Breaking News
Home / ರಾಜಕೀಯ / ಸವರಾಜ ಬೊಮ್ಮಾಯಿ ಅವರ ನಡೆಗೆ ಮೂಲ ಬಿಜೆಪಿಗರಲ್ಲಿ ಅಸಮಾಧಾನ

ಸವರಾಜ ಬೊಮ್ಮಾಯಿ ಅವರ ನಡೆಗೆ ಮೂಲ ಬಿಜೆಪಿಗರಲ್ಲಿ ಅಸಮಾಧಾನ

Spread the love

ಬೆಂಗಳೂರು,ನ.13- ಒಂದು ಕಡೆ ಬಿಟ್ ಕಾಯಿನ್ ಪ್ರಕರಣ ಇನ್ನೊಂದು ಕಡೆ ವಲಸಿಗರಿಗೆ ವಿಶೇಷ ಮನ್ನಣೆ ಹಾಕುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡೆಗೆ ಮೂಲ ಬಿಜೆಪಿಗರಲ್ಲಿ ಅಸಮಾಧಾನ ಎದ್ದಿದೆ.

ಪಕ್ಷಕ್ಕೆ ದುಡಿದ ನಿಷ್ಠಾವಂತರನ್ನು ಕಡೆಗಣಿಸಿ ಅಕಾರದ ಆಸೆಗಾಗಿ ಪಕ್ಷಕ್ಕೆ ಬಂದವರಿಗೆ ಪ್ರಥಮ ಪ್ರಾಶಸ್ತ್ಯ ನೀಡುತ್ತಿರುವುದರಿಂದ ಸಿಎಂ ನಡವಳಿಕೆ ಕಮಲ ಪಾಳೆಯದಲ್ಲಿ ಬೇಸರ ಹುಟ್ಟಿಸಿದೆ.

ಹೀಗಾಗಿಯೇ ಬಿಟ್ ಕಾಯಿನ್ ಪ್ರಕರಣದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ದಿನ ಕಳೆದಂತೆ ಬಿಜೆಪಿ ಮೇಲೆ ಮುಗಿ ಬೀಳುತ್ತಿದ್ದರೂ ಸಿಎಂ ಅವರನ್ನು ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಮರ್ಥಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಕೆಲವರು ಮೌನಕ್ಕೆ ಶರಣಾಗಿದ್ದರೆ, ಇನ್ನು ಕೆಲವರು ಗೊತ್ತಿದ್ದರೂ ಗೊತ್ತಿಲ್ಲದಂತೆ ತೆರೆಮರೆಯಲ್ಲಿ ಆಟ ನೋಡುತ್ತಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅನಿರೀಕ್ಷಿತವಾಗಿ ಸಿಎಂ ಸ್ಥಾನ ಅಲಂಕರಿಸಿದ ಬೊಮ್ಮಾಯಿ ಅವರ ಮೇಲೆ ಬಿಜೆಪಿ ಅಪಾರವಾದ ನಿರೀಕ್ಷೆಯನ್ನು ಇಟ್ಟುಕೊಂಡಿತ್ತು.

ಸಜ್ಜನಿಕೆ, ಕಳಂಕ ರಹಿತ ಆಡಳಿತ, ಬುದ್ದಿವಂತಿಕೆ, ಪರಿಸ್ಥಿತಿಯನ್ನು ಎದುರಿಸುವ ಚಾಕಚಕ್ಯತೆ, ಇಲಾಖೆಗಳ ಬಗ್ಗೆ ತಿಳಿದುಕೊಂಡಿರುವ ಜ್ಞಾನ ಸೇರಿದಂತೆ ಹಲವು ಕಾರಣಗಳಿಂದ ಬಿಜೆಪಿ ಮತ್ತು ಸರ್ಕಾರಕ್ಕೆ ವರ್ಚಸ್ಸು ತರುವ ಕೆಲಸ ಮಾಡುತ್ತಿದ್ದಾರೆ ಎಂಬ ನಿರೀಕ್ಷೆ ಪಕ್ಷದ ವಲಯದಲ್ಲಿತ್ತು.
ಆದರೆ 100 ದಿನ ಸರ್ಕಾರ ಪೂರೈಸುವುದರೊಳಗೆ ಬೊಮ್ಮಾಯಿ ಅವರ ಮೇಲೆ ಇಟ್ಟುಕೊಂಡಿದ್ದ ನಿರೀಕ್ಷೆಗಳೆಲ್ಲವೂ ತಲೆಕೆಳಗಾಗಿ ಉಗಳಲು ಆಗದ, ನುಂಗಲೂ ಆಗದ ಪರಿಸ್ಥಿತಿ ನಮ್ಮದಾಗಿದೆ ಎಂದು ಬಿಜೆಪಿ ನಾಯಕರೇ ಮಾತನಾಡಿಕೊಳ್ಳುತ್ತಿದ್ದಾರೆ.

ವಲಸಿಗರಿಗೆ ಮನ್ನಣೆ:
ಯಡಿಯೂರಪ್ಪನವರ ಮೇಲೆ ಎಷ್ಟೇ ಆರೋಪ -ಪ್ರತ್ಯಾರೋಪಗಳಿದ್ದರೂ ಶಾಸಕರನ್ನು ಎಂದೂ ಕೂಡ ಕಡೆಗಣಿಸುತ್ತಿರಲಿಲ್ಲ. ಮೂಲ ಮತ್ತು ವಲಸಿಗರು ಎನ್ನದೆ ಕ್ಷೇತ್ರಗಳಿಗೆ ಬೇಕಾದ ಅನುದಾನ, ಅಧಿಕಾರಿಗಳ ವರ್ಗಾವಣೆ, ಯಾವುದೇ ವಿಷಯದಲ್ಲೂ ಜಿಗುಟತನ ತೋರಿಸುತ್ತಿರಲಿಲ್ಲ.
ಆದರೆ ಬೊಮ್ಮಾಯಿ ಅವರು ಪಕ್ಷದ ಮೂಲ ನಿವಾಸಿಗಳನ್ನು ಕಡೆಗಣಿಸಿ ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಬಂದವರಿಗೆ ವಿಶೇಷವಾಗಿ ಮನ್ನಣೆ ನೀಡುತ್ತಿರುವುದು ಬಿಜೆಪಿಗರ ಕಣ್ಣು ಕೆಂಪಾಗುವಂತೆ ಮಾಡಿದೆ.

ಅದರಲ್ಲೂ ಇತ್ತೀಚೆಗೆ ಸಂಪುಟಕ್ಕೆ ಸೇರ್ಪಡೆಯಾದ ಬೆಂಗಳೂರನ್ನು ಪ್ರತಿನಿಸುವ ಹಾಗೂ ಬೆಂಗಳೂರಿಗೆ ಹೊಂದಿಕೊಂಡಿರುವ ಜಿಲ್ಲೆಯೊಂದರ ಇಬ್ಬರು ಸಚಿವರನ್ನು ಪ್ರತಿಯೊಂದಕ್ಕೂ ಸಿಎಂ ಅವಲಂಬಿಸುತ್ತಿರುವುದು ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರತಿಯೊಂದಕ್ಕೂ ಈ ಇಬ್ಬರು ಸಚಿವರನ್ನೇ ಸಿಎಂ ಅವಲಂಬಿಸುತ್ತಿದ್ದಾರೆ. ಶಾಸಕರ ಕ್ಷೇತ್ರಗಳಿಗೆ ಬೇಕಾದ ಅನುದಾನ, ಕಡತಗಳ ವಿಲೇವಾರಿ ಸೇರಿದಂತೆ ಪ್ರತಿಯೊಂದರಲ್ಲೂ ವಿಳಂಬ ಮಾಡುತ್ತಿದ್ದಾರೆ. ತಮ್ಮ ಜೊತೆ ಹಿಂದೆ ತಿರುಗುವ, ಬೇಕಾದವರ ಕಡತಗಳು ವಿಲೇವಾರಿಗಳು ಶೀಘ್ರವಾಗಿ ಇತ್ಯರ್ಥವಾಗುತ್ತವೆ ಎಂದು ಬಹುತೇಕ ಶಾಸಕರ ಅಸಮಾಧಾನವಾಗಿದೆ.

ಹೈಕಮಾಂಡ್‍ಗೆ ದೂರು:
ಬೆಂಗಳೂರು ಪ್ರತಿನಿಸುವ ಪ್ರಭಾವಿ ಸಚಿವರೊಬ್ಬರು ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ದೆಹಲಿಗೆ ತೆರಳಿ ಸಿಎ ಕಾರ್ಯ ವೈಖರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಗೃಹ ಸಚಿವ ಅಮಿತ್ ಷಾ ಅವರಿಗೆ ದಾಖಲೆಗಳ ಸಮೇತ ದೂರು ನೀಡಿದ್ದರು ಎನ್ನಲಾಗಿದೆ.

ಎರಡು ತಿಂಗಳಾದರೂ ಇಲಾಖೆಗಳ ಕಡತಗಳಿಗೆ ಸಹಿ ಹಾಕದೆ ಬಾಕಿ ಉಳಿಸಿಕೊಂಡಿದ್ದಾರೆ. ಅದರಲ್ಲೂ ಬೆಂಗಳೂರಿಗೆ ಕೆಟ್ಟ ಹೆಸರು ಬಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ. ಯಾವ ಕಾರಣಕ್ಕಾಗಿ ಕಡತಗಳಿಗೆ ಸಹಿ ಹಾಕುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಈ ಬಗ್ಗೆ ಗಮನಿಸಿ ಎಂದು ಸಚಿವರು ವರಿಷ್ಠರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ.

ಇದೇ ರೀತಿ ಬೆಂಗಳೂರಿನ ಖಾಸಗಿ ಅಪಾರ್ಟ್‍ಮೆಂಟ್‍ಗಳಿಗೆ ಎನ್‍ಒಸಿ ಕೊಡುವ ವಿಷಯದಲ್ಲೂ ಆ ಖಾತೆಯನ್ನು ನಿರ್ವಹಿಸುವ ಸಚಿವರ ಗಮನಕ್ಕೆ ತಾರದೆ ಕಡತವನ್ನು ವಿಲೇವಾರಿ ಮಾಡಿದ್ದಾರೆ ಎಂಬ ಆರೋಪವೂ ಇತ್ತು. ಕಡೆಪಕ್ಷ ಇಲಾಖೆಯ ಸಚಿವನಾಗಿ ನನ್ನ ಗಮನಕ್ಕೆ ತಾರದೆ ಎನ್‍ಒಸಿಯನ್ನು ನೀಡಲಾಗಿದೆ. ನನ್ನ ಇಲಾಖೆಯನ್ನು ಅವರೇ ನಿರ್ವಹಿಸುವದಾದರೆ ಸಚಿವನಾಗಿ ನನ್ನ ಕೆಲಸ ಏನು ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು.

ಇದೇ ರೀತಿ ಬಹುತೇಕ ಸಚಿವರ ಕಡತಗಳು ಕೂಡ ಬಾಕಿ ಉಳಿದಿದ್ದು, ಅನೇಕ ಶಾಸಕರು ನಮ್ಮ ಕ್ಷೇತ್ರಗಳಿಗೂ ಅನುದಾನ ಬಿಡುಗಡೆಯಾಗುತ್ತಿಲ್ಲ. ಕೇಳಿದ ಅಕಾರಿಗಳನ್ನು ಹಾಕಿಕೊಡುತ್ತಿಲ್ಲ ಎಂದು ಕೆಂಡ ಕಾರುತ್ತಿದ್ದಾರೆ.

ಇಬ್ಬರ ಮೇಲೆ ಅನುಮಾನ:
ಇನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರತಿಯೊಂದಕ್ಕೂ ಇಬ್ಬರು ಸಚಿವರನ್ನು ಅವಲಂಬಿಸಿದ್ದಾರೆ. ಸಂಬಂಧವಿಲ್ಲದ ಹಾನಗಲ್‍ನಲ್ಲಿ ಎಲ್ಲವನ್ನು ಈ ಇಬ್ಬರಿಗೆ ಕೊಟ್ಟಿದ್ದರಿಂದಲೇ ಮೂಲ ನಿವಾಸಿಗಳು ಅಸಮಾಧಾನಗೊಂಡರು.

ವೈಯಕ್ತಿಕವಾಗಿ ಹೇಳಬೇಕಾದರೆ ಈ ಇಬ್ಬರ ಬಗ್ಗೆ ಅಂತಹ ಒಳ್ಳೆಯ ಅಭಿಪ್ರಾಯವೂ ಇಲ್ಲ. ವರಿಷ್ಠರು ಇದೆಲ್ಲವನ್ನೂ ಗಮನಿಸಿ ಪಕ್ಷ ಮತ್ತು ಸರ್ಕಾರದ ನಡುವೆ ಗೊಂದಲ ಇಲ್ಲದಂತೆ ಸಮನ್ವಯತೆ ಸಾಸಿಕೊಂಡು ಸರ್ಕಾರ ಮುನ್ನಡೆಸಲು ಸೂಚನೆ ನೀಡಬೇಕೆಂದು ಅನೇಕರು ಪಕ್ಷದ ಪ್ರಮುಖರಿಗೆ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ