Breaking News
Home / ಜಿಲ್ಲೆ / ಬೆಂಗಳೂರು / ಹಾದಿಬೀದಿಲಿ ಮಾತನಾಡದೆ ಹೊನ್ನಾಳಿಗೆ ಬನ್ನಿ, ಯತ್ನಾಳ್‍ಗೆ ರೇಣುಕಾಚಾರ್ಯ ಸವಾಲು

ಹಾದಿಬೀದಿಲಿ ಮಾತನಾಡದೆ ಹೊನ್ನಾಳಿಗೆ ಬನ್ನಿ, ಯತ್ನಾಳ್‍ಗೆ ರೇಣುಕಾಚಾರ್ಯ ಸವಾಲು

Spread the love

ಬೆಂಗಳೂರು,ಮಾ.16- ಆಡಳಿತ ಪಕ್ಷದ ಶಾಸಕರಾಗಿ ಹಾದಿಬೀದಿಯಲ್ಲಿ ಮಾತನಾಡುವ ಬದಲು ತಾಕತ್ತಿದ್ದರೆ ನನ್ನ ಮತ ಕ್ಷೇತ್ರ ಹೊನ್ನಾಳಿಗೆ ಬಂದು ಮಾತನಾಡಿ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದ್ದಾರೆ. ವಿಧಾನಸೌಧ ಮೊಗಸಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಚೌಕಟ್ಟು ಅಥವಾ ಶಾಸಕಾಂಗ ಸಭೆಯಲ್ಲಿ ಮಾತನಾಡುವ ಬದಲು ಯತ್ನಾಳ್ ಹಾದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ.

ಇದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಯತ್ನಾಳ್ ನಮ್ಮ ಪಕ್ಷದ ಹಿರಿಯ ಮುಖಂಡರು, ಪದೇ ಪದೇ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಗುರಿಯಾಗಿಟ್ಟುಕೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಿಮ್ಮ ಬಳಿ ಅವರು ಭ್ರಷ್ಟಾಚಾರ ನಡೆಸಿರುವ ಬಗ್ಗೆ ದಾಖಲೆಗಳಿದ್ದರೆ ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.

ಯಡಿಯೂರಪ್ಪ ವಿರುದ್ಧವಾಗಲಿ ಅಥವಾ ವಿಜಯೇಂದ್ರ ವಿರುದ್ದವಾಗಲಿ ಮಾತನಾಡಿದರೆ ಅದು ಪಕ್ಷದ ವಿರುದ್ದವಾಗಿಯೇ ಮಾತನಾಡಿದಂತೆ. ನೀವು ಏನೇ ಹೇಳಬೇಕಾದರೂ ಪಕ್ಷದ ವೇದಿಕೆಯಲ್ಲಿ ಇಲ್ಲವೇ ಶಾಸಕಾಂಗ ಸಭೆಯಲ್ಲಿ ಮಾತನಾಡಿ ಎಂದರು.

ಸಿಎಂ ಪುತ್ರ ವಿಜಯೇಂದ್ರ ಎಲ್ಲೂ ಕೂಡ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅವರು ಭಷ್ಟಾಚಾರ ನಡೆಸಿದ್ದಾರೆ ಎಂದು ಬೊಬ್ಬೆ ಹೊಡೆಯುವ ನೀವು ಏಕೆ ದಾಖಲೆಗಳನ್ನು ಬಿಡುಗಡೆ ಮಾಡಿಲ್ಲ. ಯತ್ನಾಳ್ ವರ್ತನೆ ಇತ್ತೀಚೆಗೆ ಅತಿಯಾಯ್ತು. ಅವರಿಗೆ ಹೇಳುವವರು ಕೇಳುವವರು ಇಲ್ಲದಂತಾಗಿದೆ.ನಾವು ಏನೇ ಮಾತನಾಡಿದರೂ ಯಾರೂ ಏನು ಮಾಡಲಾರರು ಎಂಬ ಉದ್ದಟತನವಿದೆ. ವರಿಷ್ಠರು ಮೊದಲು ಅವರ ವಿರುದ್ಧ ಕ್ರಮ ಜರುಗಿಸಬೇಕು.ಅವರ ವರ್ತನೆ ಯಾರಿಗೂ ಕೂಡ ಶೋಭೆ ತರುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎಂಬ ಕಾರಣಕ್ಕೆ ವರ್ಗಾವಣೆಯನ್ನು ನಿಲ್ಲಿಸಬೇಕೆಂದು ನಾವೇ ಹೇಳಿದ್ದೇವೆ. ನಿಮ್ಮ ಕ್ಷೇತ್ರಕ್ಕೆ ಅನ್ಯಾಯವಾಗಿದ್ದರೆ ಅದನ್ನು ಸಂಬಂಧಪಟ್ಟವರಿಂದ ಸರಿಪಡಿಸಿಕೊಳ್ಳಿ ಎಂದರು. ನೀವು ಪದೇ ಪದೇ ಯಡಿಯೂರಪ್ಪ ಮತ್ತು ಅವರ ಕುಟುಂಬದವರನ್ನು ಗುರಿಯಾಗಿಟ್ಟುಕೊಂಡು ಟೀಕೆ ಮಾಡಿದರೆ ದೊಡ್ಡವರಾಗುವುದಿಲ್ಲ. ಒಂದು ವೇಳೆ ಭ್ರಷ್ಟಾಚಾರ ನಡೆಸಿರುವ ದಾಖಲೆಗಳಿದ್ದರೆ ಬಿಡುಗಡೆ ಮಾಡಿ. ಸುಖಾಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಿದರೆ ನಾವು ಎಷ್ಟು ದಿನ ಸಹಿಸಬೇಕು ಎಂದು ಪ್ರಶ್ನಿಸಿದರು.

ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಅತ್ಯಂತ ನೋವಿನಿಂದ ಹೇಳುತ್ತಿದ್ದೇನೆ ಎಂದು ವಿಷಾದಿಸಿದರು. ಯತ್ನಾಳ್ ಅವರು ಇನ್ನು ಮುಂದಾದರೂ ನಾಟಕ ಮಾಡುವುದನ್ನು ನಿಲ್ಲಿಸಬೇಕು. ನಿಮಗೆ ಸಿಎಂ ಕುಟುಂಬದ ವಿರುದ್ದ ಮಾತನಾಡಲು ಪಕ್ಷ ನಿಮಗೆ ಅವಕಾಶ ನೀಡಿದೆಯೇ? ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಯಡಿಯೂರಪ್ಪನವರು. ಅವರು ನಿಮ್ಮನ್ನು ನೋಡಿ ಕಲಿಯಬೇಕಾದ ಅಗತ್ಯವಿಲ್ಲ. ಯಡಿಯೂರಪ್ಪ ಅವರ ಬಗ್ಗೆ ಮಾತನಾಡಲು ನಿಮಗೆ ಏನು ನೈತಿಕತೆ ಇದೆ.

ಹೊನ್ನಾಳಿ ಕ್ಷೇತ್ರದಲ್ಲಿ ಪಂಚಮಸಾಲಿ ಸಮುದಾಯದವರು ನನಗೂ ಮತ ಹಾಕಿದ್ದಾರೆ. ನಾನು ಬಿಜಾಪುರಕ್ಕೂ ಬರುತ್ತೇನೆ. ನಿನಗೆ ತಾಕತ್ತಿದ್ದರೆ ಹೊನ್ನಾಳಿಗೆ ಬಂದು ಪ್ರಚಾರ ಮಾಡಿ. ಪದೇ ಪದೇ ಸಿಎಂ ವಿರುದ್ದ ಮಾತನಾಡಿದರೆ ನಾವು ಕೂಡ ಸಹಿಸುವುದಿಲ್ಲ. ಕೂಡಲೇ ರಾಜ್ಯಾಧ್ಯಕ್ಷರು ಶಾಸಕಾಂಗ ಸಭೆ ಕರೆದು ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು. ಮಾತೆತ್ತಿದ್ದರೆ ಮಾಜಿ ಪ್ರಧಾನಿ ವಾಜಪೇಯಿ ಅವರ ಹೆಸರು ಹೇಳುವ ಯತ್ನಾಳ್, ನಾಟಕ ಶುರು ಮಾಡಿಕೊಂಡಿದ್ದಾರೆ. ನೀವು ಬಾಯಿ ಮುಚ್ಚಿಕೊಳ್ಳದಿದ್ದರೆ ನಾವು ಕೂಡ ಮಾತನಾಡಬೇಕಾಗುತ್ತದೆ. ಇದಕ್ಕೂ ಬಗ್ಗದಿದ್ದರೆ ನಾವು ಏನು ಮಾಡಬೇಕೆಂಬುದು ಗೊತ್ತು ಎಂದು ತಿರುಗೇಟು ನೀಡಿದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ