Breaking News
Home / ರಾಜಕೀಯ / 2 ಲಕ್ಷಕ್ಕೂ ಅಧಿಕ ಗಿಡ ನೆಟ್ಟ ಶಿವಾಜಿ ಕಾಗಣಿಕರ್

2 ಲಕ್ಷಕ್ಕೂ ಅಧಿಕ ಗಿಡ ನೆಟ್ಟ ಶಿವಾಜಿ ಕಾಗಣಿಕರ್

Spread the love

ಬೆಳಗಾವಿ: ಇಂದು ವಿಶ್ವ ಪರಿಸರ ದಿನ. ಉಸಿರಾಡಲು ಶುದ್ಧ ಗಾಳಿಯನ್ನು ನೀಡುವ ಮರಗಳನ್ನು ವರ್ಷಕ್ಕೊಮ್ಮೆ ಪರಿಸರ ದಿನದಂದು ಮಾತ್ರ ನೆನಪು ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಆದರೆ, ಮರಗಳನ್ನು ಕೇವಲ ನೆನಪು ಮಾಡಿಕೊಂಡರೆ ಸಾಲದು. ಅವುಗಳನ್ನು ಉಳಿಸಿ, ಬೆಳೆಸುವತ್ತ ಗಮನಹರಿಸಬೇಕಿದೆ.

ಆಧುನೀಕರಣ ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಯ ಪರಿಣಾಮದಿಂದ ಅರಣ್ಯ ನಾಶವಾಗುತ್ತಿದೆ. ಇದರಿಂದ ಹಲವು ದುಷ್ಪರಿಣಾಮಗಳು ಎದುರಾಗುತ್ತಿದೆ. ಈ ನಡುವೆ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ವ್ಯಕ್ತಿಯೊಬ್ಬರು ನೆಲವನ್ನು ಹಚ್ಚ ಹಸಿರಾಗಿಸುವ ಧ್ಯೇಯವೊಂದರಲ್ಲಿ ತೊಡಗಿಸಿಕೊಂಡಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ಖಾದಿ ಅಂಗಿ – ಚಡ್ಡಿ, ತಲೆಗೆ ಗಾಂಧಿ ಟೋಪಿ, ಕುರಚಲು ಗಡ್ಡ, ಬಗಲಲ್ಲಿ ಬಟ್ಟೆ ಚೀಲ ಹಾಕಿಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಾ, ಪರಿಸರ ಕುರಿತು ಕೇವಲ ಭಾಷಣ ಮಾಡದೇ ಹಸಿರು ಮತ್ತು ಜಲ ಕ್ರಾಂತಿ ಮಾಡಿದ ಓರ್ವ ಯಶಸ್ವಿ ಸಾಧಕನ ಕಥೆಯಿದು. ಹೌದು. ಹೀಗೆ ಮರಗಳ ಮಧ್ಯ ನಿಂತಿರುವ ಇವರ ಹೆಸರು ಶಿವಾಜಿ ಛತ್ರಪ್ಪ ಕಾಗಣಿಕರ್. ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದವರು. 1972ರಲ್ಲಿ ಮನೆ ಬಿಟ್ಟ ಇವರು‌ ಒಬ್ಬ ಅಪ್ಪಟ ಗಾಂಧಿವಾದಿ, ಪರಿಸರವಾದಿ, ಶಿಕ್ಷಕ ಹಾಗೂ ಹೋರಾಟಗಾರ. ಬರಿಗಾಲ ಫಕೀರನಂತೆ ಕಾಣುವ ಇವರ ಪರಿಸರ ಮತ್ತು ಜಲ ಕ್ರಾಂತಿ ಕಟ್ಟಣಭಾವಿ, ಬಂಬರಗಾ, ಇದ್ದಿಲಹೊಂಡ, ಗುರಾಮಟ್ಟಿ, ದೇವಗಿರಿ ಸೇರಿ ಸುತ್ತಮುತ್ತಲಿನ ಬೋಳು ಬೆಟ್ಟ, ಗುಡ್ಡ, ಹೊಲ ಗದ್ದೆಗಳನ್ನು ಹಚ್ಚ ಹಸಿರಾಗಿಸಿದೆ. ದಕ್ಷಿಣ ಕರ್ನಾಟಕದಲ್ಲಿ ಸಾಲು ಮರದ ತಿಮ್ಮಕ್ಕ ವೃಕ್ಷಕ್ರಾಂತಿ ಮಾಡಿದಂತೆ ಉತ್ತರ ಕರ್ನಾಟಕದಲ್ಲಿ ಈ ಶಿವಾಜಿ ಕಾಣಿಕರ್​ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ.

ಸಸಿಗಳ‌ನ್ನು ವಿತರಿಸಿ ಪರಿಸರ ಜಾಗೃತಿ: 74 ವರ್ಷದ ಶಿವಾಜಿ ಕಾಗಣಿಕರ್​ ಒಂದು ಊರಿನಿಂದ ಮತ್ತೊಂದು ಊರಿಗೆ, ಆ ಹೊಲದಿಂದ ಮತ್ತೊಂದು ಹೊಲಕ್ಕೆ ಸಂಚರಿಸುತ್ತ ತಾವು ನೆಟ್ಟ ಗಿಡಗಳನ್ನು ವೀಕ್ಷಿಸುತ್ತಾರೆ. ಸಾದಾ – ಸೀದಾ ಹಳ್ಳಿ ಹೈದನಾಗಿರುವ ಅವರು ಯಾವುದೇ ಪ್ರಚಾರ ಮತ್ತು ಫಲಾಪೇಕ್ಷೆ ಬಯಸದೇ ತಮ್ಮ ಕೆಲಸದ ಮೂಲಕವೇ ಸದ್ದು ಮಾಡುತ್ತಿದ್ದಾರೆ.

 ಕಟ್ಟಣಭಾವಿ ಕೆರೆ

1984ರಲ್ಲಿ ಮೊದಲ ಬಾರಿ ಹಂದಿಗನೂರ ಪ್ರೌಢಶಾಲೆ ಆವರಣದಲ್ಲಿ ಗಿಡ ನೆಡುವ ಮೂಲಕ ಆರಂಭವಾದ ಇವರ ಪರಿಸರ ಕಾಯಕ ನಂತರ ಬಂಬರಗಾ ಶಾಲೆ, ದೇವಗಿರಿಯ ಗಾಂಧಿಘರ ಸೇರಿ ಮತ್ತಿತರ ಕಡೆ ಮುಂದುವರೆಯಿತು. ಇದೇ ವೇಳೆ ಅರಣ್ಯ ಇಲಾಖೆಯಿಂದ 5 ಸಾವಿರ ಸಸಿ ತರಿಸಿ ವಿದ್ಯಾರ್ಥಿಗಳಿಗೆ ವಿತರಿಸಿದ್ದರು. ಹೀಗೆ ಸುತ್ತಲಿನ ಶಾಲೆಗಳ ವಿದ್ಯಾರ್ಥಿಗಳಿಗೂ ಸಸಿಗಳ‌ನ್ನು ವಿತರಿಸಿ ಜಾಗೃತಿ ಮೂಡಿಸಿದ್ದರು.

‘ದೀನಬಂಧು’ ಎಂಬ ಸರಳ ಗೋಬರ್ ಘಟಕ: ಅಡುಗೆಗೆ ಕಟ್ಟಿಗೆಗಳನ್ನು ಬಳಕೆ ಮಾಡುತ್ತಿದ್ದರಿಂದ ಕಾಡು ನಾಶವಾಗುತ್ತಿತ್ತು. ಅಲ್ಲದೇ ಮಹಿಳೆಯರು ವಿವಿಧ ಕಾಯಿಲೆಗಳಿಂದ ಬಳಲುವಂತಾಗುತ್ತಿತ್ತು. ಇದನ್ನರಿತ ಶಿವಾಜಿ ಅವರು, ಹೊಗೆ ರಹಿತ ಒಲೆಗೆ ಗೋಬರ್ ಗ್ಯಾಸ್ ಉತ್ತಮ ಪರಿಹಾರವೆಂದು ಈ ಭಾಗದಲ್ಲಿ ಜಾಗೃತಿ ಮೂಡಿಸಿದರು. ಎನ್‌ಜಿಒ ಜತೆ ಒಡಬಂಡಿಕೆ ಮಾಡಿಕೊಂಡು ‘ದೀನಬಂಧು’ ಎಂಬ ಸರಳ ಗೋಬರ್ ಘಟಕಗಳನ್ನು 14 ಸಾವಿರಕ್ಕೂ ಹೆಚ್ಚಿನ ಜನರಿಗೆ ತಲುಪಿಸಿ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ದೊಡ್ಡ ಕೆಲಸ ಮಾಡಿದ್ದಾರೆ. ಅಲ್ಲದೇ ಉದ್ಯೋಗ ಖಾತ್ರಿ ಯೋಜನೆಯನ್ನು ಕೂಲಿ ಕಾರ್ಮಿಕರ ಚಳವಳಿಯನ್ನಾಗಿಸಿ ಜಾಗೃತಿ ಮೂಡಿಸುತ್ತಿದ್ದಾರೆ.

 ಪರಿಸರವಾದಿ ಶಿವಾಜಿ ಕಾಗಣಿಕರ್

2 ಲಕ್ಷ ಗಿಡಗಳು ಸಮೃದ್ಧವಾಗಿ ಸಿಂತಿವೆ..: ನಿಂಗ್ಯಾನಟ್ಟಿ ಗ್ರಾಮದ ಶಂಕರ ಹಿರೇಮಠ ಅವರ ಹೊಲದಲ್ಲಿ ‘ಈಟಿವಿ ಭಾರತ’ದೊಂದಿಗೆ ಶಿವಾಜಿ ಅವರು ತಮ್ಮ‌ ಅನುಭವ ಹಂಚಿಕೊಂಡರು. “ಮೊದಲು ಈ ಗ್ರಾಮಗಳಲ್ಲಿ‌ ಗಿಡಮರಗಳನ್ನು‌ ಕಡಿದು ಮಾರಾಟ ಮಾಡಿಯೇ ಇಲ್ಲಿನ ಜನ ಉಪಜೀವನ ನಡೆಸುತ್ತಿದ್ದೆ. ಈ ವೇಳೆ ಕೆಲ ರೈತರನ್ನು ಸಂಪರ್ಕಿಸಿ ಅವರ ಆದಾಯ ಹೆಚ್ಚಾಗುವ ನಿಟ್ಟಿನಲ್ಲಿ ಮರಗಳ ಬೆಳೆಸಲು ಪ್ರೇರೇಪಿಸಲಾಯಿತು.

1995ರಿಂದ ನಿರಂತರವಾಗಿ ಪೂರ್ಣ ಪ್ರಮಾಣದಲ್ಲಿ ಗಿಡಗಳನ್ನು ನೆಡಲು ಆರಂಭಿಸಿದೆ. 2010ಕ್ಕೆ‌ ಸುಮಾರು 2.5 ಲಕ್ಷ ಗಿಡಗಳನ್ನು ನೆಟ್ಟಿದ್ದೇವು. ಈ ಪೈಕಿ ಸ್ಥಳೀಯ ರೈತರ ಸಹಕಾರದೊಂದಿಗೆ ಮಾವು, ಹಲಸು, ಗೋಡಂಬಿ, ಬಿದಿರು‌ ಸೇರಿ ಮತ್ತಿತರ 2 ಲಕ್ಷ ಗಿಡಗಳು ಇಂದು ಬೆಳೆದು ನಿಂತಿವೆ” ಎಂದರು.‌

ಪರಿಸರ ಜಾಗೃತಿ ಜತೆಗೆ ಕೆರೆಗಳ ನಿರ್ಮಾಣ: ಜಲಾನಯನ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಜರ್ಮನ್ ದೇಶದ ರೂಡಾಲ್ಫ್ ಅವರು ನೀಡಿದ ಒಟ್ಟು 30 ಲಕ್ಷ ರೂ. ಅನುದಾನದಲ್ಲಿ ಜನಜಾಗರಣ ಸಂಸ್ಥೆ ಮತ್ತು ಗ್ರೀನ್ ಸೇವಿಯರ್ಸ್ ಮೂಲಕ ಮರ ಬೆಳೆಸುವ ಜತೆಗೆ ಕಟ್ಟಣಭಾವಿಯಲ್ಲಿ 2, ನಿಂಗ್ಯಾನಟ್ಟಿ 3, ಇದ್ದಿಲಹೊಂಡ ಹಾಗೂ ಗುರಾಮಟ್ಟಿ ಗ್ರಾಮದಲ್ಲಿ ತಲಾ ಒಂದು ಕೆರೆ ನಿರ್ಮಿಸಿದ್ದೇವೆ. ಭಾವಿ, ಹಳ್ಳಗಳ ಪುನಶ್ಚೇತನ ಮಾಡಿದ್ದು, ಕಾಲುವೆಯಿಂದ ಹಳ್ಳಕ್ಕೆ ನೀರು ಹೋಗುವಂತೆ, ಹಳ್ಳದಿಂದ ನದಿಗೆ ನೀರು ಹೋಗುವಂತೆ ಮಾಡಿದ್ದೇವೆ. ಗುಡ್ಡದಿಂದ ಇಳಿಜಾರು ಪ್ರದೇಶದಲ್ಲಿ ಹರಿದು ಹೋಗುತ್ತಿದ್ದ ನೀರನ್ನು ಸಂಗ್ರಹಿಸಲು ಸಮಾನಾಂತರ ಕಾಲುವೆ ನಿರ್ಮಿಸಲಾಗಿದೆ ಎಂದು ವಿವರಿಸಿದರು.

ಸಾಧಕನಿಗೆ ಸಂದ ಹಲವು ಪ್ರಶಸ್ತಿ: ನಿಮ್ಮ ಈ ಸೇವೆಗೆ ಯಾವೆಲ್ಲ ಪ್ರಶಸ್ತಿ ಅರಸಿ ಬಂದಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು “ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಡಿ.ದೇವರಾಜ ಅರಸು ಪ್ರಶಸ್ತಿ ಬಂದಿವೆ. ಆದರೆ ಇವತ್ತು ನಾನು ಯಾವ ಊರಿಗೆ ಹೋದರೂ ಕೂಡ ಆ ಊರಿನ 10-12 ವರ್ಷದ ಹುಡುಗರು ಬಂದು ನನ್ನ ಕೈ ಹಿಡಿದು, ಅಜ್ಜ ನಮ್ಮ ಮನಿಗೆ ರೊಟ್ಟಿ ತಿನ್ನಾಕ ಬಾ ಅಂತ ಕರೆಯುತ್ತಾರೆ. ಇದಕ್ಕಿಂತ ದೊಡ್ಡ ಪ್ರಶಸ್ತಿ ನನಗೆ ಯಾವುದೂ ಅಲ್ಲ” ಎಂದು ಹೇಳುವ ಮೂಲಕ ಗ್ರಾಮಸ್ಥರ ಜತೆಗಿನ ತಮ್ಮ ಭಾವನಾತ್ಮಕ ನಂಟನ್ನು ಹಂಚಿಕೊಂಡರು.

ಶಿವಾಜಿ ಅವರಿಂದ ಪ್ರೇರಣೆ ಪಡೆದುಕೊಂಡಿರುವ ಹಲವಾರು ರೈತರು ಮರಗಳನ್ನು ಬೆಳೆಸುತ್ತಿರುವುದರಿಂದ ಉತ್ತಮ ಆದಾಯ ಕೂಡ ಗಳಿಸುತ್ತಿದ್ದಾರೆ. ಹೀಗೆ ಅವರಿಂದ ಸಲಹೆ ಪಡೆದಿರುವ ರೈತ ಶಂಕರ ಹಿರೇಮಠ ಮಾತನಾಡಿ “ಇವರು ನಮಗೆ ಬಹಳಷ್ಟು ಉಪಯೋಗ ಮಾಡಿ ಕೊಟ್ಟಿದ್ದಾರೆ. ನಮ್ಮ ಹೊಲದ ಹಳ್ಳದ ದಂಡೆಯಲ್ಲಿ ಅವರು ತಂದು ಕೊಟ್ಟಿದ್ದ ಬಿದಿರು, ಗೊಬ್ಬರ ಗಿಡ, ಮಾವಿನ ಗಿಡಗಳನ್ನು ನೆಟ್ಟಿದ್ದೇವು. ಈಗ ಪ್ರತಿ‌ ಎರಡ್ಮೂರು ವರ್ಷಕ್ಕೊಮ್ಮೆ ಬಿದಿರು ಕಟಾವು ಮಾಡಿ ಆದಾಯ ಗಳಿಸುತ್ತಿದ್ದೇವೆ. ಮಾವಿನ ಮರಗಳು ಕೂಡ ಸಾಕಷ್ಟು ಫಲ ಕೊಡುತ್ತಿವೆ. ಒಟ್ಟಾರೆ ನಮಗೆ ಬಹಳಷ್ಟು ಅನುಕೂಲ ಆಗಿದೆ” ಎಂದರು.

ಬ್ರಹ್ಮಚಾರಿಯಾಗಿರುವ ಶಿವಾಜಿ ಕಾಗಣಿಕರ್ ಅವರು, ಗಿಡ‌ ಮರಗಳು, ಕೆರೆ, ಭಾವಿ, ಹಳ್ಳಗಳು ಹಾಗೂ ರೈತರೇ ನನ್ನ ಕುಟುಂಬ ಎಂದು ಸಾಗಿಸುತ್ತಿರುವ ಸಾರ್ಥಕ ಜೀವನ ಇತರರಿಗೆ ಮಾದರಿ.


Spread the love

About Laxminews 24x7

Check Also

ಸಿದ್ದರಾಮಯ್ಯನವರೇ ಅಧಿಕಾರದಿಂದ ಇಳೀರಿ, 24 ಗಂಟೆಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳುತ್ತೇವೆ. : ಆರ್. ಅಶೋಕ್ ಸವಾಲು

Spread the loveಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಸಿಎಂ ಸಿದ್ದರಾಮಯ್ಯ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ