Breaking News
Home / ರಾಜಕೀಯ / ಪಂಚಮಸಾಲಿ: ಸದ್ಯಕ್ಕೆ ಮೀಸಲಾತಿ ಸಿಗದು; ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಸುಳಿವು

ಪಂಚಮಸಾಲಿ: ಸದ್ಯಕ್ಕೆ ಮೀಸಲಾತಿ ಸಿಗದು; ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಸುಳಿವು

Spread the love

ಬೆಂಗಳೂರು: “ಲಿಂಗಾಯತ ಪಂಚಮಸಾಲಿ ಮೀಸಲಾತಿ ಕುರಿತು ಗಡಿಬಿಡಿಯಲ್ಲಿ ವರದಿ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿ, ನಿಯಮಾನುಸಾರ ಅಧ್ಯಯನ ನಡೆಸಿ ಅನಂತರ ಸರಕಾರಕ್ಕೆ ಸಲ್ಲಿಸಬೇಕಾಗುತ್ತದೆ’.

– ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಮೀಸಲಾತಿ 2ಎಗೆ ಸೇರಿಸುವ ಸಂಬಂಧದ ಪ್ರಕ್ರಿಯೆಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ನೀಡಿದ ಪ್ರತಿಕ್ರಿಯೆ ಇದು.

ಈ ಮೂಲಕ ರಾಜ್ಯದ ಪ್ರಬಲ ಸಮುದಾಯಕ್ಕೆ ಮೀಸಲಾತಿ ಭಾಗ್ಯ ಸದ್ಯಕ್ಕಿಲ್ಲ ಎಂದು ಸುಳಿವು ನೀಡಿದರು.

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬ ಮನವಿ ಮೇರೆಗೆ ಈಗಾಗಲೇ ರಾಜ್ಯಾದ್ಯಂತ ಸುಮಾರು 26-27 ಸಾರ್ವಜನಿಕ ವಿಚಾರಣೆಗಳನ್ನು ನಡೆಸಿ, ಅಹವಾಲುಗಳನ್ನು ಸಂಗ್ರಹಿಸಲಾಗಿದೆ.
ಅದೆಲ್ಲವನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಅದಕ್ಕೂ ಮುನ್ನ ಉದ್ದೇಶಿತ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನ ಮಾಡಬೇಕು. ಅನಂತರ ನಿಯಮಾನುಸಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಹಾಗಾಗಿ ಗಡಿಬಿಡಿಯಲ್ಲಿ ವರದಿ ನೀಡಲು ಸಾಧ್ಯವಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದೇ ರೀತಿ, ಮತ್ತೊಂದು ಪ್ರಬಲ ಸಮುದಾಯವಾದ ಒಕ್ಕಲಿಗರೂ ಮೀಸಲಾತಿಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದ್ದಾರೆ. ಅದರ ಮೇರೆಗೆ ಚರ್ಚೆಗೆ ಆಹ್ವಾನಿಸಲಾಗಿತ್ತು. ಆದರೆ ದಾಖಲೆಗಳ ಸಂಗ್ರಹ ಮತ್ತಿತರ ಕಾರಣಗಳಿಗಾಗಿ ಸಮಯಾವಕಾಶ ಕೇಳಿದ್ದಾರೆ. ಈ ಎಲ್ಲ ಅಂಶಗಳಿಂದಾಗಿ ಅಂತಿಮ ವರದಿ ಸಲ್ಲಿಕೆಗೆ ಇನ್ನಷ್ಟು ಸಮಯ ಹಿಡಿಯುತ್ತದೆ. ಇಂತಿಷ್ಟೇ ಅವಧಿಯಲ್ಲಿ ಸಲ್ಲಿಸಲಾಗುವುದು ಎಂದೂ ಹೇಳಲಾಗದು ಎಂದು ಸ್ಪಷ್ಟಪಡಿಸಿದರು.

“ತಮಿಳುನಾಡಿನ ವಣ್ಣಿಯಾರ್‌ ಸಮುದಾಯಕ್ಕೆ ಮೀಸಲಾತಿ ನೀಡುವ ಬಗ್ಗೆ ನೀಡಲಾದ ತೀರ್ಪು ನಮಗೆ “ಬೆಂಚ್‌ಮಾರ್ಕ್‌’ (ಮಾನದಂಡ) ಆಗಿದೆ. ಗಡಿಬಿಡಿಯಲ್ಲಿ ನಾವು ವರದಿ ನೀಡಿದ ಅನಂತರ ನ್ಯಾಯಾಲಯದಲ್ಲಿ ಇದಕ್ಕೆ ಮಾನ್ಯತೆ ಸಿಗದಿದ್ದರೆ ಏನು ಪ್ರಯೋಜನ? ಹಾಗಾಗಿ ಸಮಗ್ರ ಅಧ್ಯಯನ ಮಾಡಿ ಸ್ಪಷ್ಟ ಶಿಫಾರಸು ಮಾಡಬೇಕಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಡಿಸೆಂಬರ್‌ನಲ್ಲಿ ಮಧ್ಯಾಂತರ ವರದಿ ಸಲ್ಲಿಕೆಗೆ ಒತ್ತಡ ಇತ್ತಾ ಎಂದು ಕೇಳಿದಾಗ, “ಆಯೋಗದ ಮೇಲೆ ಸರಕಾರ ಒತ್ತಡ ಹಾಕಲು ಬರುವುದಿಲ್ಲ. ಮಧ್ಯಾಂತರ ವರದಿಗೆ ಒತ್ತಡವೂ ಇರಲಿಲ್ಲ; ಬದಲಿಗೆ ಅದರ ಆವಶ್ಯಕತೆ ಇತ್ತು’ ಎಂದು ಸಮಜಾಯಿಷಿ ನೀಡಿದರು.

ಸರಕಾರವು ಕಳೆದ ಡಿಸೆಂಬರ್‌ನಲ್ಲಿ ಇದೇ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ಮಧ್ಯಾಂತರ ವರದಿ ಬೆನ್ನಲ್ಲೇ ರಾಜ್ಯದ ಎರಡು ಪ್ರಬಲ ಸಮುದಾಯಗಳಾದ ವೀರಶೈವ-ಲಿಂಗಾಯತ ಮತ್ತು ಒಕ್ಕಲಿಗರಿಗಾಗಿ ಪ್ರತ್ಯೇಕ ವರ್ಗಗಳನ್ನು ರೂಪಿಸಿ, ಕ್ರಮವಾಗಿ ಪ್ರವರ್ಗ-2 “ಡಿ’ ಮತ್ತು 2 “ಸಿ’ಗೆ ಸೇರಿಸಿ ಮೀಸಲಾತಿ ಸೌಲಭ್ಯ ಕಲ್ಪಿಸುವುದಾಗಿ ಪ್ರಕಟಿಸಿತ್ತು. ಮುಂದಿನ ಮೂರು ತಿಂಗಳಲ್ಲಿ ಆಯೋಗದ ಅಂತಿಮ ವರದಿ ಸಲ್ಲಿಕೆಯಾಗಲಿದ್ದು, ಅದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು.

ಮೀಸಲು ನೀಡದಿದ್ದರೆ ಹೋರಾಟ
ಪಂಚಮಸಾಲಿಗೆ 2ಎ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರ ತನ್ನ ನಿಲುವು ಪ್ರಕಟಿಸದಿದ್ದರೆ ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ ಹೋರಾಟಕ್ಕೆ ನಿರ್ಧರಿಸಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿಗಾಗಿ ಫ್ರೀಡಂಪಾರ್ಕ್‌ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 61ನೇ ದಿನಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪತ್ರಿಕಾಗೋಷ್ಠಿ ನಡೆಸಿ ಸರಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು.

ನಮ್ಮ ಸಮಾಜವನ್ನು ಅವಗಣಿಸಿ ಹೋಗುವ ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿ ನಮ್ಮ ಬೆಂಬಲ ಇರುವುದಿಲ್ಲ. ಇದು ಚುನಾವಣೆಯ ಮೇಲೆ ಬಹಳಷ್ಟು ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ