Breaking News
Home / ರಾಜ್ಯ / ಕನ್ನಡದ ಬಿಗ್ ಬಾಸ್ ಸೀಸನ್ 8ರ ವಿನ್ನರ್ ಮಂಜು ಪಾವಗಡ

ಕನ್ನಡದ ಬಿಗ್ ಬಾಸ್ ಸೀಸನ್ 8ರ ವಿನ್ನರ್ ಮಂಜು ಪಾವಗಡ

Spread the love

ಬೆಂಗಳೂರು: ಕಲರ್ಸ್ ವಾಹಿನಿಯ ಮಜಾಭಾರತ ಕಾರ್ಯಕ್ರಮದ ಮೂಲಕ ಬೆಳಕಿಗೆ ಬಂದ ಹಾಸ್ಯ ಕಲಾವಿದ ಮಂಜು ಪಾವಗಡ 120 ದಿನಗಳ ಕಾಲ ನಡೆದ ಕನ್ನಡದ ಬಿಗ್ ಬಾಸ್ ಸೀಸನ್ 8ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಬಿಗ್​ಬಾಸ್ ಇತಿಹಾಸದಲ್ಲೇ ಅತಿ ಹೆಚ್ಚು 45 ಲಕ್ಷಕ್ಕೂ ಹೆಚ್ಚು ಮತಗಳಿಸಿದ ಮಂಜು ವಿಜೇತರೆಂದು ಭಾನುವಾರ ನಡೆದ ಫಿನಾಲೆಯಲ್ಲಿ ನಿರೂಪಕ ‘ಕಿಚ್ಚ’ ಸುದೀಪ್ ಘೋಷಣೆ ಮಾಡಿದರು. ಅಂತಾರಾಷ್ಟ್ರೀಯ ಖ್ಯಾತಿಯ ಬೈಕ್ ರೇಸರ್ ಉಡುಪಿಯ ಅರವಿಂದ್ ಕೆಪಿ 43 ಲಕ್ಷಕ್ಕೂ ಹೆಚ್ಚು ಮತ ಪಡೆದು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ಮಂಜು ಪಾವಗಡ, ಅರವಿಂದ್ ಕೆ.ಪಿ, ವೈಷ್ಣವಿ ಗೌಡ, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ ಫಿನಾಲೆಯ ಟಾಪ್ 5ರಲ್ಲಿ ಸ್ಥಾನ ಪಡೆದಿದ್ದರು. ಆ ಐವರಲ್ಲಿ 6ಲಕ್ಷ 69 ಸಾವಿರ ಮತ ಪಡೆದಿದ್ದ ಪ್ರಶಾಂತ್ ಸಂಬರಗಿ ಮತ್ತು 10ಲಕ್ಷ 21 ಸಾವಿರ ಮತ ಪಡೆದಿದ್ದ ವೈಷ್ಣವಿ ಶನಿವಾರವೇ ಮನೆಯಿಂದ ನಿರ್ಗಮಿಸಿದರು. ಕೊನೆಯದಾಗಿ ಉಳಿದ ಮೂವರು ಸ್ಪರ್ಧಿಗಳ ಪೈಕಿ ಮೊದಲಿಗೆ ದಿವ್ಯಾ ಉರುಡುಗ ಹೊರ ನಡೆದರು.

ಸ್ಪರ್ಧಿಗಳಿಂದ ಹಾಡು, ಡಾನ್ಸ್ ಇತ್ಯಾದಿ…: ಬಿಗ್ ಬಾಸ್ ಕೇವಲ ಒಂದು ರಿಯಾಲಿಟಿ ಶೋ ಮಾತ್ರವಲ್ಲ. ಬದಲಿಗೆ ಅದು ಮನರಂಜನೆಯ ಗುಚ್ಛ. ಮನೆಯ ಒಳಗಡೆ ಇದ್ದಾಗ ಒಂದು ರೀತಿಯ ಮನರಂಜನೆ ಇದ್ದರೆ, ಫಿನಾಲೆ ವೇದಿಕೆಯಲ್ಲಿಯೂ ಭರಪೂರ್ ಮನರಂಜನೆಯ ಹೂರಣವನ್ನೇ ಕಣ್ತುಂಬಿಕೊಳ್ಳಬಹುದು. ಅದರಂತೆ ಕಲರ್​ಫುಲ್ ವೇದಿಕೆಯಲ್ಲಿ ಬಿಗ್​ಬಾಸ್​ನ ಬಹುತೇಕ ಸ್ಪರ್ಧಿಗಳೆಲ್ಲ ಹಾಡುಗಳಿಗೆ ಹೆಜ್ಜೆ ಹಾಕಿದರು. ಇನ್ನೇನು ಹೊಸ ರಿಯಾಲಿಟಿ ಶೋ ‘ಎದೆ ತುಂಬಿ ಹಾಡುವೆನು’ ಶುರುವಾಗಲಿದ್ದು, ಆ ಶೋನ ತೀರ್ಪಗಾರರು ಬಿಗ್​ಬಾಸ್ ಫಿನಾಲೆಯಲ್ಲಿಯೂ ಹಾಡಿನ ಮೂಲಕ ಮೋಡಿ ಮಾಡಿದರು.

ಎಂದಿನಂತೆ ಕಿಚ್ಚನ ನೀಟ್ ನಿರೂಪಣೆ

ಕಿಚ್ಚ ಸುದೀಪ್ ನಟನೆಯನ್ನು ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಪ್ರೀತಿ ನಿರೂಪಣೆ ಮೇಲಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ವಾರಾಂತ್ಯ ಬಂದರೆ ಸಾಕು ಕಿಚ್ಚನನ್ನು ಕಣ್ತುಂಬಿಕೊಳ್ಳಲು ಕಾದು ಕುಳಿತವರೇ ಹೆಚ್ಚು. ಅದೇ ರೀತಿ ಫಿನಾಲೆ ವೇದಿಕೆ ಮೇಲೆಯೂ ಸುದೀಪ್ ನಿರೂಪಣೆ ಮತ್ತು ವಿಶೇಷ ಕಾಸ್ಟೂ ್ಯå್ ಮೂಲಕವೇ ಗಮನ ಸೆಳೆದರು. ತಮ್ಮ ನಿರೂಪಣೆ ಮೂಲಕವೇ ಸೀಸನ್ 8ನ್ನೂ ಮುಗಿಸಿಕೊಟ್ಟಿದ್ದಾರೆ.

ವೀಕ್ಷಕರ ಬಳಿ ಕ್ಷಮೆ ಕೋರಿದ ಸುದೀಪ್

ಶನಿವಾರ ರಾತ್ರಿ ಬಿಗ್​ಬಾಸ್ ಪ್ರಸಾರದಲ್ಲಿ ತಾಂತ್ರಿಕ ದೋಷದಿಂದಾಗಿ ಶೋ ಪ್ರಸಾರದಲ್ಲಿ ಕೊಂಚ ಅಡಚಣೆ ಆಯಿತು. ಧಾರಾವಾಹಿಯ ಕೆಲ ಪ್ರೋಮೋಗಳನ್ನೇ ಮರು ಪ್ರಸಾರ ಮಾಡಲಾಗುತ್ತಿತ್ತು. ಈ ದೋಷದ ಬಗ್ಗೆ ಭಾನುವಾರದ ಏಪಿಸೋಡ್​ನಲ್ಲಿ ಸುದೀಪ್ ಕ್ಷಮೆ ಯಾಚಿಸಿದರು.

ಬರಿಗೈಲಿ ಕಳಿಸದ ಬಿಗ್ ಬಾಸ್

ಇಲ್ಲಿಯವರೆಗೆ ಕೇವಲ ಬಿಗ್ ಬಾಸ್ ವಿಜೇತನಿಗೆ ಮಾತ್ರ 50 ಲಕ್ಷ ನಗದನ್ನು ಬಹುಮಾನದ ರೂಪದಲ್ಲಿ ನೀಡಲಾಗುತ್ತಿತ್ತು. ಆದರೆ ಸೀಸನ್ 8ರಲ್ಲಿ ಮಾತ್ರ ಹಾಗಾಗಲಿಲ್ಲ. ಫಿನಾಲೆಗೆ ಏರಿದ ಟಾಪ್ ಐವರಿಗೂ ಈ ಸಲ ನಗದು ರೂಪದಲ್ಲಿ ಹಣ ಸಿಕ್ಕಿದೆ. ಐವರಲ್ಲಿ ಮೊದಲು ಎಲಿಮಿನೇಟ್ ಆದ ಪ್ರಶಾಂತ್​ಗೆ 2.5 ಲಕ್ಷ ರೂ. ಸಿಕ್ಕರೆ, ನಾಲ್ಕನೆಯವರಾಗಿ ಮನೆಯಿಂದ ನಿರ್ಗಮಿಸಿದ ವೈಷ್ಣವಿಗೆ 3.5 ಲಕ್ಷ ರೂ. ಸಿಕ್ಕಿದೆ. ಅದೇ ರೀತಿ ಶೋ ವಿನ್ನರ್ ಮಂಜು ಪಾವಗಡಗೆ 53 ಲಕ್ಷ ರೂ, ಮೊದಲ ರನ್ನರ್ ಅಪ್ ಅರವಿಂದ್​ಗೆ 11 ಲಕ್ಷ, ಎರಡನೇ ರನ್ನರ್ ಅಪ್ ದಿವ್ಯಾ ಉರುಡುಗಗೆ 6 ಲಕ್ಷ ರೂ. ಲಭಿಸಿದೆ.

ವಿಶೇಷತೆಗಳಿಂದ ಕೂಡಿದ ಶೋ

ಈ ಸಲದ ಸೀಸನ್ 8 ಹಲವು ವಿಶೇಷತೆಗಳಿಂದ ಕೂಡಿತ್ತು. ಕೋವಿಡ್ ಸಾಂಕ್ರಾಮಿಕದ ನಡುವೆ 72ನೇ ದಿನಕ್ಕೆ ಶೋ ಸ್ಥಗಿತಗೊಂಡು, 43 ದಿನಗಳ ಗ್ಯಾಪ್​ನ ಬಳಿಕ ಪುನಃ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿ ಕುತೂಹಲ ಮೂಡಿಸಿತ್ತು. ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲಿಯೇ 120 ದಿನಗಳ ಶೋ ನಡೆದಿರಲಿಲ್ಲ. ಅದೂ ಈ ಸೀಸನ್​ನಲ್ಲಿ ಘಟಿಸಿದೆ.

ಅಕ್ಟೋಬರ್​ನಲ್ಲಿ ಸೀಸನ್ 9?

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಬಿಗ್ ಬಾಸ್ ಸೀಸನ್ 8 ಈ ವರ್ಷದ ಜನವರಿ ಅಥವಾ ಫೆಬ್ರವರಿಯಲ್ಲಿಯೇ ಮುಗಿಯಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಸಮಯ ಬದಲಾಗುತ್ತಲೇ ಹೋಯಿತು. ಇದೀಗ ಕೊನೆಗೂ ಸೀಸನ್ 8ಕ್ಕೆ ತೆರೆಬಿದ್ದಿದೆ. ಇತ್ತ ಬಿಗ್ ಬಾಸ್ ಸೀಸನ್ 9ಕ್ಕೂ ತೆರೆಮರೆಯಲ್ಲಿ ಕೆಲಸಗಳು ಶುರುವಾಗಿವೆ. ಸದ್ಯದ ಮಾಹಿತಿ ಪ್ರಕಾರ ಅಕ್ಟೋಬರ್​ನಲ್ಲಿ 9ನೇ ಸೀಸನ್ ಶುರುವಾಗಲಿದೆಯಂತೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ