Breaking News
Home / ರಾಜಕೀಯ / Hubballi Dharwad NH 4: ಧಾರವಾಡದ ಸಾವಿನ ರಸ್ತೆ ಅಗಲೀಕರಣಕ್ಕೆ ಸಿಕ್ತು ಗ್ರೀನ್ ಸಿಗ್ನಲ್! ವರ್ಷಗಳ ಕನಸು ನನಸು?

Hubballi Dharwad NH 4: ಧಾರವಾಡದ ಸಾವಿನ ರಸ್ತೆ ಅಗಲೀಕರಣಕ್ಕೆ ಸಿಕ್ತು ಗ್ರೀನ್ ಸಿಗ್ನಲ್! ವರ್ಷಗಳ ಕನಸು ನನಸು?

Spread the love

ಹುಬ್ಬಳ್ಳಿ-ಧಾರವಾಡ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿನ ಬೈಪಾಸ್ ರಸ್ತೆಗೆ ಕೊನೆಗೂ ಅಗಲೀಕರಣ ಭಾಗ್ಯ ಸಿಗುವಂತಾಗಿದೆ. ಈ ಬೈಪಾಸ್ ರಸ್ತೆ ಷಟ್ಪಥವಾಗುವ ಕಾಲ ಸನ್ನಿಹಿತವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ರಸ್ತೆಯಲ್ಲಿ ಸಂಭವಿಸುತ್ತಿದ್ದ ಅಪಘಾತಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದು, ದಶಕಗಳ ಬೇಡಿಕೆ ಈಡೇರುವ ನಿರೀಕ್ಷೆ ಮೂಡಿಸಿದೆ. ಇದೀಗ ಭೂಸ್ವಾಧೀನ ಪ್ರಕ್ರಿಯೆ ಆರಂಭದ ಜೊತೆಗೆ ರಸ್ತೆ ನಿರ್ಮಾಣದ ಟೆಂಡರ್ ಕರೆಯುವ ಪ್ರಕ್ರಿಯೆ ಕೂಡ ಆರಂಭವಾಗಿದೆ. ಆ ಮೂಲಕ ಹಲವಾರು ವರ್ಷಗಳ ಕನಸು ನನಸಾಗುವ ಸಾಧ್ಯತೆಗಳು ಕಾಣಿಸಿಕೊಂಡಿವೆ.

31 ಕಿಲೋ ಮೀಟರ್ ಉದ್ದ ಷಟ್ಪಥ ರಸ್ತೆ

ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಹುಬ್ಬಳ್ಳಿಯ ಗಬ್ಬೂರಿನಿಂದ ಧಾರವಾಡದ ನರೇಂದ್ರ ಟೋಲ್‌ಗೇಟ್‌ವರೆಗೆ ಸುಮಾರು 31 ಕಿ.ಮೀ. ಬೈಪಾಸ್ ಹೊಂದಿದೆ. ಬೆಂಗಳೂರಿನಿಂದ ಪುಣೆಯವರೆಗಿನ ಹೆದ್ದಾರಿ- 4 ರಲ್ಲಿ ಬಹುತೇಕ ಚತುಷ್ಪಥ ಹಾಗೂ ಕೆಲವೆಡೆ ಷಟ್ಪಥವಿದೆ. ಆದರೆ, ಹುಬ್ಬಳ್ಳಿ- ಧಾರವಾಡ ನಡುವೆ ಮಾತ್ರ ದ್ವಿಪಥವಾಗಿದೆ. ಗಬ್ಬೂರು ಕ್ರಾಸ್‌ನಿಂದ ನರೇಂದ್ರ ಟೋಲ್‌ಗೇಟ್‌ವರೆಗೆ ಕಿರಿದಾದ ರಸ್ತೆ ಹೊಂದಿದ್ದು, `ಬಾಟಲ್ ನೆಕ್’ ರೀತಿ ಇದೆ. ಹೀಗಾಗಿ ಪ್ರತಿವರ್ಷ ಅಪಘಾತಗಳು, ಸಂಭವಿಸಿ, ಸಾವು-ನೋವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ದ್ವಿಪಥವನ್ನು ಷಟ್ಪಥ ಮಾಡಬೇಕು ಎಂಬುದು ದಶಕಗಳ ಬೇಡಿಕೆ ಇದೆ. ಆ ಬೇಡಿಕೆ ಇದೀಗ ಈಡೇರುವ ಕಾಲ ಸನ್ನಿಹಿತವಾಗಿದೆ. ಒಂದು ಕಡೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದರೆ, ಮತ್ತೊಂದು ಕಡೆ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಕೂಡ ಮುಂದಿನ ವಾರದಲ್ಲಿ ಆರಂಭಿಸಲಾಗುತ್ತಿದೆ.

ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿದ್ದ ಜನವರಿಯಲ್ಲಿ ನಡೆದಿದ್ದ ಅಪಘಾತ

ಭೀಕರ ಅಪಘಾತಗಳು ಸಂಭವಿಸಿದಾಗೊಮ್ಮೆ ಸಾರ್ವಜನಿಕರಿಂದ ಬೈಪಾಸ್ ಅಗಲೀಕರಣದ ಕೂಗು ಕೇಳಿ ಬರುತ್ತಿತ್ತು. ಈ ರಸ್ತೆಯನ್ನು 1999 ರಿಂದ 2024 ರವರೆಗೆ ಅಶೋಕ ಖೇಣಿ ಒಡೆತನದ ನಂದಿ ಹೈವೇ ಡೆವೆಲಪರ್ಸ್ ಲಿಮಿಟೆಡ್ ನಿರ್ವಹಿಸುತ್ತಿದ್ದು, ಒಪ್ಪಂದ 2024 ರ ಮೇ 25 ಕ್ಕೆ ಮುಕ್ತಾಯವಾಗಲಿದೆ. ಬೈಪಾಸ್‌ನಲ್ಲಿ 2021 ರ ಜ. 15 ರಂದು ದಾವಣಗೆರೆಯ ಟೆಂಪೋ ಟ್ರಾವೆಲರ್-ಮರಳು ತುಂಬಿದ್ದ ಟಿಪ್ಪರ್ ಮಧ್ಯೆ ಭೀಕರ ಅಪಘಾತ ಸಂಭವಿಸಿತ್ತು. ದುರಂತದಲ್ಲಿ 10 ಮಹಿಳೆಯರು ಸೇರಿ 12 ಜನ ಮೃತಪಟ್ಟಿದ್ದರು.

ಇದಕ್ಕೂ ಮೊದಲು ಕುಂದಗೋಳದ ಶಿವಾನಂದ ಮಠದ ಶ್ರೀ ಬಸವೇಶ್ವರ ಸ್ವಾಮೀಜಿ ಅಪಘಾತದಲ್ಲಿ ಮೃತಪಟ್ಟಿದ್ದರು. ಇಂಥ ಅನೇಕ ಘಟನೆಗಳು ನಡೆದ ಬಳಿಕ ಜನರ ಆಕ್ರೋಶದಿಂದಾಗಿ ಕೊನೆಗೆ ನಂದಿ ಕಂಪನಿ ಹಾಗೂ ಸರ್ಕಾರ-ಜನಪ್ರತಿನಿಧಿಗಳ ಮಧ್ಯೆ ಹಲವು ಬಾರಿ ಸಭೆಗಳು ನಡೆದವು. ಆದರೆ ಷರತ್ತುಗಳ ಅನ್ವಯದಿಂದ ಹೆದ್ದಾರಿ ಅಗಲೀಕರಣದ ಕೂಗು ಅರಣ್ಯರೋದನ ಎಂಬಂತಾಗಿತ್ತು.

ಇದೀಗ ರಸ್ತೆಯನ್ನು ಸರ್ಕಾರವೇ ಅಭಿವೃದ್ಧಿಪಡಿಸಿ ಅಪಘಾತಗಳಿಗೆ ಕಡಿವಾಣ ಹಾಕುವ ದಿಟ್ಟ ಕ್ರಮ ಕೈಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶನದಂತೆ 31 ಕಿ.ಮೀ. ಬೈಪಾಸ್ ಉದ್ದಕ್ಕೂ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ಸುಪ್ರಿಂ ಕೋರ್ಟ್, ಪ್ರಧಾನಿ ಮೋದಿ ಗಮನ ಸೆಳೆದಿದ್ದ ಅಪಘಾತ

ಜನವರಿ 15 ರಂದು ನಡೆದಿದ್ದ ಅಪಘಾತ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಘಟನೆ ಬಗ್ಗೆ ಪ್ರಧಾನಿ ಟ್ವೀಟ್ ಮಾಡಿ, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಲ್ಲದೇ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಇನ್ನು ಸುಪ್ರಿಂ ಕೋರ್ಟ್ ಕೂಡ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಅಪಘಾತಕ್ಕೆ ಕಾರಣವೇನು ಅನ್ನುವುದರ ವರದಿ ನೀಡುವಂತೆ ಸೂಚನೆ ನೀಡಿತ್ತು.

ಈ ಎಲ್ಲ ಘಟನೆಯಿಂದಾಗಿ ಅಧಿಕಾರಿಗಳಿಗೆ ಈ ರಸ್ತೆಯ ಅಗಲೀಕರಣದ ಬಗ್ಗೆ ಸಾಕಷ್ಟು ಒತ್ತಡ ಎದುರಾಗಿತ್ತು. ಒಂದು ಕಡೆ ಸಾರ್ವಜನಿಕರ ಆಕ್ರೋಶ ಮತ್ತೊಂದು ಕಡೆ ಪ್ರಧಾನಿ ಗಮನ ಸೆಳೆದ ಘಟನೆಯಿಂದಾಗಿ ಇದೀಗ ಕೊನೆಗೂ ಈ ಹೆದ್ದಾರಿಯ ಅಗಲೀಕರಣಕ್ಕೆ ಗ್ರೀನ್ ಸಿಗ್ನಲ್ ಸಿಗುವಂತಾಗಿದೆ.

ನೂರಾರು ಜನರನ್ನು ಬಲಿ ತೆಗೆದುಕೊಂಡಿರುವ ಬೈಪಾಸ್ ಹೆದ್ದಾರಿ

ಹತ್ತು ವರ್ಷಗಳ ಅವಧಿಯಲ್ಲಿ ಈ ಬೈಪಾಸ್ ನಲ್ಲಿ ನೂರಾರು ಅಪಘಾತಗಳು ನಡೆದಿದ್ದು, 180 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಸಾವಿನ ಸರಣಿ ಒಂದು ಕಡೆಯಾದರೂ ಈ ಬೈಪಾಸ್‌ನಲ್ಲಿ ಟ್ರಾಕ್ಟರ್, ಚಕ್ಕಡಿ ಹಾಗೂ ಬೈಕ್‌ಗಳ ಸಂಚಾರಕ್ಕೆ ಅವಕಾಶವಿಲ್ಲ. ಆದರೆ ಬೇರೆ ವ್ಯವಸ್ಥೆ ಇಲ್ಲದಿರೋದ್ರಿಂದ ಅನಿವಾರ್ಯವಾಗಿ ಆ ವಾಹನಗಳು ಕೂಡ ಇಲ್ಲಿಯೇ ಸಂಚರಿಸುತ್ತಿವೆ.

ಇದೀಗ ಷಟ್ಪಥದ ಜೊತೆಗೆ ಸರ್ವಿಸ್ ರಸ್ತೆ ಮಾಡುವ ಯೋಜನೆ ಕೂಡ ಇದರಲ್ಲಿದೆ. ಹೀಗಾಗಿ ಆದಷ್ಟು ಬೇಗನೇ ಬೈಪಾಸ್ ಅಗಲೀಕರಣವಾದರೆ ಆಹುತಿಯ ದಾಹ ನಿಲ್ಲಲಿದೆ ಅನ್ನುವುದು ಜನರ ನಿರೀಕ್ಷೆ. ಆದಷ್ಟು ಬೇಗನೇ ಈ ರಸ್ತೆ ಅಗಲೀಕರಣವಾಗಿ, ಜನರು ನೆಮ್ಮದಿಯಾಗಿ ಪ್ರಯಾಣ ಮಾಡುವಂತಾದರೆ ಸಾಕು.

ಇಷ್ಟರಲ್ಲಿಯೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ – ಶಂಕರ ಪಾಟೀಲ್ ಮುನೇನಕೊಪ್ಪ

ಈ ಬಗ್ಗೆ ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯವಾಗಿದೆ. ಇನ್ನು ರಸ್ತೆ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ಎಲ್ಲ ಕೆಲಸದ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ಪ್ರಯತ್ನವಿದೆ. ಆದಷ್ಟು ಬೇಗನೇ ಕೆಲಸ ಆರಂಭವಾಗಿ, ರಸ್ತೆ ನಿರ್ಮಾಣವಾಗಿ, ಜನರು ನೆಮ್ಮದಿಯಿಂದ ಓಡಾಡಲು ಬೇಕಾದ ವ್ಯವಸ್ಥೆ ಮಾಡಬೇಕಿದೆ. ಎಲ್ಲವೂ ಶೀಘ್ರದಲ್ಲಿಯೇ ಮುಕ್ತಾಯವಾಗಲಿದೆ ಅನ್ನುತ್ತಾರೆ.

ಆದಷ್ಟು ಬೇಗನೇ ಆಹುತಿಗಳಿಗೆ ಮುಕ್ತಿ ಸಿಗಲಿ – ಕೆ. ಎಚ್. ಪಾಟೀಲ್, ಸ್ಥಳೀಯ

ಇನ್ನು ರಸ್ತೆ ಅಗಲೀಕರಣದ ಬಗ್ಗೆ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುವ ನ್ಯಾಯವಾದಿ ಕೆ.ಎಚ್. ಪಾಟೀಲ್, ಎಲ್ಲದಕ್ಕಿಂತ ಮುಖ್ಯವಾಗಿದ್ದು ಜನರ ಪ್ರಾಣ. ಸರಕಾರ ಜನರ ಪ್ರಾಣವನ್ನು ಉಳಿಸುವ ಕೆಲಸವನ್ನು ಮಾಡಬೇಕು. ಈಗಾಗಲೇ ರಸ್ತೆ ಅಗಲೀಕರಣದ ಪ್ರಕ್ರಿಯೆ ಸಾಕಷ್ಟು ವಿಳಂಬವಾಗಿದೆ. ಇದೀಗ ಸರಕಾರ ಎಚ್ಚೆತ್ತುಕೊಂಡಂತೆ ಕಾಣುತ್ತದೆ.

ಯಾವುದೇ ಕಾರಣಕ್ಕೂ ಇದೀಗ ತಡ ಮಾಡಬಾರದು. ಕೂಡಲೇ ಸರಕಾರ ಈ ಯೋಜನೆಯನ್ನು ಆರಂಭಿಸಬೇಕು. ಈ ರಸ್ತೆಯಲ್ಲಿ ಕೇವಲ ಜನರಷ್ಟೇ ಅಲ್ಲ, ಸಾವಿರಾರು ಜಾನುವಾರುಗಳು ಕೂಡ ಅಪಘಾತದಿಂದಾಗಿ ಮೃತಪಟ್ಟಿವೆ. ಹೀಗಾಗಿ ಎಲ್ಲರ ಪ್ರಾಣವನ್ನು ರಕ್ಷಿಸೋ ಕೆಲಸವನ್ನು ಸರಕಾರ ಶೀಘ್ರದಲ್ಲಿ ಮಾಡಬೇಕು ಅನ್ನುತ್ತಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ