ವಿಮೆ ಘೋಷಿಸಿವೆ. ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಸಿಬ್ಬಂದಿಗಳು, ಪೊಲೀಸರು, ಪ್ಯಾರಾ ಮಿಲಿಟರಿಯವರಿಗೆ ವಿಮೆ ಘೋಷಿಸಿದೆ. ಆದರೆ, ಇಷ್ಟು ಇಲಾಖೆಯ ಸಿಬ್ಬಂದಿಯನ್ನ ಕೊರೊನಾ ವಾರಿಯರ್ಸ್ ಎನ್ನುವ ಸರ್ಕಾರ ಯಾಕೇ ಮಾಧ್ಯಮದವರಿಗೆ ವಿಮೆ ಘೋಷಿಸಿಲ್ಲ ಎಂದು ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.
ಪತ್ರಕರ್ತರು ಹಗಲು ರಾತ್ರಿಯೆನ್ನದೇ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮದ ಮೂಲಕ ಜನರಿಗೆ ಕೊರೊನಾ ಅರಿವು ಮೂಡಿಸುತ್ತಿದ್ದಾರೆ. ಸಾರ್ವಜನಿಕರಿಗೆ ಕೊರೊನಾದಿಂದ ಜಾಗರೂಕರಾಗಿರಲು ತಿಳಿಸುತ್ತಿದ್ದಾರೆ. ಇಂತವರಿಗೆ ಯಾವುದೇ ಆರೋಗ್ಯ ಭಧ್ರತೆ ಇಲ್ಲ. ಸದ್ಯ ಫೀಲ್ಡ್ನಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ರಕ್ಷಣಾ ಕಿಟ್ಗಳು ಸಹ ಇಲ್ಲ. ಈಗಾಗಲೇ ಕೆಲ ರಾಜ್ಯದಲ್ಲಿ ಅನೇಕ ಮಾಧ್ಯಮ ಪ್ರತಿನಿಧಿಗಳಿ ಸೋಂಕು ತಗುಲಿದೆ. ಹೀಗಾಗಿ ಇವರಿಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ 50 ಲಕ್ಷ ರೂ. ಜೀವ ವಿಮೆ ಘೋಷಿಸಬೇಕು ಎಂದಿದ್ಧಾರೆ.ಮಾಧ್ಯಮದವರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದರೇ 50 ಲಕ್ಷ ಜೀವ ವಿಮೆ ಘೋಸಿಸಬೇಕು. ಹಾಗೂ ಮೃತ ಪ್ರತಿನಿಧಿಯ ಕುಟುಂಬಕ್ಕೆ ಕಂಪನಿಯಿಂದ 50 ಲಕ್ಷ ವಿಮೆ ನೀಡಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.