Breaking News
Home / ಜಿಲ್ಲೆ / ವಿರೋಧ ಪಕ್ಷಗಳ ಕುತಂತ್ರಕ್ಕೆ ಬಲಿಯಾಗಬಾರದು ರೈತ ಪರ ಯೋಜನೆಗಳ ಅನುಷ್ಠಾನಕ್ಕೆ ಸಹಕಾರ ನೀಡಬೇಕು: ಈರಣ್ಣ ಕಡಾಡಿ

ವಿರೋಧ ಪಕ್ಷಗಳ ಕುತಂತ್ರಕ್ಕೆ ಬಲಿಯಾಗಬಾರದು ರೈತ ಪರ ಯೋಜನೆಗಳ ಅನುಷ್ಠಾನಕ್ಕೆ ಸಹಕಾರ ನೀಡಬೇಕು: ಈರಣ್ಣ ಕಡಾಡಿ

Spread the love

ಬೆಳಗಾವಿ: ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸೇರಿದಂತೆ ಕೃಷಿಗೆ ಸಂಬಂಧಿಸಿದ ನೀತಿಗಳು ಕೃಷಿಕರ ಪರವಾಗಿವೆ. ಆದರೆ, ವಿರೋಧ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ರೈತರನ್ನು ಎತ್ತಿ ಕಟ್ಟುತ್ತಿವೆ’ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು.

ಇಲ್ಲಿನ ಪಕ್ಷದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ವಿರೋಧ ಪಕ್ಷಗಳ ಕುತಂತ್ರಕ್ಕೆ ಬಲಿಯಾಗಬಾರದು. ರೈತ ಪರ ಯೋಜನೆಗಳ ಅನುಷ್ಠಾನಕ್ಕೆ ಸಹಕಾರ ನೀಡಬೇಕು’ ಎಂದು ಕೋರಿದರು.

‘ದೇಶದ ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಹಾಗೂ ಅವರ ಆದಾಯ ದ್ವಿಗುಣಗೊಳಿಸಲು ಹಲವಾರು ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೆ ತರುತ್ತಿದೆ.

ಇದನ್ನು ಅರ್ಥ ಮಾಡಿಕೊಳ್ಳಬೇಕು. ಯೋಜನೆಗಳ ಲಾಭ ಪಡೆದು ಆದಾಯ ಹೆಚ್ಚಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದು, ಕೃಷಿಯೇತರ ಭೂಮಿ ಖರೀದಿಯಲ್ಲಿ ಅಡಚಣೆ ಆಗದಂತೆ ತಡೆಯುವುದೇ ಆಗಿದೆ. ಇದರೊಂದಿಗೆ ಉದ್ಯೋಗ ಸೃಷ್ಟಿಸಲು ಕೂಡ ನೆರವಾಗಲಿದೆ. ಇಲ್ಲಿನ ಕೃಷಿ ಉತ್ಪನ್ನಗಳ ರಪ್ತು ಹೆಚ್ಚಳವಾಗಿ ರಾಜ್ಯಕ್ಕೆ ಲಾಭವಾಗಲಿದೆ. ಜೊತೆಗೆ ಕೃಷಿ ಮಾಡಲು ಬಯಸುವವರಿಗೆ ಸಹಾಯವಾಗಲಿದೆ. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆಯಿಂದ ಕೃಷಿ ಉತ್ಪಾದನೆ ಅಥವಾ ಪಾಲನೆಗಾಗಿ ರೈತ ಖರೀದಿದಾರರ ಮಧ್ಯೆ ನೇರವಾದ ಒಪ್ಪಂದ ಮಾಡಿಕೊಳ್ಳಬಹುದು’ ಎಂದು ಸಮರ್ಥಿಸಿಕೊಂಡರು.

‘ವಿರೋಧಪಕ್ಷದವರು ಸರಿಯಾದ ಮಾಹಿತಿ ನೀಡದೆ ರೈತರ ದಾರಿ ತಪ್ಪಿಸುತ್ತಿದ್ದಾರೆ. ಕೆಲವು ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲ ನೀಡಬಾರದು’ ಎಂದು ಕೋರಿದರು.

ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ ಇದ್ದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ