Breaking News
Home / ರಾಜಕೀಯ / ರೈತರಿಗೆ ಹದ್ದುಬಸ್ತು ಶುಲ್ಕದ ಹೊರೆ; ಪೋಡಿ ಫೀಸ್ ಹೆಚ್ಚಳ ಬೆನ್ನಲ್ಲೇ ಫೆ.1ರಿಂದ ಹೊಸ ನಿಯಮ ಜಾರಿ

ರೈತರಿಗೆ ಹದ್ದುಬಸ್ತು ಶುಲ್ಕದ ಹೊರೆ; ಪೋಡಿ ಫೀಸ್ ಹೆಚ್ಚಳ ಬೆನ್ನಲ್ಲೇ ಫೆ.1ರಿಂದ ಹೊಸ ನಿಯಮ ಜಾರಿ

Spread the love

ಕೃಷಿ ಭೂಮಿ ಪೋಡಿ ಶುಲ್ಕ ಹೆಚ್ಚಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಹದ್ದುಬಸ್ತು ಶುಲ್ಕವನ್ನೂ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಫೆ.1ರಿಂದಲೇ ಹೊಸ ಶುಲ್ಕ ಜಾರಿಗೆ ಬಂದಿದೆ. ಆದರೆ, ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಈಗಾಗಲೇ ಅಳತೆಗಾಗಿ ಸಲ್ಲಿಕೆಯಾಗಿರುವ ಬಾಕಿ ಅರ್ಜಿಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

 

ಶುಲ್ಕ ಎಷ್ಟು ಹೆಚ್ಚಳ: ಗ್ರಾಮೀಣ ಪ್ರದೇಶದಲ್ಲಿ 2 ಎಕರೆವರೆಗೆ ಪ್ರತಿ ಸರ್ವೆ ನಂಬರ್​ಗೆ ಈ ಹಿಂದೆ 35 ರೂ.ಇದ್ದ ಶುಲ್ಕವನ್ನು 1,500 ರೂ.ಗೆ, 2 ಎಕರೆಗಿಂತ ಮೇಲ್ಪಟ್ಟ ಭೂಮಿಗೆ ಪ್ರತಿ ಎಕರೆಗೆ 300 ರೂ. ಹೆಚ್ಚುವರಿ ಶುಲ್ಕ, ಹಾಗೂ 3 ಸಾವಿರ ರೂ. ಗರಿಷ್ಠ ಶುಲ್ಕ ನಿಗದಿಪಡಿಸಿದೆ. ನಗರ ಪ್ರದೇಶದಲ್ಲಿ 2 ಎಕರೆವರೆಗೆ 2 ಸಾವಿರ ರೂ. ಹಾಗೂ 2 ಎಕರೆಗಿಂತ ಹೆಚ್ಚು ಮೇಲ್ಪಟ್ಟ ಭೂಮಿಗೆ ಪ್ರತಿ ಎಕರೆಗೆ 400 ರೂ. ಹೆಚ್ಚುವರಿ ಶುಲ್ಕವಿದೆ. ಗರಿಷ್ಠ ಶುಲ್ಕ 4 ಸಾವಿರ ರೂ. ನಿಗದಿಪಡಿಸಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಪ್ರತಿ ಬಾಜೂದಾರರಿಗೆ 25 ರೂ. ನೋಟಿಸ್ ಶುಲ್ಕ ವಿಧಿಸಿದೆ.

ಏನಿದು ಹದ್ದುಬಸ್ತು?: ಪೋಡಿಯಾದ ಜಮೀನು ಅಥವಾ ಜಾಗ ಬೇರೆಯವರಿಂದ ಒತ್ತುವರಿಯಾಗಿದ್ದರೆ ಅಳತೆ ಮಾಡಿ ನಿಖರ ಗಡಿ ಗುರುತಿಸಿ ಬಂದೋಬಸ್ತ್ ಮಾಡಿಕೊಳ್ಳುವುದೇ ಹದ್ದುಬಸ್ತು. ಮಾಲೀಕರಿಗೆ ತಮ್ಮ ಜಮೀನು ಮತ್ತು ಜಾಗದ ವಿಸ್ತೀರ್ಣ ಬಗ್ಗೆ ಸಮರ್ಪಕವಾಗಿ ಗೊತ್ತಿರುವುದಿಲ್ಲ. ಹಾಗಾಗಿ, ಹದ್ದುಬಸ್ತು ಮಾಡಿಕೊಂಡರೆ ಜಮೀನು ಎಲ್ಲಿ ಒತ್ತುವರಿಯಾಗಿದೆ, ಯಾರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಒತ್ತುವರಿ ಜಾಗ ತೆರವುಗೊಳಿಸಿ ನಿಖರ ಗಡಿ ಗುರುತಿಸಬಹುದು.

ಶುಲ್ಕ ಬರೆ: ಭೂಮಿ ಅಳತೆಗಾಗಿ, ಭೂಮಿ ಹಂಚಿಕೆಗಾಗಿ, ತತ್ಕಾಲ್ ಇನ್ನಿತರ ಕೆಲಸಕ್ಕಾಗಿ ರೈತರು ಸಾವಿರಾರು ರೂಪಾಯಿ ಶುಲ್ಕ ಕಟ್ಟುತ್ತಿದ್ದಾರೆ. ಶುಲ್ಕ ಕಟ್ಟಿ ವರ್ಷಗಳೇ ಕಳೆದರೂ ಕೆಲಸವೂ ಆಗುತ್ತಿಲ್ಲ. ಪ್ರತಿ ವರ್ಷ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆಯೂ ಸರಿಯಾಗಿ ರೈತರಿಗೆ ಸಿಗಲ್ಲ. ಅಳಿದುಳಿದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತವಾದ ಬೆಲೆ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಮೀನು ಗುರುತಿಸುವಿಕೆಗೆ ಸಾವಿರಾರು ರೂ. ಹದ್ದುಬಸ್ತು ಶುಲ್ಕ ಕಟ್ಟುವ ಸನ್ನಿವೇಶ ಎದುರಾಗಿದೆ.

ಪೋಡಿ ಯೋಜನೆ: ಸಂಬಂಧಿಗಳ ಆಸ್ತಿ ವಿಭಾಗ ಮಾಡಿಕೊಳ್ಳಲು ಜಮೀನು ನಕಾಶೆ ಹಾಗೂ ಚಕ್ಕುಬಂದಿ ರಚಿಸಿ ಪಹಣಿಯಲ್ಲಿ ಹೆಸರು ದಾಖಲಿಸುವುದೇ ಪೋಡಿ. ಆದರೆ, ಜಮೀನು ಅಳತೆ, ನಕ್ಷೆ ಇಲ್ಲದಿರುವುದು ಮತ್ತು ಒಡೆತನ ಸೇರಿ ಹತ್ತಾರು ಸಮಸ್ಯೆಗಳಿಂದ ಕುಟುಂಬಗಳ ನಡುವೆ ಭೂಮಿ ಹಂಚಿಕೆಯಾಗದೆ ಬಹು ಮಾಲೀಕತ್ವದಲ್ಲಿ ಉಳಿಯುತ್ತಿದೆ. ಇಂತಹ ಬಹುಮಾಲೀಕತ್ವ ಪಹಣಿಗಳನ್ನು ಏಕವ್ಯಕ್ತಿ ಹೆಸರಿನಲ್ಲಿ ಪಹಣಿ ತಯಾರಿಸುವುದು ಪೋಡಿ ಯೋಜನೆ.

ವೆಚ್ಚ ಹೆಚ್ಚಳ ಹಿನ್ನೆಲೆ: ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 131(ಬಿ)ರಡಿ ಸಾರ್ವಜನಿಕರಿಂದ ಅಳತೆಗಾಗಿ ಮೋಜಿಣಿ ವ್ಯವಸ್ಥೆಯಡಿ ಸಲ್ಲಿಕೆಯಾಗುವ ಹದ್ದುಬಸ್ತು ಅರ್ಜಿಗಳಿಗೆ ಪ್ರತಿ ಸರ್ವೆ ನಂಬರ್​ಗೆ 35 ರೂ.ಇತ್ತು. ಅಲ್ಲದೆ, ಗ್ರಾಮದ 4 ಸರ್ವೆ ಅಥವಾ ಹಿಸ್ಸಾ ನಂಬರ್​ಗೆ 35 ರೂ.ಇತ್ತು. ಹೆಚ್ಚುವರಿ ಸರ್ವೆ ಅಥವಾ ಹಿಸ್ಸಾ ನಂಬರ್​ಗಳಿಗೆ 10 ರೂ.ಇತ್ತು. ಅಂದಾಜು 45 ವರ್ಷಗಳ ಹಿಂದೆ ಈ ಶುಲ್ಕವನ್ನು ನಿಗದಿಪಡಿಸಲಾಗಿತ್ತು. ಇದುವರೆಗೆ ಪರಿಷ್ಕರಣೆ ಆಗಿರಲಿಲ್ಲ. ಆಡಳಿತಾತ್ಮಕ ಮತ್ತು ನಿರ್ವಹಣಾ ವೆಚ್ಚ ಅಧಿಕವಾಗಿರುವ ಹಿನ್ನೆಲೆಯಲ್ಲಿ ಶುಲ್ಕ ಏರಿಸಲಾಗಿದೆ ಎಂದು ಆದೇಶದಲ್ಲಿ ಸರ್ಕಾರ ಉಲ್ಲೇಖಿಸಿದೆ.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ