Breaking News
Home / ಜಿಲ್ಲೆ / ಕರ್ನಾಟಕವನ್ನು ಥೈಲ್ಯಾಂಡ್ ಮಾಡಲು ಹೊರಟಿದ್ದಾರೆ: ಎಚ್.ಕೆ ಪಾಟೀಲ್

ಕರ್ನಾಟಕವನ್ನು ಥೈಲ್ಯಾಂಡ್ ಮಾಡಲು ಹೊರಟಿದ್ದಾರೆ: ಎಚ್.ಕೆ ಪಾಟೀಲ್

Spread the love

ಹುಬ್ಬಳ್ಳಿ: ಬಿಜೆಪಿಯ ನಾಯಕರು ಕ್ಯಾಸಿನೋ ಅಂತಹ ಜೂಜು ಅಡ್ಡೆಗಳನ್ನು ಕರ್ನಾಟಕದಲ್ಲಿ ಸ್ಥಾಪನೆ ಮಾಡುವ ಮೂಲಕ ಕರ್ನಾಟಕವನ್ನು ಥೈಲ್ಯಾಂಡ್ ಮಾಡಲು ಹೊರಟಿದ್ದಾರೆ. ಪ್ರವಾಸಿಗರನ್ನು ಆಕರ್ಷಿಸಲು ರಾಜ್ಯದ ಸಂಸ್ಕೃತಿಗೆ ಧಕ್ಕೆ ತರುತ್ತಿರುವುದು ಖಂಡನೀಯವಾಗಿದೆ ಎಂದು ಮಾಜಿ ಸಚಿವ ಎಚ್.ಕೆ ಪಾಟೀಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸಭಾ ಹಾಗೂ ವಿಧಾನ ಪರಿಷತ್ ಕಲಾಪ ಪೂರ್ಣಗೊಂಡ ಬೆನ್ನಲ್ಲೇ ಸಚಿವ ಸಿ.ಟಿ ರವಿ ಅವರು ಪ್ರವಾಸಿಗರನ್ನು ಆಕರ್ಷಿಸಲು ಜೂಜು ಅಡ್ಡೆ ಸ್ಥಾಪಿಸುವುದಾಗಿ ಹೇಳಿರುವುದು ಸರಿಯಲ್ಲ. ಗೋವಾ ಮಾದರಿಯಲ್ಲಿ ಕ್ಯಾಸಿನೋ ಸ್ಥಾಪನೆ ಮಾಡಲು ಮುಂದಾಗಿರುವ ಬಿಜೆಪಿ ನಾಯಕರ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

 

ಬಿಜೆಪಿ ನಾಯಕರು ಮಾತು ಎತ್ತಿದರೆ ಸಾಕು ಸಂಸ್ಕೃತಿ ಹಾಗೂ ಸಂಪ್ರದಾಯದ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಆಲೋಚನೆ ಪ್ರಕ್ರಿಯೆ ನೋಡಿದರೆ ಬಿಜೆಪಿ ನಾಯಕರು ಮನೆ-ಮನೆಗೆ ಹೋಗಿ ಸಾರಾಯಿ ಮಾರಾಟ ಮಾಡುತ್ತೇನೆ ಎನ್ನುತ್ತಾರೆ. ಅಲ್ಲದೆ ಇನ್ನೊಬ್ಬ ಸಚಿವ ಜೂಜು ಅಡ್ಡೆ ಸ್ಥಾಪನೆ ಮಾಡುತ್ತೇನೆ ಎಂದು ಹೇಳುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ ಸಂಸ್ಕೃತಿ ಧಿಕ್ಕರಿಸಿ ಯುವ ಸಮುದಾಯವನ್ನು ಹಾಳು ಮಾಡುವಂತ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು ಸರಿಯಲ್ಲ. ಈ ಕುರಿತು ಮುಖ್ಯಮಂತ್ರಿ ಅವರು ಈ ಯೋಜನೆಗೆ ಪೂರ್ಣವಿರಾಮ ನೀಡಬೇಕು. ಇಲ್ಲವಾದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಅವರು ಹೇಳಿದರು.

ವಿಧಾನಸಭೆಯಲ್ಲಿ 1 ಲಕ್ಷ 7 ಸಾವಿರ ದಾಖಲೆಗಳು ಇಲಾಖಾ ಮುಖ್ಯಸ್ಥರ ಮಟ್ಟದಲ್ಲಿ ಬಾಕಿ ಉಳಿದಿದ್ದು, ಇಷ್ಟು ದಾಖಲೆಗಳು ಬಾಕಿ ಉಳಿದಿರುವುದನ್ನು ನೋಡಿದರೇ ಚಲನಶೀಲತೆ ಇಲ್ಲದ ಸರ್ಕಾರ ಎಂದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.

ಕಡತ ಬಾಕಿ ಉಳಿಯುವುದರಿಂದ ಭ್ರಷ್ಟಾಚಾರ ಹೆಪ್ಪುಗಟ್ಟುತ್ತದೆ. ಶೋಷಣೆ ಹೆಚ್ಚಾಗುತ್ತದೆ, ಸಾಮಾನ್ಯ ಜನರಿಗೆ ನ್ಯಾಯ ವಿಳಂಬವಾಗುತ್ತದೆ. ಕರ್ನಾಟಕ ಸರ್ಕಾರ ಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ಮೈಗೂಡಿಸಿಕೊಂಡು ಬಂದಿದ್ದು, ಸರ್ಕಾರ ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಸೂಚನೆ ನೀಡಿದರು.

ಇದೇ ವೇಳೆ ಮಹದಾಯಿ ಕುರಿತು ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಸ್ವಾಗತಾರ್ಹವಾಗಿದ್ದು, ಸರ್ಕಾರ ಯಾವುದೇ ರೀತಿಯಲ್ಲಿ ವಿಳಂಬ ಧೋರಣೆ ಅನುಸರಿಸದೇ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಬಜೆಟ್ ನಲ್ಲಿ ಎರಡು ಸಾವಿರ ಕೋಟಿ ಹಣವನ್ನು ಮಹದಾಯಿಗೆ ಮೀಸಲಿಡಬೇಕು ಎಂದು ಮಾಜಿ ಸಚಿವ ಎಚ್.ಕೆ ಪಾಟೀಲ್ ಹೇಳಿದರು.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ