Breaking News
Home / ಜಿಲ್ಲೆ / ಬೆಂಗಳೂರು / ಗೃಹ ಇಲಾಖೆ ಬಲವರ್ಧನೆಗೆ ಪ್ರಯತ್ನ: ಆರಗ ಜ್ಞಾನೇಂದ್ರ

ಗೃಹ ಇಲಾಖೆ ಬಲವರ್ಧನೆಗೆ ಪ್ರಯತ್ನ: ಆರಗ ಜ್ಞಾನೇಂದ್ರ

Spread the love

ಬೆಂಗಳೂರು: ಸಿಬ್ಬಂದಿ ಕೊರತೆಯನ್ನು ಪರಿಹರಿಸಿ, ಆಧುನೀಕರಣಕ್ಕೆ ಒತ್ತು ನೀಡುವ ಮೂಲಕ ಗೃಹ ಇಲಾಖೆಯ ಬಲವರ್ಧನೆಗೆ ಪ್ರಯತ್ನಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಗೃಹ ಸಚಿವರಾದ ಬಳಿಕ ಸೋಮವಾರ ವಿಕಾಸಸೌಧದಲ್ಲಿ ಮೊದಲ ಬಾರಿಗೆ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಐಪಿಎಸ್‌ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮೊದಲ ಬಾರಿಗೆ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ಪೊಲೀಸರನ್ನು ನಂಬಿ ಜನರು ನೆಮ್ಮದಿಯಿಂದ ನಿದ್ರೆ ಮಾಡುತ್ತಾರೆ. ಜನರು ಇನ್ನಷ್ಟು ನೆಮ್ಮದಿಯಿಂದ ಬದುಕುವ ವಾತಾವರಣ ಪೊಲೀಸ್‌ ಇಲಾಖೆಯಿಂದ ಆಗಬೇಕಿದೆ’ ಎಂದರು.

ಪೊಲೀಸ್‌ ಇಲಾಖೆಯಲ್ಲಿ 16,000 ದಷ್ಟು ಸಿಬ್ಬಂದಿ ಕೊರತೆ ಇದೆ. ಹಂತ ಹಂತವಾಗಿ ಸಿಬ್ಬಂದಿ ನೇಮಿಸಲಾಗುವುದು. ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒದಗಿಸುವ ಮೂಲಕ ಇಲಾಖೆಯನ್ನು ಆಧುನೀಕರಣ ಮಾಡಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಡ್ರಗ್‌ ಮಾಫಿಯಾದ ವಿರುದ್ಧದ ಕಾರ್ಯಾಚರಣೆ ಮುಂದುವರಿಯಲಿದೆ. ಪೊಲೀಸರು ವಶಪಡಿಸಿಕೊಂಡಿರುವ ಟನ್‌ಗಟ್ಟಲೆ ಮಾದಕವಸ್ತುಗಳನ್ನು ಶೀಘ್ರದಲ್ಲಿ ನಾಶಪಡಿಸಲಾಗುವುದು. ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಪುಂಡಾಟ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ ಸೂದ್‌, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್‌ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿದ್ದರು.

ತುರ್ತು ಸಂದರ್ಭದಲ್ಲಷ್ಟೆ ‘ಝೀರೋ ಟ್ರಾಫಿಕ್‌

ಸಾಮಾನ್ಯ ಸಂದರ್ಭಗಳಲ್ಲಿ ತಮಗೆ ಹೆಚ್ಚಿನ ಬೆಂಗಾವಲು ಮತ್ತು ಪೈಲಟ್‌ ವಾಹನಗಳೊಂದಿಗೆ ‘ಝೀರೋ ಟ್ರಾಫಿಕ್‌’ ಸೌಲಭ್ಯ ಕಲ್ಪಿಸುವುದು ಬೇಡ. ತುರ್ತು ಸಂದರ್ಭ ಮತ್ತು ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಈ ಸೌಲಭ್ಯ ಒದಗಿಸಿದರೆ ಸಾಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ನನಗೆ ಎಲ್ಲ ಸಂದರ್ಭದಲ್ಲೂ ಝೀರೋ ಟ್ರಾಫಿಕ್‌ ವ್ಯವಸ್ಥೆ ಬೇಡ. ಅದರಿಂದ ಜನರಿಗೆ ತೊಂದರೆ ಆಗುತ್ತದೆ. ನನಗೂ ಮುಜುಗರ ಆಗುತ್ತದೆ’ ಎಂದು ಗೃಹ ಸಚಿವರು ಅಧಿಕಾರಿಗಳಿಗೆ ಹೇಳಿದ್ದಾರೆ.

ಪೊಲೀಸರು ಸಮಾಜಘಾತುಕ ಶಕ್ತಿಗಳು, ಅಪರಾಧ ಪ್ರವೃತ್ತಿಯವರ ಜತೆ ಸಂಪರ್ಕ ಇರಿಸಿಕೊಳ್ಳುವುದನ್ನು ಸಹಿಸುವುದಿಲ್ಲ. ಯಾವುದೇ ಅಧಿಕಾರಿ ಅಂತಹ ತಪ್ಪು ಮಾಡಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಗೃಹ ಸಚಿವರು ಅಧಿಕಾರಿಗಳಿಗೆ ನೀಡಿದ್ದಾರೆ.

‘ಈಶ್ವರಪ್ಪ ಜತೆ ಚರ್ಚಿಸುವೆ’

‘ಬಿಜೆಪಿ ಕಾರ್ಯಕರ್ತರನ್ನು ಮುಟ್ಟಿದರೆ ಒಂದಕ್ಕೆ ಎರಡು ತೆಗೆದು ಬಿಡಿ ಎನ್ನುವಷ್ಟರ ಮಟ್ಟಿಗೆ ನಾವು ಬೆಳೆದಿದ್ದೇವೆ’ ಎಂಬುದಾಗಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ವಿರುದ್ಧ ಪೊಲೀಸ್‌ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವುದೇ ಎಂಬ ಪ್ರಶ್ನೆಗೆ ಗೃಹ ಸಚಿವರು ನೇರ ಉತ್ತರ ನೀಡಲಿಲ್ಲ.

‘ಈಶ್ವರಪ್ಪ ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ಅವರ ಜತೆ ಚರ್ಚಿಸುವೆ. ಅವರು ನಿಮಗೂ ಗೊತ್ತಲ್ಲವೆ? ಅವರನ್ನೇ ಕೇಳಿ’ ಎಂದು ಜ್ಞಾನೇಂದ್ರ ಹೇಳಿದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ