ಬೆಂಗಳೂರು (ಏ. 28): ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯ ಮೈ ಮುಟ್ಟಿ, ಕೈ ಕಚ್ಚಿ ಪರಾರಿಯಾಗಿದ್ದ ಬೆಂಗಳೂರಿನ ಕಾಮುಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ದೇಶಾದ್ಯಂತ ಲಾಕ್ಡೌನ್ ಘೋಷಣೆ ಆದಮೇಲೆ ಅಪರಾಧ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗಿದೆ ಎಂದು ವರದಿಯೊಂದು ತಿಳಿಸಿತ್ತು. ಆದರೆ, ಮನೆಯಿಂದ ಹೊರಗೆ ಹೋಗಲೂ ಯೋಚಿಸಬೇಕಾದ ಪರಿಸ್ಥಿತಿ ಇದ್ದರೂ ಅಪರಾಧ ಪ್ರಕರಣಗಳು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಇದಕ್ಕೆ ಉದಾಹರಣೆಯೆಂಬಂತೆ ಲಾಕ್ಡೌನ್ ಬಳಿಕವೂ ಅಲ್ಲಲ್ಲಿ ಕೊಲೆ, ಅತ್ಯಾಚಾರ, ಸುಲಿಗೆ, ವಂಚನೆ, ಅಪಹರಣದ ಪ್ರಕರಣಗಳು ನಡೆಯುತ್ತಲೇ ಇವೆ.
ಬೆಂಗಳೂರಿನ ಸಿದ್ದಾರ್ಥ ನಗರದ ನಿವಾಸಿಯಾಗಿರುವ 21 ವರ್ಷದ ಮೊಹಮ್ಮದ್ ಫಯಾಜ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಏ. 25ರಂದು ಅಕ್ಕಿಪೇಟೆ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯ ಮೈ ಮುಟ್ಟಿ, ಎಳೆದಾಡಿದ್ದ ಈತನ ದಿಢೀರ್ ವರ್ತನೆಗೆ ಯುವತಿ ಕಂಗಾಲಾಗಿದ್ದಳು. ಮೈ ಮುಟ್ಟಿ ಎಳೆದಾಡಿದ್ದರಿಂದ ಬಿಡಿಸಿಕೊಳ್ಳಲು ಹೆಣಗಾಡಿದ ಆಕೆ ಸಹಾಯಕ್ಕಾಗಿ ಕಿರುಚಿಕೊಂಡಿದ್ದಳು. ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ಯುವತಿಯ ಕೈ ಕಚ್ಚಿ ಪರಾರಿಯಾಗಿದ್ದ ಕಾಮುಕನನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಈ ಘಟನೆಯ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಗೆ ಸಂತ್ರಸ್ತ ಯುವತಿ ದೂರು ನೀಡಿದ್ದಳು. ಈ ಪ್ರಕರಣ ಸಂಬಂಧ ಐಪಿಸಿ 354(A) ಅಡಿ ಆರೋಪಿ ವಿರುದ್ದ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಮೊಹಮ್ಮದ್ ಫಯಾಜ್ನನ್ನು ಬಂಧಿಸಿರುವ ಕಾಟನ್ ಪೇಟೆ ಪೊಲೀಸರು ಆತನನ್ನು ಜೈಲಿಗೆ ಹಾಕಿದ್ದಾರೆ.