Breaking News
Home / ಜಿಲ್ಲೆ / ಹೆಬ್ಬಾಳದ ಕೆಂಪಾಪುರದಲ್ಲಿ ನಾಲ್ಕು ಅಂತಸ್ತಿನ ಪಿಜಿ ಕಟ್ಟಡದಲ್ಲಿ ಬಿರುಕು :ಬೆಂಗಳೂರು

ಹೆಬ್ಬಾಳದ ಕೆಂಪಾಪುರದಲ್ಲಿ ನಾಲ್ಕು ಅಂತಸ್ತಿನ ಪಿಜಿ ಕಟ್ಟಡದಲ್ಲಿ ಬಿರುಕು :ಬೆಂಗಳೂರು

Spread the love

ಬೆಂಗಳೂರು, ಫೆ.5- ನಗರದಲ್ಲಿ ಕಟ್ಟಡಗಳು ವಾಲುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದ್ದು, ಇಂದು ಮತ್ತೊಂದು ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡು ಆತಂಕದಿಂದ ಜನರು ಮನೆ ಖಾಲಿ ಮಾಡಿದ್ದಾರೆ. ಹೆಬ್ಬಾಳದ ಕೆಂಪಾಪುರದಲ್ಲಿ ನಾಲ್ಕು ಅಂತಸ್ತಿನ ಪಿಜಿ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಟ್ಟಡ ವಾಲಿಕೊಂಡಿದೆ. ಬೆಳಗ್ಗೆ 8.30ರ ಸುಮಾರಿಗೆ ವಿಷಯ ಗೊತ್ತಾಗುತ್ತಿದ್ದಂತೆ ಹೆದರಿದ ಜನರು ಕಟ್ಟಡದಿಂದ ಹೊರಬಂದಿದ್ದಾರೆ.

ಮನೆಯವರು ಅಗ್ನಿಶಾಮಕ ದಳ ಮತ್ತು ಬಿಬಿಎಂಪಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದರು. ಸ್ಥಳದಲ್ಲಿ ನಾಲ್ಕು ಅಗ್ನಿಶಾಮಕ ದಳದ ವಾಹನಗಳು ಆಗಮಿಸಿದ್ದು, ಕಟ್ಟಡದಲ್ಲಿ ಎಲ್ಲೆಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಕೂಡ ಕಟ್ಟಡ ಪರಿಶೀಲಿಸಿದ್ದು, ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಕಟ್ಟಡದಲ್ಲಿ ವಾಸವಿದ್ದವರನ್ನು ಬೇರೆ ಕಡೆಗೆ ಕಳುಹಿಸಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಅಧಿಕಾರಿಗಳು ಕಟ್ಟಡದಲ್ಲಿ ಮಾಲೀಕರು ಪಿಜಿ ನಡೆಸುತ್ತಿದ್ದು, ಇದರ ಹಿಂಭಾಗದಲ್ಲಿ ಮನೆ ಕಟ್ಟಲು ಪಾಯ ತೆಗೆಯಲಾಗಿದೆ. ಸುಮಾರು 5 ರಿಂದ 8 ಅಡಿಯಷ್ಟು ಪಾಯ ತೆಗೆದಿರುವುದರಿಂದ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡು ವಾಲಿದೆ ಎಂದು ತಿಳಿಸಿದರು. ಕಟ್ಟಡವನ್ನು ಡೆಮಾಲಿಷ್ ಮಾಡಬೇಕಾಗಿದ್ದು, ತಜ್ಞರ ಸಲಹೆ ಪಡೆದು ಸಂಜೆ ವೇಳೆಗೆ ನಿರ್ಧರಿಸಲಾಗುತ್ತದೆ ಎಂದು ಹೇಳಿದರು.

ಪಾಲಿಕೆ ಎಂಜಿನಿಯರ್‍ಗಳು ಆಗಮಿಸಿದ್ದು, ಕಟ್ಟಡ ತೆರವುಗೊಳಿಸುವ ಸಲುವಾಗಿ ಅಕ್ಕಪಕ್ಕದ ಮನೆಗಳವರನ್ನು ಮುಂಜಾಗ್ರತಾ ಕ್ರಮವಾಗಿ ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ಮನವಿ ಮಾಡಿದರು. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ರಾಹುಲ್ ಎಂಬುವವರು ಪಿಜಿ ನಡೆಸುತ್ತಿದ್ದು, ಈ ಕಟ್ಟಡದ ಹಿಂಭಾಗದಲ್ಲಿ ಬಾಬು ಎಂಬುವವರು ಮನೆ ಕಟ್ಟಲು ಯಾವುದೇ ಮುಂಜಾಗ್ರತೆ ತೆಗೆದುಕೊಳ್ಳದೆ ಪಾಯ ತೆಗೆಸಿದ್ದಾರೆಂದು, ಇದರಿಂದಲೇ ಕಟ್ಟಡ ವಾಲಿದೆ ಎಂದು ಅಕ್ಕಪಕ್ಕದ ನಿವಾಸಿಗಳು ಆರೋಪಿಸಿದ್ದಾರೆ. ಘಟನೆ ಸಂಬಂದ ಅಮೃತಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ