Breaking News
Home / ರಾಜಕೀಯ / ಮುಂದುವರಿದ ಕಾಬುಲ್ ಕಾರ್ಮೋಡ: ಏರ್​ಪೋರ್ಟ್​ನಲ್ಲಿ ಸಾವಿರಾರು ಜನರು ಅತಂತ್ರ; ಹಿಂಸೆ ನಡುವೆಯೂ ದೇಶ ತೊರೆಯಲು ಯತ್ನ

ಮುಂದುವರಿದ ಕಾಬುಲ್ ಕಾರ್ಮೋಡ: ಏರ್​ಪೋರ್ಟ್​ನಲ್ಲಿ ಸಾವಿರಾರು ಜನರು ಅತಂತ್ರ; ಹಿಂಸೆ ನಡುವೆಯೂ ದೇಶ ತೊರೆಯಲು ಯತ್ನ

Spread the love

ಐಸಿಸ್ ದಾಳಿ ಆತಂಕ

ತಾಲಿಬಾನಿಗಳ ಪೈಶಾಚಿಕ ಆಳ್ವಿಕೆಗೆ ಹೆದರಿ ಕಾಬುಲ್ ವಿಮಾನ ನಿಲ್ದಾಣಕ್ಕೆ ಜನಪ್ರವಾಹವೇ ಹರಿದುಬರುತ್ತಿದೆ. ಬಹುತೇಕರು ಅನ್ನಾಹಾರವಿಲ್ಲದೆ ನಿತ್ರಾಣರಾಗಿದ್ದಾರೆ. ಈ ನಡುವೆ, ಐಸಿಸ್ ಉಗ್ರರು ಏರ್​ಪೋರ್ಟ್ ಮೇಲೆ ದಾಳಿ ನಡೆಸಬಹುದು ಎಂಬ ಸುಳಿವು ಸಿಕ್ಕ ಕಾರಣ, ಅವರ ದಾರಿ ತಪ್ಪಿಸುವುದಕ್ಕಾಗಿ ವಿಮಾನದಲ್ಲಿರುವ ಹೀಟ್-ಸೀಕಿಂಗ್ ಟೆಕ್ನಾಲಜಿಯನ್ನು ಬಳಸಿ ಜ್ವಾಲೆ ಉಗುಳುವಂತೆ ಮಾಡಲಾಗಿದೆ. ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಹಾರಾಟ ಸ್ಥಗಿತವಾಗಿದ್ದರೂ, ಸೇನಾ ವಿಮಾನಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ತೆರಳಲು ಧಾವಂತ ಎಲ್ಲರಲ್ಲೂ ಇದೆ. ಅನೇಕರು ನಿರ್ಜಲೀಕರಣದ ಸಮಸ್ಯೆ ಎದುರಿಸುತ್ತಿದ್ದು, ಇದುವರೆಗೆ ಇಬ್ಬರು ಬಾಲಕಿಯರು ಸೇರಿ ಕನಿಷ್ಠ 20 ಅಫ್ಘನ್ನರು ಮೃತಪಟ್ಟಿದ್ದಾರೆ. ಶನಿವಾರ ನಾಲ್ವರು ಮಹಿಳೆಯರು ಕಾಲ್ತುಳಿತಕ್ಕೆ ಸಿಲುಕಿ ಅಸುನೀಗಿದ್ದಾರೆ ಎಂದು ಅಮೆರಿಕ ಸೇನಾ ಮೂಲಗಳು ತಿಳಿಸಿವೆ. ಈ ನಡುವೆ, ಐಸಿಸ್ ದಾಳಿಯ ಆತಂಕದಿಂದಾಗಿ ಫ್ರಾನ್ಸ್​ನ ರಕ್ಷಣಾ ವಿಮಾನ ಜ್ವಾಲೆಗಳನ್ನು ಉಗುಳುತ್ತ ಏರ್​ಪೋರ್ಟ್​ನಿಂದ ಟೇಕಾಫ್ ಆದ ದೃಶ್ಯದ ವಿಡಿಯೋ ವೈರಲ್ ಆಗಿದೆ.

ಏರ್​ಪೋರ್ಟ್​ಗೆ ತಾಲಿಬಾನಿಗಳೇ ಕಾವಲು

ಕಾಬುಲ್ ವಿಮಾನ ನಿಲ್ದಾಣಕ್ಕೆ ತಾಲಿಬಾನಿಗಳೇ ಸ್ವತಃ ಕಾವಲು ಕಾಯುತ್ತಿದ್ದಾರೆ. ಒಮ್ಮೆ ಅಮೆರಿಕ ಸೇನೆ ಅಲ್ಲಿಂದ ತೆರಳಿದ ಬಳಿಕ, ಬ್ರಿಟನ್ ಸೇನೆ ಅಥವಾ ಇನ್ನಾವುದೇ ಸೇನೆ ಇದ್ದರೂ ತಾಲಿಬಾನಿಗಳು ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹೀಗಾಗಿ ಬ್ರಿಟನ್​ನ 900 ಯೋಧರ ಟ್ರೂಪ್​ಗೆ ಅಮೆರಿಕದ 6,000 ಯೋಧರ ಬೆಂಬಲವಿಲ್ಲದೆ ಏನೂ ಮಾಡಲಾಗದು. ಇದೇ ಕಾರಣಕ್ಕೆ ಅಫ್ಘನ್ ಜನರ ತೆರವು ಕಾರ್ಯಾಚರಣೆ ಗಡುವು ವಿಸ್ತರಣೆ ಮಾಡಬೇಕು ಎಂದು ಬ್ರಿಟನ್ ಆಗ್ರಹಿಸಿದೆ.

ಭಾರತ್ ಮಾತಾ ಕೀ ಜೈ !: ಕಾಬುಲ್​ನಿಂದ 90 ಜನರನ್ನು ಕರೆ ತಂದ ವಾಯುಪಡೆ ವಿಮಾನ ದೆಹಲಿಯಲ್ಲಿ ಇಳಿಯುತ್ತಿದ್ದಂತೆ ಸಂಭ್ರಮಪಟ್ಟ ಭಾರತೀಯರು ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿ ಭಾವುಕರಾದ ವಿಡಿಯೋ ವೈರಲ್ ಆಗಿದೆ. ಇವರ ಜತೆಗೆ ಇಬ್ಬರು ನೇಪಾಳಿಗರೂ ಇದ್ದರು.

ಕೆಲವೇ ದಿನಗಳಲ್ಲಿ ತಾಲಿಬಾನ್ ಸರ್ಕಾರ

ಅಫ್ಘನ್​ನ ಟೊಲೊ ನ್ಯೂಸ್ ವರದಿ ಪ್ರಕಾರ, 10 ದಿನಗಳ ಬಳಿಕ ತಾಲಿಬಾನ್ ಸರ್ಕಾರ ರಚನೆಯಾಗಲಿದೆ. ಇದಕ್ಕೆ ಸಂಬಂಧಿಸಿದ ಚೌಕಟ್ಟನ್ನು ಅದು ಶೀಘ್ರವೇ ಘೋಷಿಸಲಿದೆ. ತಾಲಿಬಾನ್ ಮತ್ತು ಇಸ್ಲಾಮಿಕ್ ಮಿಲಿಟಿಯಾದ ಉನ್ನತ ನಾಯಕರು ಸರ್ಕಾರ ರಚನೆಗೆ ಸಂಬಂಧಿಸಿದ ಚರ್ಚೆ ನಡೆಸುತ್ತಿದ್ದಾರೆ. ಕಾನೂನು, ಧಾರ್ವಿುಕ ಮತ್ತು ವಿದೇಶ ನೀತಿ ಪರಿಣತರು ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ತಾಲಿಬಾನ್ ಮತ್ತು ಮಿಲಿಟಿಯಾದ ಸೆಕೆಂಡ್ ಇನ್ ಕಮಾಂಡ್ ಮುಲ್ಲಾ ಅಬ್ದುಲ್ಲ ಘನಿ ಬರದಾರ್ ಕಾಬುಲ್​ನಲ್ಲಿದ್ದು ರಾಜಕೀಯ ನೇತಾರರ ಜತೆಗೆ ಮಾತುಕತೆ ನಡೆಸಿದ್ದಾರೆ. ಈ ನಡುವೆ ಪಾಕಿಸ್ಥಾನದ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಶಿ ಕಾಬುಲ್ ಭೇಟಿ ನಿಗದಿಯಾಗಿದ್ದು, ತಾಲಿಬಾನ್ ನಾಯಕರ ಜತೆಗೆ ಮಾತುಕತೆ ನಡೆಸಲಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.

ಭ್ರಷ್ಟಾಚಾರಕ್ಕೆ ಅಫ್ಘನ್ ಬಲಿ: ಸರಿಯಾದ ಆಡಳಿತ ನಡೆಸಿದ್ದರೆ ಅಫ್ಘನ್ ಉಳಿಯುತ್ತಿತ್ತು. ಆದರೆ ಅಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ವಿದೇಶಿ ನೆರವು ಸಂಪೂರ್ಣ ದುರ್ಬಳಕೆಯಾಗಿದೆ. ಸೋರಿಕೆಯಾಗಿರುವ ಅಮೆರಿಕದ ರಾಜತಾಂತ್ರಿಕ ಸಂದೇಶಗಳ ಪ್ರಕಾರ, ಅಫ್ಘನ್ ಉಪಾಧ್ಯಕ್ಷ ದುಬೈಗೆ ತೆರಳುವಾಗ 51 ದಶಲಕ್ಷ ಡಾಲರ್ ನಗದು ಹೊತ್ತೊಯ್ದಿದ್ದ. ಮಾದಕ ವಸ್ತು ಕಳ್ಳಸಾಗಣೆದಾರರು, ಭ್ರಷ್ಟ ಅಧಿಕಾರಿಗಳು 231 ದಶಲಕ್ಷ ಡಾಲರ್ ನಗದನ್ನು ಕಳೆದ ಒಂದು ವಾರದಲ್ಲಿ ಸಾಗಿಸಿದ್ದಾರೆ. ದೇಶದ ಒಂದು ವರ್ಷದ ಆದಾಯದ ಲೆಕ್ಕ ನೋಡಿದರೆ ಕೇವಲ 585 ಡಾಲರ್ ತೋರಿಸಲಾಗಿದೆ.

ಅಫ್ಘಾನಿಸ್ತಾನದ ಕಾಬುಲ್ ಬೀದಿಗಳಲ್ಲಿ ತಾಲಿಬಾನಿಗಳ ಕಾವಲು.

ಐಸಿಸ್ ಸಂಘರ್ಷ ಸಾಧ್ಯತೆ: ಸಿರಿಯಾ ಮತ್ತು ಇರಾಕ್​ನಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ದಾಳಿ ಕಾರಣ ಐಸಿಸ್ ಉಗ್ರರು ನೆಲೆ ಕಳೆದುಕೊಂಡಿದ್ದಾರೆ. ಅಫ್ಘನ್ ನೆಲದಲ್ಲಿ ಕಳೆದ ಆರು ವರ್ಷಗಳಿಂದ ಐಸಿಸ್ ಉಗ್ರರು ಮತ್ತು ತಾಲಿಬಾನಿಗಳ ನಡುವಿನ ಸಂಘರ್ಷವೂ ಜೋರಾಗಿದೆ. ಈಗ ಅಮೆರಿಕ ಸೇನೆ ಹಿಂಪಡೆತದ ನಂತರ ಇದು ಯಾವ ರೀತಿ ತಿರುವು ಪಡೆದುಕೊಳ್ಳಲಿದೆ ಎಂಬುದು ಸದ್ಯದ ಕುತೂಹಲ ಮತ್ತು ಆತಂಕದ ವಿಚಾರ.

ವಿಮಾನ ಹಾರಾಟ ತಡೆದ ಪಾಕ್

ಅಫ್ಘನ್​ನಲ್ಲಿ ಪರಿಸ್ಥಿತಿ ಕೈಮೀರುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ್ ಇಂಟರ್​ನ್ಯಾಷನಲ್ ಏರ್​ಲೈನ್ಸ್ (ಪಿಐಎ) ತಾತ್ಕಾಲಿಕವಾಗಿ ಅಫ್ಘನ್​ಗೆ ವಿಮಾನ ಹಾರಾಟವನ್ನು ತಡೆ ಹಿಡಿದಿದೆ. ಕಳೆದ ಕೆಲವು ದಿನಗಳಿಂದ ಕಾಬುಲ್​ಗೆ ವಿಮಾನ ಸೇವೆ ಒದಗಿಸುತ್ತಿದ್ದ ಏಕೈಕ ವಾಣಿಜ್ಯ ಏರ್​ಲೈನ್ಸ್ ಇದಾಗಿತ್ತು. ಕಾಬುಲ್ ವಿಮಾನ ನಿಲ್ದಾಣದಲ್ಲಿ ಸೌಲಭ್ಯಗಳ ಕೊರತೆ ಮತ್ತು ತ್ಯಾಜ್ಯ ವಿಲೇವಾರಿ ಆಗದ ಕಾರಣ ಸಂಭಾವ್ಯ ಅಪಾಯವನ್ನು ಕಂಡು ವಿಮಾನ ಹಾರಾಟ ಸ್ಥಗಿತಗೊಳಿಸುತ್ತಿರುವುದಾಗಿ ಅದು ಘೋಷಿಸಿದೆ. ಇದುವರೆಗೆ ಪತ್ರಕರ್ತರು, ಪಾಕಿಸ್ತಾನಿಗಳು, ವಿಶ್ವಸಂಸ್ಥೆಯ ಅಧಿಕಾರಿಗಳು ಸೇರಿ 1,500 ಜನರನ್ನು ಐದು ವಿಮಾನಗಳ ಮೂಲಕ ಪಾಕಿಸ್ತಾನಕ್ಕೆ ಕರೆತಂದಿರುವುದಾಗಿ ಪಿಐಎ ತಿಳಿಸಿದೆ.

168 ಜನ ಭಾರತೀಯರು ವಾಪಸ್

ಕಾಬುಲ್​ನಿಂದ ಭಾರತಕ್ಕೆ ವಾಪಸು ಬರುತ್ತಿರುವ ಭಾರತೀಯರು.

ತಾಲಿಬಾನ್ ಹಿಡಿತದಲ್ಲಿರುವ ಅಫ್ಘಾನಿಸ್ತಾನದಿಂದ ಒಟ್ಟು 329 ಭಾರತೀಯರು ಸೇರಿ 400 ಜನರು ಭಾನುವಾರ ಮೂರು ಪ್ರತ್ಯೇಕ ವಾಯುಪಡೆ ವಿಮಾನಗಳಲ್ಲಿ ಸ್ಥಳಾಂತರಗೊಂಡಿದ್ದಾರೆ. ಭಾರತದ ವಾಯುಪಡೆ ವಿಮಾನದ ಮೂಲಕ ದೆಹಲಿಯ ಹಿಂಡನ್ ವಾಯುನೆಲೆಗೆ ಆಗಮಿಸಿದ 168 ಜನರ ಪೈಕಿ 107 ಭಾರತೀಯರಿದ್ದರು. ಇವರಲ್ಲದೆ, 24 ಅಫ್ಘನ್ ಸಿಖ್ಖರು, ಇಬ್ಬರು ಅಫ್ಘನ್ ಸೆನೆಟರ್​ಗಳಿದ್ದರು. ಇವರಲ್ಲಿ ಬಹಳಷ್ಟು ಜನ ಕಾಬುಲ್​ನ ಗುರುದ್ವಾರದಲ್ಲಿದ್ದರು. ಇವರನ್ನು ಬಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ಅವರಿಗೆ ಕೆಲವು ದಿನಗಳ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ತಜಕಿಸ್ತಾನಕ್ಕೆ ಸ್ಥಳಾಂತರಗೊಂಡ ಇನ್ನೊಂದು ಗುಂಪಿನಲ್ಲಿ 87 ಭಾರತೀಯರು, ಇಬ್ಬರು ನೇಪಾಳಿಗಳಿದ್ದರು. ದೋಹಾಕ್ಕೆ ಸ್ಥಳಾಂತರಗೊಂಡ ಮೂರನೇ ಗುಂಪಿನಲ್ಲಿ 135 ಭಾರತೀಯರು ಇದ್ದಾರೆ.

ಶೂನ್ಯ ಆವರಿಸಿದೆ ಎಂದು ಕಣ್ಣೀರಿಟ್ಟ ಸೆನೆಟರ್: ಅಫ್ಘನ್​ನಲ್ಲಿ ಕಳೆದ 20 ವರ್ಷಗಳಲ್ಲಿ ನಿರ್ಮಾಣ ವಾಗಿದ್ದೆಲ್ಲವೂ ಕೆಲವೇ ದಿನಗಳಲ್ಲಿ ಸಂಪೂರ್ಣ ನಾಶವಾಗಿದೆ. ಶೂನ್ಯ ಆವರಿಸಿದೆ. ಜೋರಾಗಿ ಅಳಬೇಕು ಎನಿಸುತ್ತಿದೆ ಎಂದು ಗದ್ಗದಿತರಾದ ಅಫ್ಘನ್ ಸೆನೆಟರ್ ನರೇಂದರ್ ಸಿಂಗ್ ಖಾಲ್ಸಾ ಭಾವುಕರಾಗಿ ನುಡಿದರು. ಅವರು ಭಾನುವಾರ ಹಿಂಡನ್ ವಾಯುನೆಲೆಗೆ ಭಾರತೀಯ ವಾಯುಪಡೆ ವಿಮಾನದ ಮೂಲಕ ಆಗಮಿಸಿದ್ದರು.

ಯುದ್ಧ ವಿಮಾನದಲ್ಲಿ ಪ್ರಸವ: ಅಮೆರಿಕದ ಯುದ್ಧ ವಿಮಾನ ಸಿ-17ನಲ್ಲಿ ಪ್ರಯಾಣಿಸಿದ್ದ ಅಫ್ಘನ್ ಮಹಿಳೆ ದಾರಿ ಮಧ್ಯೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಜರ್ಮನಿಯ ರಾಮ್್ಟೇನ್ ವಾಯುನೆಲೆಯಲ್ಲಿ ಅಮೆರಿಕದ ವೈದ್ಯಕೀಯ ತಂಡ ಸೂಕ್ತ ಚಿಕಿತ್ಸೆ ನೀಡಿದೆ. ತಾಯಿ- ಮಗು ಆರೋಗ್ಯವಾಗಿದ್ದಾರೆ.

ಪಾಕಿಸ್ತಾನ ಗಡಿ ಪ್ರವೇಶಿಸುತ್ತಿರುವ ಅಫ್ಘನ್ ನಿರಾಶ್ರಿತರು.

ಅಫ್ಘನ್ ರಿಟರ್ನಿಗಳಿಗೆ ಲಸಿಕೆ: ಅಫ್ಘನ್​ನಿಂದ ಹಿಂದಿರುಗಿ ಬಂದವರಿಗೆ ಸಾರ್ವಜನಿಕ ಆರೋಗ್ಯ ಉಪಕ್ರಮದಂತೆ ವೈಲ್ಡ್ ಪೊಲಿಯೋ ಲಸಿಕೆಯನ್ನು ಉಚಿತವಾಗಿ ನೀಡಲಾಗಿದೆ. ವಿಮಾನ ನಿಲ್ದಾಣದಲ್ಲೇ ಇದಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗಿತ್ತು ಎಂದು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಭಾನುವಾರ ತಿಳಿಸಿದ್ದಾರೆ.

ಅಫ್ಘನ್​ನಲ್ಲಿರುವ ಕನ್ನಡಿಗರು: ಚಿಕ್ಕಮಗಳೂರು ಎನ್​ಆರ್​ಪುರದ ರಾಬರ್ಟ್ ಕ್ಲೈವ್, ಮಂಗಳೂರಿನ ಜೆರೊನಾ ಸಿಕ್ವೆರಾ ಕಾಬುಲ್ ಏರ್​ಪೋರ್ಟ್​ನಲ್ಲಿದ್ದು, ಇವರನ್ನು ಕರೆತರಬೇಕಿದೆ. ಕಾಬುಲ್ ಏರ್​ಪೋರ್ಟ್​ನಲ್ಲಿ ಸಿಲುಕಿರುವ ಮಂಗಳೂರಿನ ಥೆರೆಸಾ ಕ್ರೋಸ್ತಾ ಇಟಲಿಗೆ ಹೋಗಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ನಮ್ಮ ಮನೆಗೆ ಬೆಂಕಿ ಹಚ್ಚಿದರು!: ಯಾಕೆ ಹೋಗ್ತಿದ್ದೀರಾ? ಇಲ್ಲೇ ಇರಿ ಎಂದು ತಾಲಿಬಾನಿಗಳು ಕಾಬುಲ್ ವಿಮಾನ ನಿಲ್ದಾಣದಲ್ಲಿ ನಮ್ಮನ್ನು ಕೇಳಿಕೊಂಡರು. ತಾಲಿಬಾನಿಗಳ ಮೃದುಮಾತುಗಳನ್ನು ನಂಬುವ ಸ್ಥಿತಿಯಲ್ಲಿ ನಾವು ಇಲ್ಲ. ಅವರ ಕ್ರೌರ್ಯ ಮತ್ತು ಅಮಾನುಷ ವ್ಯಕ್ತಿತ್ವವನ್ನು ಹತ್ತಿರದಿಂದ ಬಲ್ಲೆವು. ನಮ್ಮ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ನಮಗೆ ಅಲ್ಲಿ ಈಗ ನೆಲೆ ಇಲ್ಲ. ಅಫ್ಘನ್ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ನಮ್ಮ ಹೆಣ್ಣು ಮಕ್ಕಳನ್ನು ಕರೆದುಕೊಂಡು ಅಲ್ಲಿಂದ ಓಡಿ ಬಂದೆವು. ಭಾರತದ ನಮ್ಮ ಸೋದರ, ಸೋದರಿಯರು ಆಶ್ರಯ, ರಕ್ಷಣೆ ನೀಡುತ್ತಿದ್ದಾರೆ. ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಕೃತಜ್ಞರಾಗಿದ್ದೇವೆ ಎಂದು ಭಾನುವಾರ ಆಗಮಿಸಿದ ಸಿಖ್ಖ ಸಮುದಾಯದವರು ಹೇಳಿದರು.

ಶವವನ್ನೂ ಬಿಡದ ಉಗ್ರರು: ತಾಲಿಬಾನಿಗಳ ಪೈಶಾಚಿಕ ಪ್ರವೃತ್ತಿಯನ್ನು ಅಫ್ಘನ್​ನಿಂದ ಭಾರತಕ್ಕೆ ಬಂದ ಮಹಿಳೆಯೊಬ್ಬರು ವಿವರಿಸಿದ್ದಾರೆ. ತಾಲಿಬಾನಿಗಳು ಮಹಿಳೆಯರನ್ನು ಅಪಹರಿಸಿ, ಅವರನ್ನು ಗುಂಡಿಟ್ಟು ಸಾಯಿಸಿ ಬಳಿಕ ಶವದ ಜತೆಗೆ ಸಂಭೋಗ ನಡೆಸುತ್ತಿದ್ದಾರೆ. ಪ್ರತಿ ಕುಟುಂಬದಿಂದ ಒಬ್ಬ ಮಹಿಳೆಯನ್ನು ಅವರು ಬಯಸಿದ್ದರು. ಚಿಕ್ಕ ಹೆಣ್ಣು ಮಕ್ಕಳನ್ನೂ ಅವರು ಬಿಟ್ಟಿಲ್ಲ ಎಂದು ಮುಸ್ಕನ್ ಎಂಬ ಮಹಿಳೆ ನೋವಿನಿಂದ ಹೇಳಿಕೊಂಡಿದ್ದಾರೆ.

ಭಾರತಕ್ಕೆ ವಾಪಸಾದ ಕನ್ನಡಿಗರು: ಬೆಂಗಳೂರು ಮಾರತ್​ಹಳ್ಳಿಯ ಹಿರಾಕ್​ದೇಬ್​ನಾಥ್, ಬಳ್ಳಾರಿ ಸಂಡೂರಿನ ತನ್ವಿನ್ ಬಳ್ಳಾರಿ ಅಬ್ದುಲ್, ಮಂಗಳೂರು ಬಜ್ಪೆಯ ದಿನೇಶ್ ರೈ, ಮೂಡಬಿದ್ರೆಯ ಜಗದೀಶ್ ಪೂಜಾರಿ, ಮಂಗಳೂರು ಕಿನ್ನಿಗೋಳಿಯ ಡೆಸ್ಮೋಂಡ್ ಡೇವಿಸ್ ಡಿಸೋಜಾ, ಮಂಗಳೂರು ಉಲ್ಲಾಳದ ಪ್ರಸಾದ್ ಆನಂದ್, ಮಂಗಳೂರು ಬಿಜೈನ ಶ್ರವಣ್ ಅಂಚನ್ ಅವರನ್ನು ಅಘ್ಘನ್​ನಿಂದ ಭಾರತಕ್ಕೆ ಕರೆತರಲಾಗಿದೆ.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ