ಹುಬ್ಬಳ್ಳಿ: ಲಾಕ್‍ಡೌನ್ ವೇಳೆ ಹುಬ್ಬಳ್ಳಿಯ ಹುಡುಗ ಸಿಂಧನೂರಿನ ಯುವತಿಯನ್ನು ಕೈ ಹಿಡಿಯುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹೌದು ಲಾಕ್‍ಡೌನ್ ಸಂದರ್ಭದಲ್ಲಿ ಮದುವೆಗಳಿಗೆ ಷರತ್ತುಬದ್ಧ ಅನುಮತಿ ನೀಡಿ, ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಆದರೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿಕೊಂಡೆ ಸಿಂಧನೂರಿನ ವಧುವನ್ನು ಹುಬ್ಬಳ್ಳಿಯ ಹುಡುಗ ಮದುವೆಯಾಗಿದ್ದಾರೆ.
ಸಿಂಧನೂರಿನಲ್ಲಿ ಸಚೇತಿಯವರ ಮನೆಯಲ್ಲಿ ಸರಳವಾಗಿ ಮದುವೆಯ ಸಮಾರಂಭ ಜರುಗಿದ್ದು, ವಧು ಪೂನಂ ಸಚೇತಿ, ವರ ಹಸ್ಮುಖ ಜೈನ್ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆಯಾಗುವ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ.
ಬಿಇ ಸಿವಿಲ್ ಓದಿರುವ ಹಸ್ಮುಖ ಜೈನ್ ಹುಬ್ಬಳ್ಳಿಯಲ್ಲಿ ಒಂದು ಖಾಸಗಿ ಕಂಪನಿ ನಡೆಸುತ್ತಿದ್ದು, ಜಿಲ್ಲಾಧಿಕಾರಿಗಳ ಅನುಮತಿ ಪಡೆದುಕೊಂಡು ಹುಬ್ಬಳ್ಳಿಯಿಂದ ಹತ್ತು ಜನರು ಮದುವೆ ಕಾರ್ಯಕ್ಕೆ ತೆರಳಿದ್ದರು. ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ವಧು ವರರ ಕಡೆಯಿಂದ 20 ಜನರು ಭಾಗಿಯಾಗಿದ್ದರು. ಮದುವೆ ಕಾರ್ಯದ ನಂತರ ವಧು-ವರರು ಹುಬ್ಬಳ್ಳಿಗೆ ಆಗಮಿಸಿದ್ದಾರೆ.