Home / Uncategorized / ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: 625 ಅಂಕ ಪಡೆದ ಬಾಗಲಕೋಟೆಯ ಅಂಕಿತಾ ಬಸಪ್ಪ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: 625 ಅಂಕ ಪಡೆದ ಬಾಗಲಕೋಟೆಯ ಅಂಕಿತಾ ಬಸಪ್ಪ

Spread the love

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: 625 ಅಂಕ ಪಡೆದ ಬಾಗಲಕೋಟೆಯ ಅಂಕಿತಾ ಬಸಪ್ಪ

ಬೆಂಗಳೂರು ಮೇ 9: ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಪ್ರಕಟವಾಗಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದೆ. ಸುದ್ದಿಗೋಷ್ಠಿಯಲ್ಲಿ ಎಲ್ಲಾ ಶಾಲೆಗಳ ಫಲಿತಾಂಶ ಪ್ರಕಟವಾಗಿದೆ. ಅಧಿಕೃತ ವೆಬ್‌ಸೈಟ್‌ಗಳಲ್ಲೂ ಫಲಿತಾಂಶ ಲಭ್ಯವಿರಲಿದೆ.

2023-2024 ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರಲ್ಲಿ ಈ ಬಾರಿ 631204 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಈ ಬಾರಿ ರಾಜ್ಯಾದ್ಯಂತ 76.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೈಲುಗೈ ಸಾಧಿಸಿದ್ದಾರೆ. 625 ಅಂಕಕ್ಕೆ 625 ಅಂಕವನ್ನು ಬಾಗಲಕೋಟೆಯ ಅಂಕಿತ ಬಸಪ್ಪ ಎಂಬ ವಿದ್ಯಾರ್ಥಿನಿ ಪಡೆದಿದ್ದಾರೆ. ಇವರು ರಾಜ್ಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಏಕೈಕ ವಿದ್ಯಾರ್ಥಿಯಾಗಿದ್ದಾರೆ. ಅಲ್ಲದೆ ದಕ್ಷಿಣ ಕನ್ನಡದ ಚಿನ್ಮಯಿ 624, ಸಹನಾ 624 ಅಂಕಗಳನ್ನು ಗಳಿಸಿದ್ದಾರೆ.

ಸಂತೋಷ ಪಟ್ಟ ಅಂಕಿತಾ ಬಸಪ್ಪ ಹೇಳಿದ್ದೇನು?

ಸುದ್ದಿಗಾರರೊಂದಿಗೆ ಮಾತನಾಡಿದ ಅಂಕಿತಾ ಬಸಪ್ಪ ಅವರು, ‘ನನಗೆ ಓದಿನ ಬಗ್ಗೆ ಮನೆಯಲ್ಲಿ ಒತ್ತಡ ಇರಲಿಲ್ಲ. ಒಂದು ದಿನ ಓದಿ ಮರು ದಿನ ಓದದೇ ಇದ್ದಲ್ಲಿ ಅದನ್ನು ಓದು ಅನ್ನಲ್ಲ. ಹೀಗಾಗಿ ದಿನನಿತ್ಯ ಓದುವುದು ತುಂಬಾ ಮುಖ್ಯ. ನಿತ್ಯ ಎರಡು ಮೂರು ಗಂಟೆ ಓದಿದರೆ ಸಾಕು. ಪರೀಕ್ಷೆಗೆ ಒಂದು ತಿಂಗಳು ಬಾಕಿ ಇರುವಾಗ ಓದಿದರೆ ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ನಿತ್ಯ ಸ್ವಲ್ಪ ಓದಿಗೆ ಸಮಯ ಕಳೆದರೆ ಉತ್ತಮ ಫಲಿತಾಂಶ ಪಡೆಯಲು ಕಷ್ಟವಾಗುವುದಿಲ್ಲ’ ಎಂದರು.

‘ಶಾಲೆಯಲ್ಲಿ ನನಗೆ ಆರು ವಿಷಯದ ಮಾಡಲ್ ಪ್ರಶ್ನೆ ಕೊಟ್ಟು ಬರೆಸ್ತಾಯಿದ್ದರು. ಶಿಕ್ಷಕರು ತುಂಬಾ ಸಹಾಯ ಮಾಡುತ್ತಿದ್ದರು. ಮುಂದೆ ನನಗೆ ಪಿಯುಸಿ ಸೈನ್ಸ್ ಮಾಡುವ ಆಸೆ ಇದೆ. ಮುಂದೆ ಐಎಎಸ್ ಆಫೀಸರ್ ಆಗಬೇಕು ಅಂದುಕೊಂಡಿದ್ದೇನೆ’ ಎಂದು ಅಂಕಿತಾ ಹೇಳಿದರು.

‘ಹಾಸ್ಟಲ್ ಅಲ್ಲಿ ಇರೋದ್ರಿಂದ ಫೋನ್ ಇರಲಿಲ್ಲ. ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕಾಗಿದ್ದರೆ ಸೈಬರ್ ಸೆಂಟರ್ ಹೋಗಿ ಪಡೆಯುತ್ತಿದ್ದೆವು. ಎಷ್ಟೋ ಜನ ತುಂಬಾ ಚೆನ್ನಾಗಿ ಓದಿರುತ್ತಾರೆ. ಆದರೂ ಪರೀಕ್ಷೆ ವೇಳೆ ಹೆದರಿ ಫೇಲ್ ಆಗ್ತಾರೆ. ಕೆಲವರು ಓದದದೇ ಫೇಲ್ ಆಗ್ತಾರೆ. ಹೀಗಾಗಿ ಫೇಲ್ ಆದವರು ಫೋಕಸ್ ಆಗಿದ್ದರೆ ಪಾಸ್ ಆಗಬಹುದು’ ಎಂದು ಅಂಕಿತಾ ಸಲಹೆ ನೀಡಿದರು.

ಅಂಕಿತಾ ಬಸಪ್ಪ ಸಾಧನೆಗೆ ಶ್ಲಾಘನೆ, ನೆರವು

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಸರಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲ ರ್ಯಾಂಕ್ ಪಡೆದಿದ್ದಾಳೆ. 625/625 ಅಂಕ ಪಡೆದು ಹಿಂದುಳಿದ ವರ್ಗಗಳ ಇಲಾಖೆಗೆ ಗೌರವ ತಂದಿದ್ದಾಳೆ.

ವಿದ್ಯಾರ್ಥಿನಿಯ ಸಾಧನೆಗೆ ಬಾಗಲಕೋಟೆ ಜಿಲ್ಲಾಧಿಕಾರಿ ಮತ್ತು ಜಿಪಂ. ಸಿಇಓ ಶಶಿಧರ ಕುರೇರ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಮುಂದೆ ದೇಶದ ಅತ್ಯುನ್ನತ ಪರೀಕ್ಷೆ ಯುಪಿಎಸ್ ಸಿ ಪಾಸು ಮಾಡುವ ಮನದಿಂಗಿತ ಅಂಕಿತಾ ವ್ಯಕ್ತಪಡಿಸಿದ್ದಾಳೆ. ತಂದೆ ಕೃಷಿಕ ತಾಯಿ ಗೃಹಿಣಿ. ಮಗಳ ವಿದ್ಯಾಭ್ಯಾಸಕ್ಕೆ ಸರಕಾರದ ನೆರವು ಈಗ ಅವಳ ಪ್ರತಿಭಾ ಅನಾವರಣಕ್ಕೆ ಕಾರಣವಾಗಿದೆ.

IAS ಪರೀಕ್ಷೆ ಪಾಸು ಮಾಡುವ ದಿಸೆಯಲ್ಲಿ ಅವಳಿಗೆ ಸಹಾಯ ಸಹಕಾರ ಮಾಡಲಾಗುವುದು. ಅವಳ ಸಾಧನೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಅವಳು ಕಲಿತ ವಸತಿ ಶಾಲೆಯ ಶಿಕ್ಷಕರು ಸಿಬ್ಬಂದಿಗೂ ಸತ್ಕರಿಸಲಾಗುವುದು ಎಂದು ಸಿಇಓ ಸಂತಸ ವ್ಯಕ್ತಪಡಿಸಿದ್ದಾರೆ.

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ

ಅಂಕಿತಾ ಬಸಪ್ಪ ಕೊನ್ನೂರು (ಬಾಗಲಕೋಟೆ) 625/625 (ಪ್ರಥಮ)

ಮೇದಾ ಪಿ ಶೆಟ್ಟಿ (ಬೆಂಗಳೂರು) 625ಕ್ಕೆ 624 ಅಂಕ

ಹರ್ಷಿತಾ ಡಿಎಂ (ಮಧುಗಿರಿ) 625ಕ್ಕೆ 624 ಅಂಕ

ಚಿನ್ಮಯ್ (ದಕ್ಷಿಣ ಕನ್ನಡ)

ಸಿದ್ದಾಂತ್ (ಚಿಕ್ಕೊಡಿ )

ದರ್ಶನ್ (ಶಿರಸಿ)

ಚಿನ್ಮಯ್ (ಶಿರಸಿ)

ಶ್ರೀರಾಮ್ (ಶಿರಸಿ)

ಜಿಲ್ಲಾವಾರು ಮಾಹಿತಿ:

ಜಿಲ್ಲಾವಾರು ಮಾಹಿತಿ ನೋಡುವುದಾದರೆ- ಅಧಿಕ ಅಂಕ ಪಡೆದ ಜಿಲ್ಲೆಗಳಲ್ಲಿ ಉಡುಪಿ ಮೊದಲನೇ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು, ಉತ್ತರ ಕನ್ನಡ, ಹಾಸನ, ಮೈಸೂರು, ಸಿರಸಿ ನಂತರದ ಸ್ಥಾನದಲ್ಲಿ ಇದೆ. ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಕರ್ನಾಟಕ ಫಲಿತಾಂಶಗಳ ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ಅಥವಾ kseab.karnataka.gov.in ನಲ್ಲಿ ನೇರ ಲಿಂಕ್ ಮೂಲಕವೂ ಪರಿಶೀಲಿಸಬಹುದು.

ಕರ್ನಾಟಕ ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶ(Karnataka SSLC Results 2024) ಪ್ರಕಟಗೊಂಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಗೊಳಿಸಿದೆ. ಬಳಿಕ ಫಲಿತಾಂಶ karresults.nic.in ವೆಬ್​ಸೈಟ್​ನಲ್ಲಿ ಪ್ರಕಟಗೊಂಡಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ kseab.karnataka.gov.in ಗೆ ಭೇಟಿ ನೀಡಿ ಫಲಿತಾಂಶವನ್ನು ನೋಡಬಹುದು.

ಕರ್ನಾಟಕದ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಈ ಸಲದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಈ ಬಾರಿ ಮಾರ್ಚ್​ 25 ರಿಂದ ಏಪ್ರಿಲ್​ 6ರವರೆಗೆ ಪರೀಕ್ಷೆ ನಡೆದಿತ್ತು, ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು 8.69 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಪ್ರಥಮ ಭಾಷೆಯ ಪತ್ರಿಕೆ, ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ ಮತ್ತು ಸಂಸ್ಕೃತದೊಂದಿಗೆ ಪ್ರಾರಂಭವಾಯಿತು. ಏಪ್ರಿಲ್ 8 ರಂದು ಜೆಟಿಎಸ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆಗಳು ನಡೆದಿದ್ದವು.


Spread the love

About Laxminews 24x7

Check Also

ಬೆಳಗಾವಿ: ಶತಮಾನೋತ್ಸವ ಕಾರ್ಯಕ್ರಮ ಸಂಪನ್ನ

Spread the love ಬೆಳಗಾವಿ: ಇಲ್ಲಿನ ಖಾಸಬಾಗದ ಉಪ್ಪಾರ ಗಲ್ಲಿಯಲ್ಲಿ ನಾಲ್ಕು ದಿನ ವೈಭವದಿಂದ ನಡೆದ ಬನಶಂಕರಿ ದೇವಸ್ಥಾನದ ಶತಮಾನೋತ್ಸವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ