ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರಿಂದ ದೇಶವೇ ಲಾಕ್‍ಡೌನ್ ಆಯ್ತು. ಆದರೆ ಜನಸಾಮಾನ್ಯರು ಪರಿಸ್ಥಿತಿಯನ್ನ ಅವಲೋಕಿಸದೆ ಬೇಕಾಬಿಟ್ಟಿ ಮನೆಯಿಂದ ಹೊರಬಂದು ಓಡಾಡುತ್ತಿದ್ದಾರೆ. ಹೀಗಾಗಿ ಪೊಲೀಸರು ಮನೆ-ಮನೆಗೆ ತೆರಳಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಮೊದಲಿಗೆ ಪೊಲೀಸರು ಎಲ್ಲಾ ರೀತಿಯಲ್ಲೂ ಮನವಿ ಮಾಡಿದ್ದರು. ಕೈಮುಗಿದು ಕೇಳಿಕೊಂಡಿದ್ದರು, ಕೊನೆಗೆ ಲಾಠಿಯಿಂದ ಹೊಡೆಯಲು ಶುರು ಮಾಡಿದ್ದರು. ಇದರಿಂದ ಪೊಲೀಸರ ವರ್ತನೆ ತೀವ್ರ ವಿರೋಧ ಹಾಗೂ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪೊಲೀಸರು ಲಾಠಿಯನ್ನ ಠಾಣೆಯಲ್ಲೇ ಬಿಟ್ಟು ಸ್ನೇಹಿತರಂತೆ ಮನೆ-ಮನೆಗೆ ತೆರಳಿ ಕೂತು ಮಾತನಾಡಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಜಿಲ್ಲೆಯ ಸಖರಾಯಪಟ್ಟಣ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯ ಹುಲಿಕೆರೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಪ್ರತಿಯೊಂದು ಮನೆಗೂ ಹೋಗಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ದಯವಿಟ್ಟು ಯಾರೂ ಮನೆಯಿಂದ ಹೊರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಅಮೆರಿಕ, ಇಟಲಿಯಂತಹಾ ಸ್ಥಿತಿ ನಮಗೆ ಬರಬಾರದು ಎಂದರೆ ನಾವು ಮನೆಯಲ್ಲಿ ಇರಬೇಕು ಎಂದು ತಿಳಿ ಹೇಳಿದ್ದಾರೆ.
ಅಗತ್ಯ ವಸ್ತುಗಳು ಬೇಕಾದಾಗ ಬನ್ನಿ. ಚಿಕನ್, ಮಟನ್ ಅಗತ್ಯವಲ್ಲ. ಅಕ್ಕಿ, ಬೆಳೆ, ಎಣ್ಣೆ, ಕಾಳು ಅಗತ್ಯ ಅದಕ್ಕೆ ಬನ್ನಿ. ಸುಮ್ಮನೇ ಎಲ್ಲದಕ್ಕೂ ಓಡಾಡುತ್ತಿದ್ದರೆ ಈ ಮಹಾಮಾರಿಯನ್ನ ಕಂಟ್ರೋಲ್ ಮಾಡಲು ಸಾಧ್ಯವಾಗಲ್ಲ. ಅನಾವಶ್ಯಕವಾಗಿ ನೀವೂ ಬರಬೇಡಿ. ನಿಮ್ಮ ಅಕ್ಕ-ಪಕ್ಕದವರಿಗೂ ತಿಳಿ ಹೇಳಿ ಎಂದು ಮನೆ-ಮನೆಗೆ ತೆರಳಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಲಾಠಿ ಬಿಟ್ಟು ಸ್ನೇಹಿತರಂತೆ ಜಾಗೃತಿ ಮೂಡಿಸುತ್ತಿರುವ ಪೊಲೀಸರ ಕಾರ್ಯಕ್ಕೆ ಜಿಲ್ಲೆಯಲ್ಲಿ ಶ್ಲಾಘನೆ ಕೂಡ ವ್ಯಕ್ತವಾಗಿದೆ.