Breaking News
Home / ಹುಬ್ಬಳ್ಳಿ / ಕಿಮ್ಸ್‌ನಲ್ಲಿ 66 ಬೆಡ್‌ಗಳ ತಾತ್ಕಾಲಿಕ ಚಿಕಿತ್ಸಾ ಕೇಂದ್ರ

ಕಿಮ್ಸ್‌ನಲ್ಲಿ 66 ಬೆಡ್‌ಗಳ ತಾತ್ಕಾಲಿಕ ಚಿಕಿತ್ಸಾ ಕೇಂದ್ರ

Spread the love

ಹುಬ್ಬಳ್ಳಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಿಮ್ಸ್‌ ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಸೌಲಭ್ಯ ಒಳಗೊಂಡ 66 ಬೆಡ್‌ಗಳ ತಾತ್ಕಾಲಿಕ ತುರ್ತು ಚಿಕಿತ್ಸಾ ಕೇಂದ್ರ ನಿರ್ಮಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಕಿಮ್ಸ್‌ನಲ್ಲಿರುವ ಪಿಎಂಎಸ್‌ಎಸ್‌ವೈ ಸೂಪರ್ ಸ್ಟೆಷಾಲಿಟಿ ಸಮೀಪದ ಜಾಗದಲ್ಲಿಯೇ ಕೇಂದ್ರ ತಯಾರಾಗಲಿದೆ. ಈ ಜಾಗವನ್ನು ಗುರುವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

‘ನಿರ್ಮಿತಿ ಕೇಂದ್ರದಿಂದ ₹66 ಲಕ್ಷ ವೆಚ್ಚದಲ್ಲಿ ಕೋವಿಡ್ ಕ್ಯಾಜುಯಲಿಟಿ ಕೇಂದ್ರ ನಿರ್ಮಿಸಲಾಗುತ್ತಿದೆ.‌ ಇಕೋ ಇನ್ ಬಾಕ್ಸ್ ಸ್ಪೇಸ್ ಪ್ರೈವೇಟ್‌ ಲಿಮಿಟೆಡ್ 1,500 ಚದರ ಮೀಟರ್‌ ವಿಸ್ತೀರ್ಣದಲ್ಲಿ ಮೂರು ಕ್ಯಾಜುಯಾಲಿಟಿ ಕೇಂದ್ರಗಳನ್ನು ನಿರ್ಮಿಸಲಿದೆ. ಪ್ರತಿ ಕೇಂದ್ರ 22 ಹಾಸಿಗೆಗಳ ಸಾಮರ್ಥ್ಯ ಹೊಂದಿರಲಿದೆ. ಪುರುಷರು ಹಾಗೂ ಮಹಿಳೆಯರಿಗೆ 250 ಚದರ ಮೀಟರ್‌ ವಿಸ್ತೀರ್ಣದಲ್ಲಿ ಆರು ಶೌಚಾಲಯ ಸೌಲಭ್ಯ ಇರಲಿದೆ’ ಎಂದು ತಿಳಿಸಿದರು.

‘ಅತ್ಯಂತ ತುರ್ತಾಗಿ ಕೇಂದ್ರ ಆರಂಭಿಸುವಂತೆ ಜಿಲ್ಲಾಧಿಕಾರಿ ಈಗಾಗಲೇ ಕಾರ್ಯಾದೇಶ ನೀಡಿದ್ದಾರೆ. ಜಿಲ್ಲೆಯಲ್ಲಿ ಬೆಡ್‌ಗಳ ಸಂಖ್ಯೆಯನ್ನು ಒಟ್ಟು ಮೂರು ಸಾವಿರಕ್ಕೆ ಹೆಚ್ಚಿಸಲಾಗುತ್ತಿದೆ’ ಎಂದರು.

ರಾಮಬಾಣವಲ್ಲ: ‘ಸರ್ಕಾರದ ಕೋರಿಕೆಯಂತೆ ರಾಜ್ಯಕ್ಕೆ 1.22 ಲಕ್ಷ ರೆಮಿಡಿಸಿವರ್ ವೈಲ್‌ಗಳನ್ನು ನೀಡಲಾಗಿದೆ. ಕೋವಿಡ್‌ನಿಂದ ಪೂರ್ಣ ಗುಣಮುಖವಾಗಲು ಈ ಚುಚ್ಚುಮದ್ದು ರಾಮಬಾಣವಲ್ಲ. ಯಾವ ರೋಗಿಗೆ ಏನು ಕೊಡಬೇಕು ಎನ್ನುವುದನ್ನು ವೈದ್ಯರು ನಿರ್ಧರಿಸುತ್ತಾರೆ. ಜನ ಅನಗತ್ಯವಾಗಿ‌ ಆತಂಕಕ್ಕೆ ಒಳಗಾಗುವುದು ಬೇಡ’ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ನಿತೇಶ್ ಪಟೇಲ ಮಾತನಾಡಿ ‘ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗಂಟಲು ಹಾಗೂ ಮೂಗಿನ ದ್ರವದ ಮಾದರಿ ಸಂಗ್ರಹಿಸಲಾಗುತ್ತಿದೆ. ಮಾದರಿ ಸಂಗ್ರಹಕ್ಕಾಗಿ ಜಿಲ್ಲೆಯಲ್ಲಿ ಈಗಾಗಲೇ 17 ಸಂಚಾರಿ ವಾಹನಗಳನ್ನು ಕೂಡ ಆರಂಭಿಸಲಾಗಿದೆ. ಬೇರೆ ಊರುಗಳಿಂದ ಬಂದವರು ಸೋಂಕಿನ ಲಕ್ಷಣಗಳನ್ನು ಹೊಂದಿದ್ದರೆ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಡಂಗುರ ಸಾರುವ ಮೂಲಕ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಡಾ.ರಾಜಶೇಖರ ದ್ಯಾಬೇರಿ ಇದ್ದರು.

ತ್ವರಿತ ಪರೀಕ್ಷಾ ವರದಿ; ಕ್ರಮದ ಭರವಸೆ
ಕೋವಿಡ್‌ ಪರೀಕ್ಷಾ ವರದಿಗಳು ವಿಳಂಬವಾಗಿ ಬರುತ್ತಿರುವುದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಈ ಕುರಿತು ಅಧಿಕಾರಿಗಳ ಜೊತೆಗಿನ ಸಭೆಯಲ್ಲಿಯೂ ಚರ್ಚಿಸಲಾಗಿದೆ. ಆದ್ದರಿಂದ ಪರೀಕ್ಷೆಯ ಸಾಮರ್ಥ್ಯ ಹಾಗೂ ಪ್ರಯೋಗ ಕೇಂದ್ರಗಳನ್ನು ಹೆಚ್ಚಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.

‘ಪರೀಕ್ಷೆಗೆ ಒಳಗಾದವರಿಗೆ ಪಾಸಿಟಿವ್‌ ಇದ್ದರೆ ಆದ್ಯತೆ ನೀಡಿ ವರದಿ ಕೊಟ್ಟು, ನೆಗೆಟಿವ್‌ ಇದ್ದವರ ವರದಿಗಳನ್ನು ಬಳಿಕ ಕೊಡುವಂತೆ ಹೇಳಲಾಗುತ್ತಿದೆ. ಈ ಮೂಲಕ ಸೋಂಕು ಹರಡದಂತೆ ತಡೆಯಲು ಕ್ರಮ ವಹಿಸಲಾಗಿದೆ’ ಎಂದರು.

ಎರಡನೇ ಬಾರಿಗೆ ಮಾತ್ರ ಕೋವ್ಯಾಕ್ಸಿನ್
ಜಿಲ್ಲೆಯಲ್ಲಿ 17,000 ಜನರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಕೋವ್ಯಾಕ್ಸಿನ್ ಲಭ್ಯತೆ ಆಧರಿಸಿ ಯಾರಿಗೆ ನೀಡಬೇಕು ಎನ್ನುವುದನ್ನು ತೀರ್ಮಾನಿಸಲಾಗುತ್ತಿದೆ. ಎರಡನೇ ಲಸಿಕೆ ಪಡೆಯುವವರಿಗೆ ಮಾತ್ರ ಈ ಲಸಿಕೆ ಕೊಡಲಾಗುತ್ತಿದೆ. ಜಿಲ್ಲೆಯಲ್ಲಿ 750 ರೆಮಿಡಿಸಿವರ್ ವೈಲ್‌ಗಳು ಬಂದಿದ್ದು ಈ ಚುಚ್ಚುಮದ್ದಿನ ಕೊರತೆ ಇಲ್ಲ. ಅಗತ್ಯಕ್ಕೆ ತಕ್ಕಂತೆ ಸರ್ಕಾರ ಪೂರೈಸುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.


Spread the love

About Laxminews 24x7

Check Also

ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ – ಧಾರವಾಡ ಅರ್ಧ ದಿನ ಬಂದ್!

Spread the loveಧಾರವಾಡ: ಇಡೀ ದೇಶದ ಗಮನ ಸೆಳೆದಿರುವ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಖಂಡಿಸಿ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ