Breaking News
Home / ಜಿಲ್ಲೆ / ಬರಿದಾದ ರಾಜ್ಯ ಸರ್ಕಾರದ ಬೊಕ್ಕಸ ಖಜಾನೆ ತುಂಬಿಸಲು ರಾಜ್ಯ ಸರ್ಕಾರ ನಾನಾ ಕಸರತ್ತು .! B.S.Y.

ಬರಿದಾದ ರಾಜ್ಯ ಸರ್ಕಾರದ ಬೊಕ್ಕಸ ಖಜಾನೆ ತುಂಬಿಸಲು ರಾಜ್ಯ ಸರ್ಕಾರ ನಾನಾ ಕಸರತ್ತು .! B.S.Y.

Spread the love

ಬೆಂಗಳೂರು, ಏ.24- ಕೊರೊನಾ ಲಾಕ್‍ಡೌನ್‍ನಿಂದ ವ್ಯಾಪಾರ-ವಹಿವಾಟು ಸ್ಥಗಿತವಾಗಿ ಬೊಕ್ಕಸ ಖಾಲಿಯಾಗಿದ್ದು, ಖಜಾನೆ ತುಂಬಿಸಲು ರಾಜ್ಯ ಸರ್ಕಾರ ನಾನಾ ಕಸರತ್ತು ಆರಂಭಿಸಿದೆ. ಆರ್ಥಿಕ ವರ್ಷದಲ್ಲಿ ಸರ್ಕಾರ ಭಾರೀ ಆದಾಯ ಖೋತಾ ಕಂಡಿದ್ದು, ಇತ್ತ ಜಿಎಸ್‍ಟಿ ತೆರಿಗೆ ನಷ್ಟವೂ ದುಪ್ಪಟ್ಟು ಆಗಿದೆ. ಈ ಮಧ್ಯೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅಲ್ಪಸ್ವಲ್ಪ ಆರ್ಥಿಕ ನೆರವು ಬಂದಿದ್ದು, ಇನ್ನಷ್ಟು ನೆರವಿನ ನಿರೀಕ್ಷೆಯಲ್ಲಿದೆ.

ಆರ್ಥಿಕ ಸಂಕಷ್ಟವನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸಲು ಲಾಕ್ ಡೌನ್ ಸಡಿಲಿಕೆ ಮಾಡುವ ಕೆಲವು ಕಠಿಣ ನಿರ್ಧಾರಗಳನ್ನು ಸರ್ಕಾರ ಕೈಗೊಂಡಿದೆ. ಮಾರ್ಚ್ ಅಂತ್ಯಕ್ಕೆ ಸುಮಾರು 4600 ಕೋಟಿ ರೂ. ಆದಾಯದ ಕೊರತೆ ಅನುಭವಿಸಿದೆ.

ಈ ಪೈಕಿ ಆದಾಯ ಮೂಲವಾದ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಭಾರೀ ಖೋತಾ ಆಗಿದೆ. 3,900 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಕೊರತೆ ಆಗಿದೆ. ಇದರ ಜತೆಗೆ ಮೋಟಾರು ವಾಹನ ತೆರಿಗೆ 630 ಕೋಟಿ ರೂ., ಮುಂದ್ರಾಂಕ ಮತ್ತು ನೋಂದಣಿ ತೆರಿಗೆ 450 ಕೋಟಿ ರೂ. ನಷ್ಟ ಆಗಿದೆ.

ಸಾಮನ್ಯವಾಗಿ ಮಾಸಿಕ 4,500 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹವಾಗುತ್ತದೆ. ಆದರೆ, ಲಾಕ್‍ಡೌನ್‍ನಿಂದ ತೆರಿಗೆ ಸಂಗ್ರಹ ಪ್ರಮಾಣ ಸುಮಾರು 1500 ಕೋಟಿ ರೂ.ನಷ್ಟು ಕಡಿಮೆ ಆಗಲಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

# ಜಿಎಸ್‍ಟಿ ತೆರಿಗೆಯಲ್ಲಿನ ನಷ್ಟ ಎಷ್ಟು..?
ವ್ಯಾಪಾರ-ವಹಿವಾಟು ಸ್ಥಗಿತದಿಂದ ಬಹುತೇಕ ಜಿಎಸ್‍ಟಿ ತೆರಿಗೆ ಸಂಗ್ರಹವೂ ಪಾತಾಳಕ್ಕೆ ಇಳಿದಿದೆ. ಸಾಮಾನ್ಯವಾಗಿ ಒಂದು ತಿಂಗಳಲ್ಲಿ ಜಿಎಸ್‍ಟಿ ತೆರಿಗೆ ಸುಮಾರು 7,000 ಕೋಟಿ ರೂ. ಸಂಗ್ರಹ ಆಗಬೇಕು.

ಅಂದರೆ ಒಂದು ವಾರದಲ್ಲಿ ಸುಮಾರು 1,750 ಕೋಟಿ ರೂ. ಜಿಎಸ್‍ಟಿ ತೆರಿಗೆ ಸಂಗ್ರಹವಾಗುತ್ತದೆ. ಆದರೆ, ಲಾಕ್‍ಡೌನ್ ಹಿನ್ನೆಲೆ ಸರ್ಕಾರಕ್ಕೆ ಕಳೆದ ಮೂರು ವಾರಗಳಲ್ಲಿ ಸುಮಾರು 4,000 ಕೋಟಿ ರೂ. ಜಿಎಸïಟಿ ತೆರಿಗೆ ನಷ್ಟ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಥಿಕ ಸಂಕಷ್ಟದ ಮಧ್ಯೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸಂಜೀವಿನಿ ಎಂಬಂತೆ ಅಲ್ಪ ಆರ್ಥಿಕ ನೆರವನ್ನು ನೀಡಿದೆ. ಕೋವಿಡ್-19 ನಿಯಂತ್ರಿಸಲು ಕೇಂದ್ರ ಸರ್ಕಾರ ಎಸ್‍ಡಿಆರ್‍ಎಫ್‍ನಿಂದ ಮೊದಲ ಕಂತಿನಲ್ಲಿ ಎಲ್ಲಾ ರಾಜ್ಯಗಳಿಗೆ 11,092 ಕೋಟಿ ರೂ. ಬಿಡುಗಡೆ ಮಾಡಿದ್ದು, ಈ ಪೈಕಿ ಕರ್ನಾಟಕದ ಪಾಲಿನ 395 ಕೋಟಿ ರೂ. ಪಾವತಿಯಾಗಿದೆ.

15ನೆ ಹಣಕಾಸು ಆಯೋಗದ ಮೂಲಕ ಕೇಂದ್ರ ಸರ್ಕಾರದ ತೆರಿಗೆ ಪಾಲಿನಲ್ಲಿ ಮೊದಲ ಕಂತಾಗಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ 1,679 ಕೋಟಿ ರೂ. ಬಿಡುಗಡೆ ಮಾಡಿದೆ. ಇತ್ತ ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಬಾಕಿ ಇದ್ದ ಜಿಎಸ್‍ಟಿ ತೆರಿಗೆ ಪರಿಹಾರ ಮೊತ್ತವಾದ 1,580 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಇನ್ನು ಜನವರಿ-ಫೆಬ್ರವರಿ ತಿಂಗಳ ರಾಜ್ಯದ ಜಿಎಸ್‍ಟಿ ಪರಿಹಾರ ಮೊತ್ತವಾದ 3,500 ಕೋಟಿ ರೂ. ಬರಬೇಕಾಗಿದೆ. ಮೊದಲ ಕಂತಿನಲ್ಲಿ ಕೇಂದ್ರ ಸರ್ಕಾರದಿಂದ ಬಾಕಿ ಜಿಎಸ್‍ಟಿ ತೆರಿಗೆ ಪರಿಹಾರ ಮೊತ್ತ, ಕೇಂದ್ರದ ತೆರಿಗೆ ಪಾಲು ಸೇರಿ ರಾಜ್ಯಕ್ಕೆ ಸುಮಾರು 7,000-8,000 ಕೋಟಿ ರೂ. ಬರಬೇಕಾಗಿದೆ.


Spread the love

About Laxminews 24x7

Check Also

ತಾ.ಪಂ.-ಜಿ.ಪಂ. ಮೀಸಲಾತಿ ನಿಗದಿ ವಿಳಂಬ: ಸರಕಾರಕ್ಕೆ ನ್ಯಾಯಾಂಗ ನಿಂದನೆ ತೂಗುಗತ್ತಿ

Spread the love ಬೆಂಗಳೂರು: ನ್ಯಾಯಾಲಯಕ್ಕೆ ಕೊಟ್ಟ ಭರವಸೆಯಂತೆ ನಿಗದಿತ ಅವಧಿಯಲ್ಲಿ ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳಿಗೆ ಮೀಸಲಾತಿ ಅಂತಿಮಗೊಳಿಸದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ