Breaking News
Home / ರಾಜಕೀಯ / ಹಾವೇರಿ: ಬದಲಾಯ್ತು ಅವೈಜ್ಞಾನಿಕ ಆಮ್ಲಜನಕ ಪೈಪ್‌ಲೈನ್‌!

ಹಾವೇರಿ: ಬದಲಾಯ್ತು ಅವೈಜ್ಞಾನಿಕ ಆಮ್ಲಜನಕ ಪೈಪ್‌ಲೈನ್‌!

Spread the love

ಹಾವೇರಿ: ಕೋವಿಡ್‌ 2ನೇ ಅಲೆಯ ಮರಣ ಪ್ರಮಾಣದಲ್ಲಿ ರಾಜ್ಯದಲ್ಲೇ ಹಾವೇರಿ ಜಿಲ್ಲೆ (ಶೇ 2.92) ಮುಂಚೂಣಿಯಲ್ಲಿದೆ. ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾದ ‘ಅವೈಜ್ಞಾನಿಕ ಆಮ್ಲಜನಕ ಪೈಪ್‌ಲೈನ್‌’ ಅನ್ನು ಪರಿಣತ ತಜ್ಞವೈದ್ಯರ ತಂಡದ ಸಲಹೆಯಂತೆ ಜಿಲ್ಲಾಸ್ಪತ್ರೆಯಲ್ಲಿ ಬದಲಾವಣೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಕೋವಿಡ್‌ ಒಂದು ಮತ್ತು ಎರಡನೇ ಅಲೆಯಿಂದ ಒಟ್ಟು 646 ಮಂದಿ ಮೃತಪಟ್ಟಿದ್ದಾರೆ. ಈ ಸಾವುಗಳ ಸಂಖ್ಯೆ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಡಿಮೆ ಇದ್ದರೂ, ಶೇಕಡಾವಾರು ಮರಣ ಪ್ರಮಾಣದಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಹಾವೇರಿ ಜಿಲ್ಲೆ ಮೊದಲ ಸ್ಥಾನದಲ್ಲೇ ಇದೆ.

ತನಿಖೆಗೆ ಸೂಚನೆ: ಎರಡನೇ ಅಲೆಯಲ್ಲಿ ಸಾವುಗಳ ಸಂಖ್ಯೆ ಏರಿಕೆಗೆ ಕಾರಣವೇನು? ಎಂಬ ಬಗ್ಗೆ ತನಿಖೆಗೆ ಬಸವರಾಜ ಬೊಮ್ಮಾಯಿ ಅವರು ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಸೂಚನೆ ನೀಡಿದ್ದರು. ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯ ಪರಿಣತ ತಜ್ಞವೈದ್ಯರ ತಂಡ ಜೂನ್‌ ತಿಂಗಳಲ್ಲಿ ಜಿಲ್ಲಾಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ, ಮರಣ ಪ್ರಮಾಣ ಏರಿಕೆಗೆ ಕಾರಣಗಳನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಪೈಪ್‌ಲೈನ್‌ನಲ್ಲಿ ದೋಷ: ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳಿಗೆ ಸಂಪರ್ಕ ಕಲ್ಪಿಸಿದ್ದ ಪೈಪ್‌ಲೈನ್‌ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗದಿರುವುದರಿಂದ, ಕೋವಿಡ್‌ ರೋಗಿಗಳ ಮರಣ ಪ್ರಮಾಣ ಹೆಚ್ಚಲು ಕಾರಣವಾಗಿದೆ ಎಂದು ತಜ್ಞರ ತಂಡ ತಮ್ಮ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿತ್ತು. ಇದರಿಂದ ಎಚ್ಚೆತ್ತುಗೊಂಡ ಜಿಲ್ಲಾಡಳಿತ, ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ 12 ಎಂ.ಎಂ. ಇದ್ದ ಆಕ್ಸಿಜನ್‌ ಪೈಪ್‌ಲೈನ್‌ ಗಾತ್ರವನ್ನು 22 ಎಂ.ಎಂ.ಗೆ ಬದಲಾವಣೆ ಮಾಡಿದೆ.

‘ಕೋವಿಡ್‌ ಮೊದಲನೇ ಅಲೆಯ ಸಂದರ್ಭ ಜಿಲ್ಲಾ ನಿರ್ಮಿತಿ ಕೇಂದ್ರ ಹಾಗೂ ಹೆಲ್ತ್‌ ಎಂಜಿನಿಯರುಗಳ ಸಹಯೋಗದಲ್ಲಿ ₹14 ಲಕ್ಷ ವೆಚ್ಚದಲ್ಲಿ ಆಮ್ಲಜನಕ ಪೈಪ್‌ಲೈನ್‌ ಅಳವಡಿಸಲಾಗಿತ್ತು. ಈಗ ₹37 ಲಕ್ಷ ವೆಚ್ಚದಲ್ಲಿ ಪೈಪ್‌ಲೈನ್‌ ಅನ್ನು ಮಾರ್ಪಾಡು ಮಾಡಲಾಗಿದೆ’ ಎಂದು ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ತಿಮ್ಮೇಶ್‌ಕುಮಾರ್ ತಿಳಿಸಿದರು.

ಆಮ್ಲಜನಕದ ಕೊರತೆ: ಆಮ್ಲಜನಕ ಲೆಕ್ಕಪರಿಶೋಧನೆಯನ್ನು ಮಾಡದೇ ಇರುವುದು, ತಾಲ್ಲೂಕು ಆಸ್ಪತ್ರೆಗಳಲ್ಲಿ ದ್ರವರೂಪದ ಆಮ್ಲಜನಕ ಸಿಲಿಂಡರ್‌ಗಳ ಕೊರತೆ, ಆಮ್ಲಜನಕ ಪೂರೈಕೆ ಮಾಡುವಲ್ಲಿ ಆಡಳಿತ ವ್ಯವಸ್ಥೆಯ ವೈಫಲ್ಯ ಸೇರಿದಂತೆ ಹಲವಾರು ಲೋಪಗಳ ಬಗ್ಗೆ ಪರಿಣತ ತಜ್ಞ ವೈದ್ಯರ ತಂಡ 3 ತಿಂಗಳ ಹಿಂದೆಯೇ ವರದಿ ನೀಡಿದೆ. ಅಂದು ತನಿಖೆಗೆ ಆದೇಶಿಸಿದ್ದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದು, ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಆಮ್ಲಜನಕ ಘಟಕಗಳ ಸ್ಥಾಪನೆ

‘ಜಿಲ್ಲಾಸ್ಪತ್ರೆಯಲ್ಲಿ ಪಿಎಸ್‌ಎ (ಪ್ರೆಷರ್‌ ಸ್ವಿಂಗ್‌ ಅಬ್ಸಾರ್ಪಷನ್‌) ತಂತ್ರಜ್ಞಾನದ 1,000 ಎಲ್‌ಪಿಎಂ (ಲೀಟರ್‌ ಪರ್‌ ಮಿನಟ್‌) ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕವನ್ನು ನಿರ್ಮಿಸಲಾಗಿದೆ. ಶಿಗ್ಗಾವಿಯಲ್ಲಿ 600 ಎಲ್‌ಪಿಎಂ, ಸವಣೂರಿನಲ್ಲಿ 500 ಎಲ್‌ಪಿಎಂ, ಹಾನಗಲ್‌ನಲ್ಲಿ 390 ಎಲ್‌ಪಿಎಂ ಘಟಕಗಳು ಸಿದ್ಧಗೊಂಡಿವೆ. ಉಳಿದ ತಾಲ್ಲೂಕಗಳಲ್ಲೂ ಸರ್ಕಾರ ಮತ್ತು ಖಾಸಗಿ ಕಂಪನಿಗಳ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ ನಿಧಿಯ ಸಹಯೋಗದಲ್ಲಿ ಶೀಘ್ರ ಘಟಕಗಳು ನಿರ್ಮಾಣವಾಗಲಿವೆ’ ಎಂದು ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ ಎಚ್‌.ಎಸ್‌.  ಮಾಹಿತಿ ನೀಡಿದರು.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ