Breaking News
Home / ಜಿಲ್ಲೆ / ಬೆಂಗಳೂರು / ರಾಜ್ಯ ಮಾಡಿರುವ ಸಾಲದ ವಿಚಾರದಲ್ಲಿ ಬಿಜೆಪಿ ಸುಳ್ಳು ಅಭಿಪ್ರಾಯಗಳನ್ನು ರೂಪಿಸುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆರೋಪಿ

ರಾಜ್ಯ ಮಾಡಿರುವ ಸಾಲದ ವಿಚಾರದಲ್ಲಿ ಬಿಜೆಪಿ ಸುಳ್ಳು ಅಭಿಪ್ರಾಯಗಳನ್ನು ರೂಪಿಸುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆರೋಪಿ

Spread the love

ಬೆಂಗಳೂರು : ರಾಜ್ಯ ಮಾಡಿರುವ ಸಾಲದ ವಿಚಾರದಲ್ಲಿ ಬಿಜೆಪಿ ಸುಳ್ಳು ಅಭಿಪ್ರಾಯಗಳನ್ನು ರೂಪಿಸುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ತಾವು ಮುಖ್ಯಮಂತ್ರಿಯಾಗಿದ್ದಾಗ ಮಾಡಿರುವ ಸಾಲದ ಬಗ್ಗೆ ಅಂಕಿ-ಅಂಶ ಸಮೇತ ವಿವರ ನೀಡಿರುವ ಅವರು, ಹಿಂದಿನ ಮುಖ್ಯಮಂತ್ರಿಗಳು ಹೆಚ್ಚು ಸಾಲ ಮಾಡಿಬಿಟ್ಟಿದ್ದರು ಎಂದು ಅಪಪ್ರಚಾರ ನಿಲ್ಲಿಸಿ, ಬಡವರಿಗೆ ಕೂಡಲೇ ಆಹಾರ ಮತ್ತು ಆರ್ಥಿಕ ಪ್ಯಾಕೇಜು ಘೋಷಿಸಬೇಕೆಂದು ಮತ್ತು ರಾಜ್ಯದ ಆರ್ಥಿಕ ಸ್ಥಿತಿಯ ಕುರಿತು ಶ್ವೇತ ಪತ್ರ ಹೊರಡಿಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.

ನಾವು ರಾಜ್ಯದ ಜನರಿಗೆ ಸೂಕ್ತ ಪ್ಯಾಕೇಜು ನೀಡಿ ಎಂದರೆ, ಬಿಜೆಪಿಯಲ್ಲಿ ಕೆಲವರು ಸಿದ್ದರಾಮಯ್ಯನವರು ಸಾಲ ಮಾಡಿದ್ದರು. ಅದರಿಂದಾಗಿ ರಾಜ್ಯದಲ್ಲಿ ಹಣಕಾಸಿನ ಸಮಸ್ಯೆಯಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಅಭಿಪ್ರಾಯಗಳನ್ನು ರೂಪಿಸುತ್ತಿದ್ದಾರೆ. ಬಿಜೆಪಿ ಎಂದರೆ ಸುಳ್ಳಿನ ಕಾರ್ಖಾನೆ ಎಂಬುದರ ಕುರಿತು ನಾಡಿನ ಜನರಿಗೆ ಈಗ ಯಾವ ಸಂಶಯವೂ ಉಳಿದಿಲ್ಲ ಎಂದರು.

2008-2013 ರ ವರೆಗಿನ ಬಿ ಜೆ ಪಿ ಸರ್ಕಾರದ ಅವಧಿಯಲ್ಲಿನ ಸಾಲದ ಪ್ರಮಾಣ ಹಿಂದಿನ ಸರ್ಕಾರದ ಅವಧಿಗೆ ಹೋಲಿಸಿದರೆ ಒಟ್ಟಾರೆ ಶೇ. 94.18 ರಷ್ಟು ಏರಿಕೆಯಾಗಿತ್ತು. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ 2013-18 ರವರೆಗೆ ಶೇ.78 ರಷ್ಟು ಮಾತ್ರ ಏರಿಕೆಯಾಗಿತ್ತು. ಹಿಂದಿನಿಂದಲೂ ಪ್ರತಿ ವರ್ಷ 20 ರಿಂದ 30 ಸಾವಿರ ಕೋಟಿ ರೂ ಗಳಷ್ಟು ಸಾಲ ಮಾಡುವುದು ಮತ್ತು ತೀರಿಸುವುದು ವಾಡಿಕೆ. 2012-13 ರಲ್ಲೂ 21609 ಕೋಟಿ ಸಾಲ ಮಾಡಲಾಗಿತ್ತು. 2017-18 ರವರೆಗೆ ರಾಜ್ಯದ ಒಟ್ಟಾರೆ ಸಾಲ 242420 ಕೋಟಿ ಮಾತ್ರ ಇತ್ತು. ಈಗ ರಾಜ್ಯ ಸರ್ಕಾರವೇ ಅಧಿಕೃತವಾಗಿ ಹೇಳುವ ಮಾಹಿತಿಯಂತೆ ಈ ವರ್ಷದ ಕಡೆಗೆ 457899 ಕೋಟಿ ಗಳಷ್ಟು ಸಾಲವಾಗುತ್ತಿದೆ. ಬಹುಶಃ ಅದು ಇನ್ನಷ್ಟು ಹೆಚ್ಚುವ ಸಾಧ್ಯತೆಯೂ ಇದೆ. 2020-21 ರಲ್ಲಿ 69000 ಕೋಟಿ ಸಾಲ ಮಾಡಲಾಗಿದೆ. ಅಂದರೆ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಸರ್ಕಾರ 214479 ಕೋಟಿಗಳಷ್ಟು ಹೆಚ್ಚು ಸಾಲವನ್ನು ಮಾಡಲಾಗುತ್ತಿದೆ. ಯಡಿಯೂರಪ್ಪನವರು ಎರಡನೇ ಬಾರಿಗೆ ಮುಖ್ಯ ಮಂತ್ರಿಯಾದ ಮೇಲೆ ಕೇವಲ ಮೂರು ವರ್ಷಗಳಲ್ಲಿ ಸುಮಾರು 190000 ಕೋಟಿ ರೂಗಳಷ್ಟು ಸಾಲ ಮಾಡಿದ್ದಾರೆ. ಈಗ ಪ್ರತಿ ವರ್ಷ ಸಾಲ ಮಾಡುವ ಪ್ರಮಾಣ 72000 ಕೋಟಿಗೆ ತಲುಪಲಿದೆ. ಕಳೆದ ವರ್ಷ 69 ಸಾವಿರ ಕೋಟಿ ಸಾಲ ಮಾಡಿದರೂ ಕೊರೋನ ನಿರ್ವಹಣೆಗೆ ಖರ್ಚು ಮಾಡಿದ್ದು 5400 ಕೋಟಿ ರೂಗಳು ಮಾತ್ರ ಎಂದು ಹೇಳಿದ್ದೀರಿ. ಹಾಗಾದರೆ ಉಳಿದ ಹಣ ಎಲ್ಲಿಗೆ ಹೋಯಿತು? ಎಂದು ಪ್ರಶ್ನಿಸಿದರು.

ಜಿ ಎಸ್ ಡಿ ಪಿ [ರಾಜ್ಯದ ನಿವ್ವಳ ಆಂತರಿಕ ಉತ್ಪನ್ನ] ಯಲ್ಲಿ ಶೇಕಡಾವಾರು ಸಾಲದ ಪ್ರಮಾಣ ನಮ್ಮ ಸರ್ಕಾರದ ಅವಧಿಯಲ್ಲಿ 17 ರಿಂದ 20 ರ ಒಳಗೆ ಇತ್ತು. ಇದು ದೇಶದಲ್ಲಿಯೇ ಅತ್ಯುತ್ತಮ ನಿರ್ವಹಣೆಯಾಗಿತ್ತು. ಆದರೆ ಈಗ ಅದು 26.9 ರಷ್ಟಾಗಿದೆ. ನಿಯಮಗಳ ಪ್ರಕಾರ ಇದು ಶೆ. 25 ನ್ನು ಮೀರುವಂತಿಲ್ಲ. ಸಾಲ ಮಾಡುವುದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿಯಮಗಳನ್ನೇ ತಿದ್ದುಪಡಿ ಮಾಡಿಕೊಂಡಿವೆ.

2013 ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದ ನಿವ್ವಳ ಆಂತರಿಕ ಉತ್ಪನ್ನ [ ಜಿ.ಎಸ್.ಡಿ.ಪಿ] ಕೇವಲ 601582 ಕೋಟಿ ಇತ್ತು. ಆದರೆ ನಾನು ಅಧಿಕಾರದಿಂದ ಇಳಿದಾಗ ಅದು 1408585 ಕೋಟಿಗಳಿಗೆ ಏರಿಕೆಯಾಯಿತು.. ಈ ಜಿ ಎಸ್ ಡಿ ಪಿ ಎಷ್ಟು ಎಂದು ಹೇಳುವುದು ನಾವಲ್ಲ. ಕೇಂದ್ರ ಸರ್ಕಾರ. ಮೋದಿಯವರ ಸರ್ಕಾರವೇ ನಮ್ಮ ಜಿ ಎಸ್ ಡಿ ಪಿಯನ್ನು ಶ್ಲಾಘಿಸಿತ್ತು. ನಮ್ಮ 5 ವರ್ಷದ ಅವಧಿಯಲ್ಲಿ ಜಿ.ಎಸ್ ಡಿ ಪಿ ಯ ಪ್ರಮಾಣ 807003 ರಷ್ಟು ಹೆಚ್ಚಾಯಿತು.

ಆದರೆ 2018-19 ರಿಂದ 2021-22 ರವರೆಗೆ ಕಳೆದ 4 ವರ್ಷಗಳಲ್ಲಿ ಹೆಚ್ಚಾದ ಜಿಎಸ್‍ಡಿಪಿಯ ಪ್ರಮಾಣ ಕೇವಲ 293642 ಕೋಟಿ ರೂ ಮೌಲ್ಯ ಮಾತ್ರ ಹೆಚ್ಚಾಗಿದೆ. ಒಂದು ಕಡೆ ವೇಗವಾಗಿ ರಾಜ್ಯದ ಆರ್ಥಿಕತೆ ಕುಸಿದು ಹೋಗುತ್ತಿದೆ. ಆದರೆ ಸಾಲದ ಪ್ರಮಾಣ ರಾಕೆಟ್ಟಿನ ವೇಗದಲ್ಲಿ ಬೆಳೆಯುತ್ತಿದೆ. ಕೇಂದ್ರವು ನಮ್ಮ ರಾಜ್ಯದಿಂದ ಪ್ರತಿ ವರ್ಷ 250000 ಕೋಟಿಗೂ ಹೆಚ್ಚಿನ ಸಂಪತ್ತನ್ನು ಸಂಗ್ರಹಿಸುತ್ತದೆ. ಪ್ರತಿ ವರ್ಷ ಪೆಟ್ರೋಲ್ ಮತ್ತು ಡೀಸೆಲ್ ಎರಡರಿಂದಲೇ 30000 ಕೋಟಿಗೂ ಹೆಚ್ಚಿನ ಹಣವನ್ನು ರಾಜ್ಯದ ಜನರನ್ನು ಶೋಷಣೆ ಮಾಡಿ ದೋಚುತ್ತಿದೆ. ಆದರೆ ಈ ವರ್ಷ ನಮಗೆ ಕೊಟ್ಟಿರುವುದು ಕೇವಲ 50000 ಕೋಟಿ ಮಾತ್ರ. ನಿಯಮ ಪ್ರಕಾರ ಬರಬೇಕಾಗಿದ್ದುದು ಸುಮಾರು 100000 ಕೋಟಿಗಳು. ನಮಗೆ ನೀಡಬೇಕಾದ ಹಣವನ್ನು ಕೇಂದ್ರ ಸರ್ಕಾರ ನೀಡದೆ ವಂಚಿಸಿರುವುದರಿಂದಲೇ ರಾಜ್ಯ ಭೀಕರ ಸಂಕಷ್ಟಕ್ಕೆ ಸಿಲುಕಿಕೊಳ್ಳಲು ಕಾರಣವಾಗಿದೆ.

ಇದರ ಜೊತೆಗೆ ರಾಜ್ಯ ಸರ್ಕಾರ ಭೀಕರ ಭ್ರಷ್ಟಾಚಾರದಲ್ಲಿ ತೊಡಗಿದೆ. ಅನೇಕ ಯೋಜನೆಗಳ ಅನುಷ್ಠಾನದಲ್ಲಿ ಕಮಿಶನ್ ಪ್ರಮಾಣ ಶೇ.30ನ್ನೂ ಮೀರಿದೆ. ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ನಿಜವಾಗಿ ವೆಚ್ಚವಾಗುತ್ತಿರುವುದು ಕೇವಲ ಶೇ. 45- 50 ಮಾತ್ರ. ಜೊತೆಗೆ ರಾಜ್ಯದ ಸ್ವತ್ತಾದ ಭೂಮಿಯನ್ನು, ಖನಿಜ ಸಂಪತ್ತನ್ನು ಬಿಡಿಗಾಸಿಗೆ ಕಂಪೆನಿಗಳಿಗೆ ನೀಡಲಾಗುತ್ತಿದೆ. ಹೀಗಿರುವಾಗ ಸರ್ಕಾರಕ್ಕೆ ಆದಾಯ ಖೋತಾ ಆಗದೆ ಇನ್ನೇನಾಗುತ್ತದೆ. ರಾಜ್ಯದ ವಿದ್ಯುತ್ ಖರೀದಿಯನ್ನು ವೈಜ್ಞಾನಿಕವಾಗಿ ಮಾಡಿದರೆ ವರ್ಷಕ್ಕೆ ಕನಿಷ್ಠ 7-8 ಸಾವಿರ ಕೋಟಿ ಉಳಿಸಬಹುದು. ಸರ್ಕಾರ ಅದನ್ನೂ ಮಾಡುತ್ತಿಲ್ಲ.

ಇಷ್ಟರ ನಡುವೆಯೂ ಮುಖ್ಯಮಂತ್ರಿಗಳು ದಿನಾಂಕ 24-3-2021 ರಂದು ಬಜೆಟ್ ಕುರಿತಂತೆ ನಡೆದಿದ್ದ ಚರ್ಚೆಗೆ ಉತ್ತರ ನೀಡುವಾಗ, ನಮ್ಮ ಅಕ್ಕ ಪಕ್ಕದ ರಾಜ್ಯಗಳ ರೆವಿನ್ಯೂ ಕೊರತೆಗೆ ಹೋಲಿಸಿದರೆ ರಾಜ್ಯದ ಹಣಕಾಸಿನ ಸ್ಥಿತಿ ಬಹಳ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳ ಪ್ರಕಾರ ರಾಜ್ಯದ ರೆವಿನ್ಯೂ ಪರಿಸ್ಥಿತಿ 2020-21 ರ ಬಜೆಟ್ ನಲ್ಲಿ 143 ಕೋಟಿಯಷ್ಟು ಹೆಚ್ಚಿತ್ತು. ಆದರೆ, ತಮಿಳು ನಾಡಿನಲ್ಲಿ 21618 ಕೋಟಿ ರೂಗಳಷ್ಟು ಕೊರತೆ ಇತ್ತು. ಕೇರಳದಲ್ಲಿ 15201 ಕೋಟಿ ಗಳಷ್ಟು ಕೊರತೆ ಇತ್ತು. 2021- 22 ರಲ್ಲಿ ಕರ್ನಾಟಕದ ರೆವಿನ್ಯೂ 15134 ಕೋಟಿ ಕೊರತೆಯಾಗುತ್ತದೆ. ಬಜೆಟ್ ಆದರೆ ತಮಿಳುನಾಡಿನಲ್ಲಿ 41417 ಕೋಟಿ ರೂಗಳಷ್ಟು ಕೊರತೆಯಾಗುತ್ತದೆ. ಕೇರಳದಲ್ಲಿ 16910 ಕೋಟಿ ಕೊರತೆಯಾಗುತ್ತದೆ. ಮಹಾರಾಷ್ಟ್ರದಲ್ಲಿ 10226 ಕೋಟಿ ಕೊರತೆಯಾಗುತ್ತದೆ ಎಂದು ಹೇಳಿದ್ದರು.

ಸಾಲದ ವಿಚಾರಕ್ಕೆ ಬಂದರೂ 2021-22 ರಲ್ಲಿ ಕರ್ನಾಟಕದ ಸಾಲ 457899 ಕೋಟಿಯಾಗುತ್ತದೆ, ತಮಿಳುನಾಡಿನದು 570189 ಕೋಟಿಯಾಗುತ್ತದೆ. ಕೇರಳದ್ದು 325647 ಕೋಟಿಯಾಗುತ್ತದೆ. ಮಹಾರಾಷ್ಟ್ರದ್ದು 635794 ಕೋಟಿಯಾಗುತ್ತದೆ ಎಂದು ಹೇಳಿದ್ದರು. ಅಂದರೆ ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎಂದು ಹೇಳಿದ್ದ ಮುಖ್ಯಮಂತ್ರಿಗಳು ಈಗ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಯಾವುದೇ ಆರ್ಥಿಕ ಪ್ಯಾಕೇಜು ನೀಡಲಾಗುವುದಿಲ್ಲ ಎನ್ನುತ್ತಿದ್ದಾರೆ. ಹಾಗಿದ್ದರೆ ರಾಜ್ಯದ ಜನ ಏನು ಮಾಡಬೇಕು? ಏನು ತಿನ್ನಬೇಕು? ನಾವು ಪದೇ ಪದೇ ಹೇಳುತ್ತಿದ್ದೇವೆ. ದುಡಿಯುವ ಜನರ ಕೈಯಲ್ಲಿ ಹಣ ಇದ್ದರೆ ಜನರೂ ನೆಮ್ಮದಿಯಾಗಿರುತ್ತಾರೆ. ಆರ್ಥಿಕತೆಯೂ ಉತ್ತಮ ಸ್ಥಿತಿಗೆ ಬರುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ