Breaking News
Home / Uncategorized / ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಒಟ್ಟಾರೆ ಶೇ.55.61 ರಷ್ಟು ಮತದಾನ..

ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಒಟ್ಟಾರೆ ಶೇ.55.61 ರಷ್ಟು ಮತದಾನ..

Spread the love

ಬೆಳಗಾವಿ: ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಒಟ್ಟಾರೆ ಶೇ.55.61 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ 02- ಬೆಳಗಾವಿ ಲೋಕಸಭಾ ಮತಕ್ಷೇತ್ರಕ್ಕೆ ಶನಿವಾರ (ಏ.17) ಮತದಾನ ನಡೆಯಿತು.
ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಮತಕ್ಷೇತ್ರಗಳಲ್ಲಿ ಒಟ್ಟಾರೆ 2566 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನವು ಸಂಜೆ 7 ಗಂಟೆಯವರೆಗೆ ನಡೆಯಿತು.
ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಬೆಳಿಗ್ಗೆ 6.30 ಗಂಟೆಗೆ ಪಕ್ಷ/ಅಭ್ಯರ್ಥಿಗಳ ಪರ ಚುನಾವಣಾ ಏಜೆಂಟರುಗಳ ಸಮ್ಮುಖದಲ್ಲಿ ಅಣುಕು ಮತದಾನ ಪ್ರಕ್ರಿಯೆ ನಡೆಯಿತು.
ನಂತರ 7 ಗಂಟೆಗೆ ಮತದಾನ ಆರಂಭಗೊಂಡಿತು. ಈ ಸಂದರ್ಭದಲ್ಲಿ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರು, ಮತದಾನ ಪ್ರಕ್ರಿಯೆ ವೀಕ್ಷಿಸಿದರು.
ಇದಲ್ಲದೇ ಮತಗಟ್ಟೆಗಳಲ್ಲಿ ಕೋವಿಡ್-೧೯ ಮಾರ್ಗಸೂಚಿ ಪಾಲನೆಯನ್ನು ಖಚಿತಪಡಿಸಿಕೊಂಡರು.
ಕೋವಿಡ್  ಹಿನ್ನೆಲೆಯಲ್ಲಿ ಮಾರ್ಗಸೂಚಿ ಪ್ರಕಾರ ಎಲ್ಲ‌ ಮತಗಟ್ಟೆಗಳಲ್ಲೂ ಸ್ಯಾನಿಟೈಜೇಷನ್ ಮಾಡುವುದರ ಜತೆಗೆ ಥರ್ಮಲ್ ಸ್ಕ್ಯಾನಿಂಗ್, ಅಂತರ ಕಾಯ್ದುಕೊಳ್ಳುವಿಕೆಗೆ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಹಿರಿಯರ ನೇತೃತ್ವ; ಕಿರಿಯರ ಸಂಭ್ರಮ:
ಕೆಲವು ಮತಗಟ್ಟೆಗಳಲ್ಲಿ ಮನೆಯ ಹಿರಿಯರ ನೇತೃತ್ವದಲ್ಲಿ ಕುಟುಂಬದ ಸದಸ್ಯರು ಬಂದು ಮತ ಚಲಾಯಿಸಿದರೆ ಇನ್ನೂ ಕೆಲವೆಡೆ ಮೊದಲ‌ ಬಾರಿ‌ ಮತ ಚಲಾಯಿಸುವ ಮೂಲಕ ಕಿರಿಯರು ಸಂಭ್ರಮಿಸಿದರು.
ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮಹಿಳಾ ಮತದಾರರು ಹೆಚ್ಚಾಗಿರುವ ಆಯ್ದ 16 ಮತಗಟ್ಟೆಗಳನ್ನು “ಸಖಿ ಮತಗಟ್ಟೆ” ಗಳಾಗಿ ಗುರುತಿಸಲಾಗಿತ್ತು.
ವಿಶೇಷವಾಗಿ ಅಲಂಕರಿಸಲಾಗಿದ್ದ ಸಖಿ‌ ಮತಗಟ್ಟೆಗಳು ಮತದಾರರ ಮೆಚ್ಚುಗೆಯನ್ನು ಗಳಿಸಿದವು.
ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ‌ ವಿಕಲಚೇತನ ಮತದಾರರಿಗೆ ಗಾಲಿಕುರ್ಚಿಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೆಲವೆಡೆ ಸ್ವಯಂ ಸೇವಕರನ್ನು ನೇಮಿಸುವ ಮೂಲಕ ಹಿರಿಯ ನಾಗರಿಕರು ಹಾಗೂ ವಿಕಲಚೇತನ ಮತದಾರರಿಗೆ ನೆರವು ನೀಡಲಾಯಿತು.
ಪಿಪಿಇ ಕಿಟ್ ಧರಿಸಿ ಮತ ಚಲಾಯಿಸಿದ ಉಪ ಸಭಾಪತಿ:
ಕೋವಿಡ್-೧೯ ಸೋಂಕು ತಗುಲಿದ ಹಿನ್ನೆಲೆಯಲ್ಲಿ ವಿಧಾನಸಭೆಯ ಮಾನ್ಯ ಉಪ ಸಭಾಪತಿ ಆನಂದ ಸಿ. ಮಾಮನಿ ಅವರು ಕೋವಿಡ್-೧೯ ಮಾರ್ಗಸೂಚಿ ಪ್ರಕಾರ ಪಿಪಿಇ ಕಿಟ್ ಧರಿಸಿ ತಮ್ಮ ಮತ ಚಲಾಯಿಸಿದರು.
ಸವದತ್ತಿ ಪಟ್ಟಣದ ಶಾಸಕರ ಮಾದರಿ ಶಾಲೆಯ182ನೇ ಮತಗಟ್ಟೆಯಲ್ಲಿ ಮತದಾನ ಮಾಡಿರುವುದಾಗಿ ಛಾಯಾಚಿತ್ರಗಳ ಸಮೇತ ಟ್ವೀಟ್ ಮಾಡಿದ್ದಾರೆ.
ಒಟ್ಟಾರೆ ಶೇ.55.61 ಮತದಾನ:
ಉಪ‌ ಚುನಾವಣೆಯಲ್ಲಿ ಸಂಜೆ 7 ಗಂಟೆಯವರೆಗೆ ಲಭಿಸಿದ ಪ್ರಾಥಮಿಕ ಮಾಹಿತಿ ಪ್ರಕಾರ ಒಟ್ಟಾರೆ ಶೇ.55.61 ರಷ್ಟು ಮತದಾನವಾಗಿದೆ. ಅಂತಿಮ ವಿವರಗಳ ಬಳಿಕ ಫಲಿತಾಂಶದ ಪ್ರಮಾಣದಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚಳವಾಗಬಹುದು.
ಲೋಕಸಭಾ ‌ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 18,13,567 ಮತದಾರರಿದ್ದಾರೆ.
ಇದರಲ್ಲಿ 9,11,033 ಪುರುಷರು ಹಾಗೂ 9,02,476 ಮಹಿಳೆಯರು ಮತ್ತು 58 ಇತರೆ ಮತದಾರರಿದ್ದಾರೆ.
ಈ ಪೈಕಿ 9,90, 473 ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನ:
ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಮತಕ್ಷೇತ್ರಗಳ ಪೈಕಿ ಗೋಕಾಕ ಮತಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ ಶೇ.60.47 ಮತದಾನವಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಬೆಳಗಾವಿ(ದಕ್ಷಿಣ) ಮತಕ್ಷೇತ್ರದಲ್ಲಿ ಅತೀ ಕಡಿಮೆ ಅಂದರೆ ಶೇ.44.84 ರಷ್ಟು ಮತದಾನವಾಗಿರುತ್ತದೆ.
ಅರಬಾವಿ -55.07, ಬೆಳಗಾವಿ ಉತ್ತರ 48.18, ಬೆಳಗಾವಿ ಗ್ರಾಮೀಣ 58.36, ಬೈಲಹೊಂಗಲ 58.33, ಸವದತ್ತಿ 58.67, ರಾಮದುರ್ಗ 55.04.
ಪ್ರತಿ‌ ಎರಡು‌ ಗಂಟೆಯ ವಿವರ:
ಬೆಳಿಗ್ಗೆ 7 ರಿಂದ 9 ಗಂಟೆಯವರೆಗಿನ ಮೊದಲ ಎರಡು ಗಂಟೆಯ‌ ಅವಧಿಯಲ್ಲಿ 1 ಲಕ್ಷ ಜನರು ಅಂದರೆ ಒಟ್ಟು‌ ಮತದಾರರಲ್ಲಿ ಶೇ.5.54 ರಷ್ಟು ಜನರು ಮತ ಚಲಾಯಿಸಿದರು.
9 ರಿಂದ 11 ಗಂಟೆಯ‌ ಅವಧಿಯಲ್ಲಿ ಮತದಾನ ಪ್ರಕ್ರಿಯೆ ಮತ್ತಷ್ಟು ಚುರುಕು ಪಡೆದುಕೊಂಡಿತು ಈ ಅವಧಿಯಲ್ಲಿ ಒಟ್ಟಾರೆ ಶೇ13.64ರಷ್ಟು ಮತದಾನವಾಗಿತ್ತು. ಒಟ್ಟಾರೆ 2.47 ಲಕ್ಷ ಜನರು ಮತ ಚಲಾಯಿಸಿದ್ದರು.
ಬೆಳಗಾವಿ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಮತಕ್ಷೇತ್ರಗಳಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ ತೀರ ನಿಧಾನಗತಿಯಲ್ಲಿದ್ದ ಮತದಾನವು ಈ ಅವಧಿಯಲ್ಲಿ ಚುರುಕು ಪಡೆದುಕೊಂಡಿತು.
ಬೆಳಿಗ್ಗೆ 11 ಗಂಟೆಯವರೆಗಿನ ಅವಧಿಯಲ್ಲಿ ಬೆಳಗಾವಿ (ಗ್ರಾಮೀಣ) ಮತ್ತು ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನವಾಗಿತ್ತು.
ಮಧ್ಯಾಹ್ನ  1 ಗಂಟೆಯವರೆಗೆ ಶೇ.26.08; ಮಧ್ಯಾಹ್ನ 3 ಗಂಟೆಗೆ ಶೇ.36.90 ರಷ್ಟು ಮತದಾನವಾದರೆ ಸಂಜೆ 5 ರ ವೇಳೆಗೆ ಒಟ್ಟಾರೆ ಶೇ.46.96 ರಷ್ಟು ಮತದಾನ‌ ದಾಖಲುಗೊಂಡಿತು.
ಮತದಾನ‌ ಕೊನೆಗೊಂಡ ಸಂಜೆ 7 ಗಂಟೆಯ ವೇಳೆಗೆ ಶೇ.54.02ರಷ್ಟು ಮತದಾನ ನಡೆಯಿತು.
ಶಾಂತಿಯುತ ಮತದಾನ; ಜನತೆಗೆ ಧನ್ಯವಾದ:
ಬೆಳಗಾವಿ ಲೋಕಸಭಾ ಉಪಚುನಾವಣೆ ಶಾಂತಿಯುತ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಸಹಕರಿಸಿದ ಜಿಲ್ಲೆಯ ಜನತೆ, ಕ್ಷೇತ್ರದ ಮತದಾರರು, ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಚುನಾವಣಾ ಆಯೋಗದ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇದಲ್ಲದೇ ಒಟ್ಟಾರೆ ಚುನಾವಣಾ ಪ್ರಕ್ರಿಯೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೂ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Spread the love

About Laxminews 24x7

Check Also

ಬೆಳಗಾವಿ ಲೋಕಸಭೆ: 4,524 ಮತಗಟ್ಟೆ, 24 ಸಾವಿರ ಸಿಬ್ಬಂದಿ ಸನ್ನದ್ಧ

Spread the loveಬೆಳಗಾವಿ: ‘ಜಿಲ್ಲೆಯಲ್ಲಿ ಮೇ 7ರಂದು ನಡೆಯಲಿರುವ ಲೋಕಸಭೆ ಚುನಾವಣೆ ಮತದಾನ ಪ್ರಕ್ರಿಯೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತದಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ