Breaking News
Home / ರಾಜ್ಯ / ಎಪ್ರೀಲ್ 1: ಮೂರ್ಖರ ದಿನವಲ್ಲ, ಹೊಸತನದ ದಿನ

ಎಪ್ರೀಲ್ 1: ಮೂರ್ಖರ ದಿನವಲ್ಲ, ಹೊಸತನದ ದಿನ

Spread the love

ಸಕಾಲಿಕ

ಸಂತೋಷಕುಮಾರ್ ಮೆಹಂದಳೆ

ಅಂದು 2004 ಏಪ್ರಿಲ್ 1. ಗೂಗಲ್ ಹೊಸ ಕೊಡುಗೆಯನ್ನು ಘೊಷಿಸಿತ್ತು. ಅದನ್ನು ‘ಜಗತ್ತಿನ ಅತಿ ದೊಡ್ಡ ಜೋಕ್’ ಎಂದೇ ಜಾಗತಿಕ ತಮಾಷೆಯಾಗಿ ದಾಖಲೆಯಾಗುವ ಮಟ್ಟಿಗೆ ಜನರು ಆಡಿಕೊಂಡಿದ್ದರು. ಗೂಗಲ್ ಗಿಗಾಬೈಟ್ ಸಾಮರ್ಥ್ಯದ ‘ಜೀ ಮೇಲ್’ ಎಂಬ ಅದ್ಭುತವನ್ನು ಘೊಷಿಸಿದ್ದು ಏಪ್ರಿಲ್ 1ರ ತಡರಾತ್ರಿ. ಮೊದಲ ಗಳಿಗೆಯಲ್ಲಿ ಅದನ್ನು ಟೀಕಿಸಿ, ಮಾಹಿತಿ ಹಂಚಿಕೊಂಡಿದ್ದು ಯಾಹೂ. ಜೊತೆಗೆ ಹಾಟ್​ವೆುೕಲ್ ಮತ್ತು ರಿಡಿಫ್​ನಲ್ಲಿ. ಕಾರಣ ಇವೆರಡೂ ಗ್ರಾಹಕರಿಗೆ ಕೊಡುತ್ತಿದ್ದುದು 2-4 ಎಂಬಿ ಬೈಟ್ ಸಾಮರ್ಥ್ಯ ಮಾತ್ರ. ‘ಗೂಗಲ್ ಸರ್ವರ್ ಇ-ಮೇಲ್ ಸೇವೆ ಕೊಡುತ್ತಿದೆ’ ಎಂದು ಮೊದಲ ಹದಿನೆಂಟು ನಿಮಿಷದಲ್ಲಿ ಹರಿದಾಡಿದ ಇ-ಮೇಲ್​ಗಳ ಸಂಖ್ಯೆ ಸುಮಾರು ಒಂದೂವರೆ ಲಕ್ಷಗಳಷ್ಟು! ಆದರೆ ಗೂಗಲ್ ಮಾತ್ರ ಅದನ್ನೆಲ್ಲ ನಗುಮೊಗದಿಂದ ಸ್ವೀಕರಿಸುತ್ತಲೇ ಬೆಳಗಿನ ಆರು ತಾಸಿನಲ್ಲಿ ಮೊದಲ ಐವತ್ತು ಸಾವಿರ ಚಂದಾದಾರರನ್ನು ಹೊಂದಿ ಕೆಲಸ ಆರಂಭಿಸಿತ್ತು!

‘ಮೂರ್ಖರ ದಿವಸ’ದಂದು ಮಾರುಕಟ್ಟೆ ಪ್ರವೇಶಿಸಿದ ಗೂಗಲ್​ನ ಇ-ಮೇಲ್ ಸೇವೆ ಮೂರ್ಖರ ದಿನ ಎಂದರೆ ಪ್ರಾಯೋಗಿಕ ಜೋಕ್ ಎನ್ನುತ್ತಿದ್ದವರನ್ನೇ ಮೂರ್ಖರನ್ನಾಗಿಸಿ ಬಂಪರ್ ವ್ಯಾಪಾರ ಮಾಡಿತು. ಅದಾಗಿ ಮೊದಲ ವರ್ಷದ ಮೂರ್ಖರ ದಿನ ಬರುವ ಹೊತ್ತಿಗೆ ಯಾಹೂ, ಹಾಟ್​ವೆುೕಯಿಲ್ ಸೇರಿ ಎಲ್ಲ ಇ-ಮೇಲ್ ಸೇವೆಗಳನ್ನು ನುಂಗಿಹಾಕಿದ್ದು ಈಗ ಇತಿಹಾಸ. ಆ ಕಾಲಕ್ಕೆ ಜಾಗತಿಕ ಜಾಹೀರಾತು ವಿಶ್ಲೇಷಕ ಮತ್ತು ಸಲಹೆಗಾರ ನಾಟ್ ಏಲಿಯಟ್ ಎರಡು ದಿನಗಳ ನಂತರವೂ ಅಚ್ಚರಿಯಿಂದ, ‘ಈಗಲೂ ಗೂಗಲ್ ಇಂಥ ಸೇವೆಯನ್ನು ಘೊಷಿಸಿದ್ದು ನಂಬಲಿಕ್ಕೆ ಸಾಧ್ಯವಿಲ್ಲ’ ಎಂದು ಹೇಳಿದ್ದ. (ಜೀ-ಮೇಲ್​ನ ಅಪರಿಮಿತ ಮತ್ತು ನಂಬಲರ್ಹ ಸೇವೆಯನ್ನು ಗಮನಿಸಿ ನಾಲ್ಕೇ ತಿಂಗಳಲ್ಲಿ ಆರಂಭವಾದ ಸೇವೆ ಮಾರ್ಕ್ ಜುಕರ್​ಬರ್ಗನ ಫೇಸ್​ಬುಕ್.) ಜನರ ಅಪನಂಬಿಕೆಯನ್ನು ಹೋಗಲಾಡಿಸುವ ಕಾರ್ಯ ಎರಡು ದಿನದ ನಂತರ ಕೈಗೊಂಡಿದ್ದು ‘ವಾಷಿಂಗ್ಟನ್ ಪೊಸ್ಟ್’ನ ಲೇಖನ. ಅಷ್ಟೊತ್ತಿಗೆ ಆರೂವರೆ ಲಕ್ಷ ಜನ ಜಿ-ಮೇಲ್ ಬಳಸಲಾರಂಭಿಸಿದ್ದರು.

ನೇರ ಭಾಷಾಂತರ ಮಾಡುವ ಭರದಲ್ಲಿ ಏ.1ನ್ನು ‘ಮೂರ್ಖರ ದಿವಸ’ ಎಂದು ಹೇಳಲಾಗಿದೆ. ಆದರೆ, ಈ ದಿನ ಮೂಲದಲ್ಲಿ ‘ಪ್ರಾಕ್ಟಿಕಲ್ ಜೋಕ್ ಡೇ’ ಎಂದು ಪರಿಗಣಿಸಲ್ಪಟ್ಟಿತ್ತು. ಇತಿಹಾಸವನ್ನು ಅವಲೋಕಿಸಿದರೆ, ಇದರ ಕಥಾನಕ ಹದಿನೈದು ಶತಮಾನ ಹಿಂದಕ್ಕೆ ಹೋಗುತ್ತದೆ. ಏಪ್ರಿಲ್ 1ನ್ನು ಹಲವು ರಾಷ್ಟ್ರಗಳಲ್ಲಿ ಹಲವು ರೀತಿಯಲ್ಲಿ ವಿಭಿನ್ನ ವಿಚಾರಧಾರೆಯ ಆಧಾರದಲ್ಲಿ ಮೂರ್ಖರ ದಿನವಾಗಿ ಪೋಷಿಸಲ್ಪಡುತ್ತಿದೆ.

1582ರಲ್ಲಿ ಜ್ಯೂಲಿಯನ್ ಕ್ಯಾಲೆಂಡರಿನಿಂದ ಗೆಗೋರಿಯನ್ ಕ್ಯಾಲೆಂಡರಿಗೆ ಫ್ರಾನ್ಸ್ ಬದಲಾಯಿತಲ್ಲ; ಆಗಲೂ ಆ ಏಪ್ರಿಲ್1ನ್ನು ಜನ ‘ಜೋಕು’ ಎಂದು ನಕ್ಕಿದ್ದರು. ಇಂಥ ಬದಲಾವಣೆ ತರಲು ಹೊರಟವರೇ ಮೂರ್ಖರು ಎಂದು ಜರೆಯಲಾಗಿತ್ತು. ಹಾಗಾಗಿ ಆ ದಿನವೇ ಅಧಿಕೃತವಾಗಿ ಮೂರ್ಖರ ದಿನವಾಗಿ ಚಲಾವಣೆಗೆ ಬಂತು. ಆದರೆ 1563ರಲ್ಲೇ ಈ ಕ್ಯಾಲೆಂಡರ್ ಬದಲಾವಣೆ ಸಮಿತಿ ಮೊದಲ ಸಭೆ ಕೈಗೊಂಡು ಏಪ್ರಿಲ್ 1ರಂದು ಮುಖ್ಯ ನಿರ್ಣಯ ಘೊಷಿಸಿತ್ತು. ನಂತರ, 1818ರಲ್ಲಿ ಬ್ರಿಟನ್ ಎರಡು ದಿನ ‘ತಮಾಷೆಯ ದಿನ’ ಎಂದು ಘೋಷಿಸಿ ಸಂಭ್ರಮಾಚರಣೆಗೆ ಅವಕಾಶ ಮಾಡಿಕೊಡುವುದರೊಂದಿಗೆ ಅಧಿಕೃತವಾಗಿ ಜಗತ್ತು ಏಪ್ರಿಲ್​ನ್ನು ಗಮನಿಸಲು ಆರಂಭಿಸಿತು. ಕ್ರಮೇಣ ಜನರನ್ನು ಬೇಸ್ತುಬೀಳಿಸುವ, ತಮಾಷೆ ಮಾಡುವ ಆಚರಣೆ ಆರಂಭವಾಯಿತು. ಇದು ಆಯಾ ಸ್ಥಳ ಮತ್ತು ಕಾಲಮಾನಕ್ಕೆ ತಕ್ಕಂತೆ ಅಲ್ಲಲ್ಲಿ ಕ್ರಿಯಾತ್ಮಕವಾಗಿಯೂ, ಕೆಲವೊಮ್ಮೆ ವ್ಯಂಗ್ಯವಾಗಿಯೂ ಬದಲಾಯಿತಾದರೂ ಆಧುನಿಕ ಜನಮಾನಸದಲ್ಲಿ ದೊಡ್ಡ ಬ್ರೇಕ್ ಸಿಕ್ಕಿದ್ದು 1957 ಏಪ್ರಿಲ್ 1 ರಂದು.

ಬಿಬಿಸಿ ಅಂದು ‘ಸ್ಪಾಗೆಟ್ಟಿ’ ಎಂಬ ಇಟಾಲಿಯನ್ ಆಹಾರವನ್ನು, ಸ್ವಿಸ್​ನ ರೈತರು ನೇರವಾಗಿ ಹೊಲದಲ್ಲಿ ಬೆಳಯುತ್ತಾರೆ ಎಂದು ಸುದ್ದಿ ಮಾಡಿ ಬೇಸ್ತು ಬೀಳಿಸಿತು. ಗೋಧಿಯ ಬದಲಾಗಿ ಹೊಲದಲ್ಲಿ ನೇರವಾಗಿ ‘ಸ್ಪಾಗೆಟ್ಟಿ’ ಬೆಳೆಯಲಾಗಿದೆ ಮತ್ತು ಇಟಾಲಿಯನ್ ಶೈಲಿಯ ಆಹಾರವಾಗಿರುವ ಇದು, ಬೇಯಿಸುವ ಬದಲಾಗಿ ಬೆಳೆಯಾಗಿ ಬೆಳೆದು ಬಳಸಬಹುದೆಂದು ಕಾರ್ಯಕ್ರಮ ಮಾಡಿ ತೋರಿಸಿಬಿಟ್ಟಿತ್ತು. ಬಿಬಿಸಿ ಸುದ್ದಿವಾಹಿನಿ ಎಂದ ಕೂಡಲೇ ಜನರೂ ನಂಬಿ ಬೇಸ್ತು ಬಿದ್ದಿದ್ದರು.

1996ರ ಏ.1ರಂದು ‘ಟಾಕೋಬೆಲ್’ ಫಾಸ್ಟ್ ಫುಡ್ ಸರಣಿ ಹೋಟೆಲ್ ತಾನು ಫಿಲಿಡೆಲ್ಪಿಯಾ ‘ಲಿಬರ್ಟಿ ಬೆಲ್’ನ್ನು ಖರೀದಿಸಿದ್ದಾಗಿ ಘೊಷಿಸಿ, ಬೆಸ್ತುಬೀಳಿಸಿತು. ಈಗ ಅಲ್ಲಲ್ಲಿ ಆಯಾ ಜನರ ಮಟ್ಟಿಗೆ ಇಂಥ ಆಚರಣೆ ನಡೆಯುತ್ತಿದೆ. ಆದರೆ, ಆಗೀಗ ದೊಡ್ಡಮಟ್ಟದಲ್ಲಿ ಜನರನ್ನು ಮೂರ್ಖರನ್ನಾಗಿಸುವ ಮೂಲಕ ಬಿಜಿನೆಸ್ ಪ್ರಪಂಚ ಬೆಳೆಸಿಕೊಳ್ಳುವ ಕಾಪೋರೇಟ್ ಕಲ್ಚರ್ ಇದರ ಹಿಂದೆ ಇರುವುದು ಕೂಡ ವ್ಯಾವಹಾರಿಕ ಜಗತ್ತಿನ ವಾಸ್ತವ. ಏನೇ ಆಗಲಿ, ನಿಮಗೆಲ್ಲರಿಗೂ ಏಪ್ರಿಲ್ 1ರ ಶುಭಾಶಯಗಳು. ಸುಮ್ಮನೆ ಕೊಡುಗೆಗಳನ್ನು ನಂಬಿ, ದುಡ್ಡು ದುಗ್ಗಾಣಿ ಕಳೆದುಕೊಳ್ಳಬೇಡಿ. ಕಾರಣ ಅಂಥ ಪ್ರಾಕ್ಟಿಕಲ್ ಜೋಕನ್ನು ಭಾರತದಲ್ಲಿ ನಿರೀಕ್ಷಿಸಲಾರಿರಿ. ಇಲ್ಲಿ ಏನಿದ್ದರೂ ಒಬ್ಬರನೊಬ್ಬರು ಆಡಿಕೊಂಡು ಕೆಳಕ್ಕೆ ತಳ್ಳುವುದೇ ಪ್ರಾಕ್ಟಿಕಲ್ ಎನ್ನಿಸಿಕೊಂಡ ಮೂರ್ಖರ ವಿಚಾರಧಾರೆಯೇ ಪ್ರಬಲವಾಗಿದೆ.

(ಲೇಖಕರು ಕಥೆಗಾರರು)


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ