ಬೆಂಗಳೂರು, ಏ.16- ದೀರ್ಘಾವಧಿಗೆ ರಜೆ ಇರುವ ಸಂದರ್ಭದಲ್ಲಿ ಮಕ್ಕಳ ಹಿತದೃಷ್ಟಿಯಿಂದ ಯೂಟ್ಯೂಬ್ ಚಾನೆಲ್ ಪ್ರಾರಂಭಿರುವುದು ಅತ್ಯಂತ ಸಕಾಲಿಕ ಹಾಗೂ ಸಮಂಜಸವಾಗಿದೆ ಎಂದು ಮುಖ್ಯಂಮಂತ್ರಿ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳ ಕಲಿಕೆಗಾಗಿ ಶಿಕ್ಷಣ ಇಲಾಖೆ ಹೊರ ತಂದಿರುವ ನೂತನ ಯೂಟ್ಯೂಬ್ ಚಾನಲ್ ಮಕ್ಕಳ ವಾಣಿ: ನಲಿಯೋಣ, ಕಲಿಯೋಣ ಅನ್ನು ಉದ್ಘಾಟನೆ ಮಾಡಿ ಮಾತನಾಡಿದ ಮುಖ್ಯಂಮಂತ್ರಿ, ತಂತ್ರಜ್ಞಾನದ ಸದ್ಬಳಕಗೆ ಇದು ಅತ್ಯುತ್ತಮ ಉದಾಹರಣೆಯಾಗಿದೆ ಎಂದರು.
ಚಾನಲ್ ಆರಂಭಿಸಿರುವುದಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಅಭಿನಂದಿಸುವುದಾಗಿ ತಿಳಿಸಿದರು.ಈ ಯುಟ್ಯೂಬ್ ಚಾನೆಲ್‍ನಲ್ಲಿ ಪ್ರಸಾರ ಮಾಡಲು ಉದ್ದೇಶಿಸಿರುವ ಸಾಮಗ್ರಿಗಳನ್ನು ಇತರೆ ಮಾಧ್ಯಮಗಳಾದ ರೇಡಿಯೋ, ಟಿವಿ, ಅಂತರ್ಜಾಲದಲ್ಲಿಯೂ ಪ್ರಸಾರ ಮಾಡಲು ಸೂಕ್ತವಾಗಿರುವಂತೆ ರೂಪಿಸಲಾಗುತ್ತದೆ.
ರಜೆಯ ಕಾರಣ ಮನೆಯಲ್ಲಿರುವ ಮಕ್ಕಳಿಗೆ ಕತೆ, ಹಾಡು, ಚಿತ್ರ ಕಲೆ, ಸಂಗೀತ, ಕಿರು ನಾಟಕ, ಕ್ರಾಫ್ಟ್, ಒಗಟು, ಗಾದೆ, ಮ್ಯಾಜಿಕ್, ಪದಬಂಧ ಇತ್ಯಾದಿಗಳ ಮೂಲಕ ತಲುಪಿ, ಅವರನ್ನು ರಂಜಿಸಲು ಹಾಗೂ ಅವರನ್ನು ತೊಡಗಿಸಿಕೊಳ್ಳಲು ಉದ್ದೇಶಿಸಿದೆ.ಈ ಮಕ್ಕಳ ಯುಟ್ಯೂಬ್ ಚಾನೆಲ್ ಗೆ ‘ ಮಕ್ಕಳ ವಾಣಿ: ನಲಿಯೋಣ, ಕಲಿಯೋಣ ‘ ಎಂದು ಹೆಸರಿಡಲಾಗಿದೆ.
ಶಿಕ್ಷಕರು, ಶಿಕ್ಷಣಾಸಕ್ತರು ಹಾಗೂ ಶಿಕ್ಷಣ ಕುರಿತಂತೆ ಕೆಲಸ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಂದ ಅಭೂತಪೂರ್ವ ಎನಿಸುವಷ್ಟು ಸ್ಪಂದನೆ ದೊರೆತಿರುವುದು ಸಂತೋಷದ ಸಂಗತಿ ಎಂದರು.ಸ್ವೀಕೃತವಾದ ಸಾಮಗ್ರಿಗಳನ್ನು ಸಂಪಾದಕ ಮಂಡಳಿಯು ಗಮನಿಸಿ, ಸೂಕ್ತವಾದವುಗಳನ್ನು ಆಯ್ಕೆ ಮಾಡಿ, ಯುಟ್ಯೂಬ್ ಚಾನಲ್ ನಲ್ಲಿ ಪ್ರಸಾರ ಮಾಡಲು ಸಿದ್ಧಗೊಳಿಸಲಾಗುತ್ತಿದೆ.
ಮಕ್ಕಳ ಮನೋವಿಕಾಸಕ್ಕೆ ಅನುಕೂಲವಾಗುವ ಈ ಚಾನೆಲ್ ಯಶಸ್ವಿಯಾಗಲಿ ಎಂದು ಹಾರೈಸಿದರು. ಈ ಚಾನೆಲ್ ಗೆ ಮಕ್ಕಳು ಹಾಗೂ ಪೋಷಕರು ಅಧಿಕ ಪ್ರಮಾಣದಲ್ಲಿ ಚಂದಾದಾರರಾಗಲು ಕರೆ ನೀಡಿದರು. ಈ ಸಂದರ್ಭದಲ್ಲಿ ಪ್ರಾಥಮಿ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಅರೋಗ್ಯ ಸಚಿವ ಬಿ.ಶ್ರೀರಾಮಲು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರ್ ಗೌಡ ಪಾಟೀಲ್ ಹಾಜರಿದ್ದರು.