ಗೋಕಾಕ: ಇಲ್ಲಿನ ಪ್ರತಿಷ್ಠಿತ ಯೋಗಿಕೊಳ್ಳದ ನಿರ್ವಾಣೇಶ್ವರ ಮಠದ ಪೀಠಾಧಿಪತಿ ವೀರಭದ್ರೆಶ್ವರ ಸ್ವಾಮೀಜಿಗಳ ಮೇಲೆ ಸಚಿವ ರಮೇಶ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ ದಬ್ಬಾಳಿಕೆಯಿಂದ ಭಯಪಟ್ಟು ಮಠಕ್ಕೆ ಬೀಗ ಹಾಕಿ ಶ್ರೀಗಳು ಊರು ಬಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅವಧೂತ ಪರಂಪರೆಯ ನಿರ್ವಾಣೇಶ್ವರ ಮಠದ ವೀರಭದ್ರ ಸ್ವಾಮೀಜಿ ಗೋಕಾಕ್ ತಾಲೂಕಿನ ಯೋಗಿಕೊಳ್ಳದಲ್ಲಿರುವ ಮಠಕ್ಕೆ 15 ವರ್ಷಗಳಿಂದ ಪೀಠಾಧಿಪತಿಯಾಗಿದ್ದಾರೆ.
ಎರಡು ವರ್ಷಗಳ ಹಿಂದೆ ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ್ ತಮ್ಮ ಬೆಂಬಲಿಗರಿಗೆ ಪುರ್ವಾಶ್ರಮದ ಜಮೀನು ಮಾರಾಟ ಮಾಡಲು ಸ್ವಾಮಿಜಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಳಿಕ ಸ್ವಾಮೀಜಿಯವರು ಐದು ಎಕರೆ ಜಮೀನು ಮಾರಾಟ ಮಾಡಿದ್ದಾರೆ. ಜಮೀನು ಮಾರಾಟದ ಹಣ ಕೂಡ ಅಂಬಿರಾವ್ ಪಾಟೀಲ್ ನೀಡುತ್ತಿಲ್ಲವೆಂದು ಆರೋಪ ಕೇಳಿ ಬಂದಿದೆ. ಸ್ವಾಮೀಜಿಯವರು ಹಣ ಕೊಡುವಂತೆ ಕೇಳಿದ್ದಕ್ಕೆ ಅಂಬಿರಾವ್ ಪಾಟೀಲ್ ಹಾಗೂ ಪ್ರಮುಖರಿಂದ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಠಕ್ಕೆ ಬೀಗ ಹಾಕಿ ವೀರಭದ್ರೇಶ್ವರ ಸ್ವಾಮೀಜಿ ಊರು ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.