Breaking News
Home / ಜಿಲ್ಲೆ / ಬೆಂಗಳೂರು / ಕೆಪಿಎಸ್‌ಸಿ: ಮುಗಿಯದ ಗೋಳು, ಅಧಿಕಾರಿಗಳ ಅಳಲು

ಕೆಪಿಎಸ್‌ಸಿ: ಮುಗಿಯದ ಗೋಳು, ಅಧಿಕಾರಿಗಳ ಅಳಲು

Spread the love

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ 2006ರಲ್ಲಿ ನೇಮಕಗೊಂಡಿದ್ದ 1998ನೇ ಸಾಲಿನ 383 ಅಧಿಕಾರಿಗಳ ಆಯ್ಕೆ ಪಟ್ಟಿಯನ್ನು 15 ವರ್ಷಗಳ ಬಳಿಕ ಕೆಪಿಎಸ್‌ಸಿ ಜ. 30ರಂದು ಮೂರನೇ ಬಾರಿಗೆ ಪರಿಷ್ಕರಿಸಿದೆ. ಹೊಸ ಪಟ್ಟಿಯ ಪ್ರಕಾರ 168 ಅಧಿಕಾರಿಗಳ ಇಲಾಖೆ, ಹುದ್ದೆ, ವೃಂದ ಬದಲಾಗಿದ್ದು, ಅಧಿಕಾರಿಗಳ ಮರು ನೇಮಕಕ್ಕೆ ಸರ್ಕಾರ ಮುಂದಾಗಿದೆ.

ಆದರೆ, ಹುದ್ದೆ ಬದಲಾದವರ ಪೈಕಿ ಅರ್ಧಕ್ಕೂ ಹೆಚ್ಚು ಅಧಿಕಾರಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ (ಕೆಎಟಿ) ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ಇಲ್ಲದವರ ಪೈಕಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌, ವಾಣಿಜ್ಯ ತೆರಿಗೆ ಅಧಿಕಾರಿ, ಮಾರುಕಟ್ಟೆ ಅಧಿಕಾರಿ ಮುಂತಾದ ಹುದ್ದೆಗಳಲ್ಲಿರುವ 16 ಅಧಿಕಾರಿಗಳನ್ನು ಹಾಲಿ ಹುದ್ದೆಯಿಂದ ತಕ್ಷಣದಿಂದ ಬಿಡುಗಡೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಆದೇಶ ಹೊರಡಿಸಿದೆ.

‘ಕೆಪಿಎಸ್‌ಸಿಯ ತಪ್ಪು ನಡೆಯಿಂದ ಈ ಸಾಲಿನ ಆಯ್ಕೆ ಪಟ್ಟಿ ಈಗಾಗಲೇ ಮೂರು ಬಾರಿಗೆ ಪರಿಷ್ಕರಣೆಗೊಂಡಿದೆ. ಅಲ್ಲದೆ, ಹೈಕೋರ್ಟ್‌ ನೀಡಿರುವ ತೀರ್ಪುಗಳನ್ನು ಅನುಷ್ಠಾನಗೊಳಿಸುವ ವಿಷಯದಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ನಮ್ಮದು ಮುಗಿಯದು ಗೋಳು’ ಎಂದು ಹುದ್ದೆ ಬದಲಾಗುತ್ತಿರುವ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಾಲಿನ ಆಯ್ಕೆ ಪಟ್ಟಿಯನ್ನು ಕೆಪಿಎಸ್‌ಸಿ ಮೊದಲ ಬಾರಿಗೆ 2006ರ ಫೆ. 28ರಂದು ಪ್ರಕಟಿಸಿತ್ತು. ಬಳಿಕ, ಹೈಕೋರ್ಟ್‌ ನಿರ್ದೇಶನದಂತೆ 2019 ಜ. 25ರಂದು ಪರಿಷ್ಕರಿಸಿತ್ತು. ಅದೇ ವರ್ಷ ಆಗಸ್ಟ್‌ 28ರಂದು ಮತ್ತೊಮ್ಮೆ ಪರಿಷ್ಕರಿಸಿತ್ತು. ಆದರೆ, ಹೈಕೋರ್ಟ್‌ ನೀಡಿದ್ದ ತೀರ್ಪನ್ನು ತಪ್ಪಾಗಿ ಭಾವಿಸಿ 91 ಉತ್ತರ ಪತ್ರಿಕೆಗಳ ಬದಲು 91 ಅಭ್ಯರ್ಥಿಗಳ ಉತ್ತರ ಪತ್ರಿಕೆಯನ್ನು ಮರುಮೌಲ್ಯಮಾಪನ ಮಾಡಿದ ಕಾರಣ ಆಗಸ್ಟ್‌ 28ರ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ಕೆಲವರು ಮೇಲ್ಮನವಿ ಸಲ್ಲಿಸಿದ್ದರು. ಹೀಗಾಗಿ, ಕೆಪಿಎಸ್‌ಸಿ ಮೂರನೇ ಬಾರಿ ಆಯ್ಕೆ ಪಟ್ಟಿ ಪರಿಷ್ಕರಿಸಿ ಜ. 30ರಂದು ಪ್ರಕಟಿಸಿದೆ.

ಮೊದಲ ಆಯ್ಕೆ ಪಟ್ಟಿಯ ಪ್ರಕಾರ ನೇಮಕಗೊಂಡಿದ್ದ ಅಧಿಕಾರಿಗಳ ಇಲಾಖೆ, ಹುದ್ದೆ, ವೃಂದ, ಮೂರನೇ ಬಾರಿ ಪರಿಷ್ಕರಿಸಿದ್ದ (ಜ. 30ರಂದು) ಪಟ್ಟಿಯಲ್ಲಿ ಬದಲಾಗಿದೆ. ಆದರೆ, ಮೊದಲ ಎರಡು ಬಾರಿ (2019 ಜ. 25 ಮತ್ತು ಆಗಸ್ಟ್‌ 28) ಪರಿಷ್ಕರಿಸಿದ್ದ ಪಟ್ಟಿ ಪ್ರಕಾರ ಹುದ್ದೆ ಬಲಾಗಿದ್ದ 79 ಅಧಿಕಾರಿಗಳ ಪೈಕಿ 67 ಅಧಿಕಾರಿಗಳ ಹುದ್ದೆಗಳು ಮೂರನೇ ಪಟ್ಟಿಯಲ್ಲಿ ಬದಲಾವಣೆ ಆಗಿಲ್ಲ.

‘ನ್ಯಾಯಾಲಯದಿಂದ ತಡೆಯಾಜ್ಞೆ ತಂದವರನ್ನು ಬಿಟ್ಟು, ಉಳಿದಂತೆ ಹುದ್ದೆ ಬದಲಾದ ಎಲ್ಲ ಅಧಿಕಾರಿಗಳನ್ನು ಬದಲಾದ ಹುದ್ದೆಗಳಿಗೆ ನೇಮಿಸಿ ಆದೇಶ ಹೊರಡಿಸಲಾಗುತ್ತಿದೆ. ಎಂದು ಡಿಪಿಎಆರ್ ಅಧಿಕಾರಿಯೊಬ್ಬರು ತಿಳಿಸಿದರು.

ಕೆಎಟಿ ಮೆಟ್ಟಿಲೇರಿದ 43 ಅಧಿಕಾರಿಗಳು
ಜ. 30ರಂದು ಪ್ರಕಟಿಸಿರುವ ಪರಿಷ್ಕತ ಪಟ್ಟಿಯನ್ನು ಪ್ರಶ್ನಿಸಿ 43 ಅಧಿಕಾರಿಗಳು ಕೆಎಟಿ ಮೆಟ್ಟಿಲೇರಿದ್ದಾರೆ. ಈ ಅಧಿಕಾರಿಗಳ ಹುದ್ದೆಯ ವಿಷಯದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಕೆಎಟಿ ಆದೇಶಿಸಿದೆ. ಜ. 30ರ ಪಟ್ಟಿಯಲ್ಲಿರುವ 33 ಅಧಿಕಾರಿಗಳು ನಿಧನ, ಹುದ್ದೆಗೆ ರಾಜೀನಾಮೆ, ವರದಿ ಮಾಡಿಕೊಂಡಿಲ್ಲ ಮುಂತಾದ ಕಾರಣಗಳಿಗೆ ಸದ್ಯ ಹುದ್ದೆಯಲ್ಲಿ ಇಲ್ಲ. 15 ಅಧಿಕಾರಿಗಳು 2019ರ ಜ. 25 ಮತ್ತು ಆಗಸ್ಟ್‌ 28ರ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ಕೆಎಟಿಯಲ್ಲಿ ಅರ್ಜಿ ದಾಖಲಿಸಿದ್ದಾರೆ. 8 ಪ್ರಕರಣಗಳಲ್ಲಿ ಕೆಎಟಿ ಏಕರೂಪದ ಆದೇಶ ನೀಡಿದ್ದು, ಮರುಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳ್ಳುವರೆಗೆ ಈ ಅರ್ಜಿದಾರರು ಹಾಲಿ ಹುದ್ದೆಯಲ್ಲಿಯೇ ಮಂದುವರಿಸುವಂತೆ ಆದೇಶಿಸಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ