ಬೆಳಗಾವಿ: ನಾಡಿನೆಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದ್ದರೆ, ಬೆಳಗಾವಿಯಲ್ಲಿ ಚನ್ನಮ್ಮನ ಕಿತ್ತೂರು ಉತ್ಸವದ ಸಂಭ್ರಮ ಕಳೆಗಟ್ಟಿದೆ.
ಅ.23 ರಿಂದ 25 ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಐತಿಹಾಸಿಕ ರಾಜ್ಯಮಟ್ಟದ ಉತ್ಸವಕ್ಕೆ ಕಿತ್ತೂರು ಸಜ್ಜಾಗಿದೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಶ್ವಾರೂಢ ಚನ್ನಮ್ಮನ ಪ್ರತಿಮೆ ಇರುವ ವೃತ್ತ, ಮಹಾದ್ವಾರ, ಕೋಟೆಯ ಆವರಣ ಮತ್ತು ಸರ್ಕಾರಿ ಕಚೇರಿಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.
ಕಿತ್ತೂರು ಉತ್ಸವವನ್ನು 1997ರಿಂದ ಆಚರಿಸಲಾಗುತ್ತಿದೆ. 2022ರಲ್ಲಿ ಬಿಜೆಪಿ ಸರ್ಕಾರ ಇದಕ್ಕೆ ರಾಜ್ಯಮಟ್ಟದ ಉತ್ಸವವೆಂದು ಅಧಿಕೃತ ಮುದ್ರೆ ಒತ್ತಿದೆ. ಇದರ ಪರಿಣಾಮ ಲಕ್ಷ ರೂಪಾಯಿಗಳ ಲೆಕ್ಕದಲ್ಲಿ ಬರುತ್ತಿದ್ದ ಅನುದಾನವೂ ಕೋಟಿಗೆ ತಲುಪಿದೆ. ಹಿಂದಿನಂತೆ ಈ ಬಾರಿಯೂ 2 ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆಗೊಳಿಸಿದ್ದು, ರಾಜ್ಯಮಟ್ಟದ ಉತ್ಸವದ ಅಂಗವಾಗಿ ಇಡೀ ಊರೇ ಬೆಳಕಿನ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದಿದೆ.
ಕೋಟೆ ಆವರಣದಲ್ಲಿ ಪ್ರಧಾನ ವೇದಿಕೆಯೊಂದಿಗೆ ಎರಡು ಸಮಾನಾಂತರ ವೇದಿಕೆ ನಿರ್ಮಿಸಲಾಗಿದೆ. ವೀರಭದ್ರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ‘ಸರದಾರ ಗುರುಸಿದ್ದಪ್ಪ’ ವೇದಿಕೆ ಮತ್ತು ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಬಳಿ ಇರುವ ರಾಜಗುರು ಗುರುಭವನದಲ್ಲಿ ‘ವಡ್ಡರ ಯಲ್ಲಣ್ಣ’ ವೇದಿಕೆ ತಲೆ ಎತ್ತಿದೆ. ಮುಖ್ಯ ವೇದಿಕೆ, ದೀಪಾಲಂಕಾರ, ವಸ್ತು ಪ್ರದರ್ಶನ ಮಳಿಗೆಗಳು, ಆಸನ ವ್ಯವಸ್ಥೆ ಸೇರಿದಂತೆ ಸಕಲ ಸಿದ್ಧತೆಗಳು ಅಚ್ಚುಕಟ್ಟಾಗಿ ಪೂರ್ಣಗೊಂಡಿವೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗಳು ಸಜ್ಜುಗೊಂಡಿವೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೋಮವಾರ ಬೆಳಿಗ್ಗೆ ಕಿತ್ತೂರಿನ ಚನ್ನಮ್ಮ ವೃತ್ತದಲ್ಲಿ ವೀರಜ್ಯೋತಿ ಸ್ವಾಗತಿಸಿ, ಜಾನಪದ ಕಲಾವಾಹಿನಿ, ವಸ್ತುಪ್ರದರ್ಶನ ಮಳಿಗೆ ಉದ್ಘಾಟನೆ ಹಾಗೂ ಮತ್ತಿತರ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಸಂಜೆ 7 ಗಂಟೆಗೆ ಉತ್ಸವದ ಉದ್ಘಾಟನೆ ಸಮಾರಂಭ ನಡೆಯಲಿದೆ. ಉತ್ಸವದ ಪೂರ್ವಸಿದ್ಧತೆಯನ್ನು ಭಾನುವಾರ ಸಂಜೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಚ.ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಉತ್ಸವದಲ್ಲಿ ಭಾಗವಹಿಸುವ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕೋಟೆ ಆವರಣದಲ್ಲಿರುವ ಮುಖ್ಯ ವೇದಿಕೆ, ಆಸನಗಳ ವ್ಯವಸ್ಥೆ, ವಸ್ತುಪ್ರದರ್ಶನ ಮಳಿಗೆ, ದೀಪಾಲಂಕಾರ, ಮಾಧ್ಯಮ ಕೇಂದ್ರ, ಪಾರ್ಕಿಂಗ್ ವ್ಯವಸ್ಥೆ ಮತ್ತಿತರ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದರು. ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇರುವುದರಿಂದ ಸೂಕ್ತ ಮೂಲಸೌಕರ್ಯಗಳ ಜತೆಗೆ ಭದ್ರತಾ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.