ಬೆಂಗಳೂರು: ತುಮಕೂರು ಜಿಲ್ಲೆಯ ತಿಪ್ಪೂರು ಗ್ರಾಮದಲ್ಲಿ ಅಡಿಕೆ ಹಾಗೂ ತೆಂಗಿನ ಮರಗಳನ್ನ ಸ್ಥಳೀಯ ತಹಶೀಲ್ದಾರ್ ಮೇರೆಗೆ ಗ್ರಾಮ ಲೆಕ್ಕಿಗ ಕಡಿದು ಹಾಕಿದ್ದಾರೆ ಎಂದೇಳುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ಪ್ರತಿಕ್ರಿಯಿಸಿದ್ದಾರೆ.
ರೈತರ ನೂರಾರು ಅಡಿಕೆ, ತೆಂಗಿನ ಮರಗಳನ್ನು ಒತ್ತುವರಿ ತೆರವು ಮಾಡುವ ನೆಪದಲ್ಲಿ ಕತ್ತರಿಸಿ ಹಾಕಿರುವುದು ಒಳ್ಳೆದಲ್ಲ ಇದು ಖಂಡನೀಯ ಎಂದು ಮಾಜಿ ಸಿಎಂ ಅವರು ಹೇಳಿದ್ದಾರೆ.
ರೈತರ ಬದುಕಿಗೆ ಕೊಳ್ಳಿ ಇಟ್ಟ ಬೇಜವಾಬ್ದಾರಿ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಬೇಕು. ಬೀದಿಗೆ ಬಿದ್ದ ರೈತರಿಗೆ ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು ಎಂದು ಟ್ವಿಟರ್ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಸಾವಿರಾರು ಮರಗಳನ್ನು ಕತ್ತರಿಸಿ, ಕೆರೆ ಕುಂಟೆಗಳನ್ನು ನುಂಗಿ ಬಡಾವಣೆಗಳನ್ನು ಮಾಡಿ ಕೋಟ್ಯಾಧೀಶರಾದವರ ತಂಟೆಗೆ ಹೋಗದ ಅಧಿಕಾರಿಗಳು ಬಡ ರೈತರ ಮೇಲೆ ಸವಾರಿ ಮಾಡುತ್ತಿರುವುದು ಎಷ್ಟು ಸರಿ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.