Breaking News
Home / ಜಿಲ್ಲೆ / ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 10 ‘ಅರ್ಹ’ ಶಾಸಕರು

ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 10 ‘ಅರ್ಹ’ ಶಾಸಕರು

Spread the love

ಬೆಂಗಳೂರು,ಫೆ.6 – ಅಂತೂ ಇಂತೂ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ನಡೆದಿದ್ದು, ಮೂಲ ಹಾಗೂ ವಲಸಿಗರ ಸಂಘರ್ಷದ ನಡುವೆಯೂ ಉಪಚುನಾವಣೆಯಲ್ಲಿ ಗೆದ್ದಿದ್ದ 10 ಮಂದಿ ಶಾಸಕರು ಸಂಪುಟ ದರ್ಜೆಯ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲ ವಿ.ಆರ್.ವಾಲಾ ಅವರು ನೂತನ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಳೆದ ಡಿಸೆಂಬರ್‍ನಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದಿದ್ದ 10 ಶಾಸಕರು ಇಂದು ಸಂಪುಟಕ್ಕೆ ಸೇರ್ಪಡೆಯಾಗಿದ್ದು, ಸಂಪುಟದಲ್ಲಿ ಇನ್ನು ಆರು ಸ್ಥಾನಗಳು ಬಾಕಿ ಉಳಿದಿವೆ.

ಎಸ್.ಟಿ.ಸೋಮಶೇಖರ್(ಯಶವಂತಪುರ), ರಮೇಶ್‍ಜಾರಕಿಹೊಳಿ(ಗೋಕಾಕ್),ಆನಂದ್ ಸಿಂಗ್(ವಿಜಯನಗರ), ಡಾ.ಕೆ.ಸುಧಾಕರ್(ಚಿಕ್ಕಬಳ್ಳಾಪುರ), ಭೈರತಿ ಬಸವರಾಜ್(ಕೆ.ಆರ್.ಪುರಂ), ಹೆಬ್ಬಾರ್ ಶಿವರಾಮ್( ಯಲ್ಲಾಪುರ), ಬಿ.ಸಿ.ಪಾಟೀಲ್(ಹಿರೇಕೆರೂರು), ಕೆ.ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್), ಕೆ.ಸಿ.ನಾರಾಯಣಗೌಡ(ಕೆ.ಆರ್.ಪೇಟೆ) ಹಾಗೂ ಶ್ರೀಮಂತಪಾಟೀಲ್(ಕಾಗವಾಡ) ಅವರುಗಳು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಎಸ್.ಟಿ.ಸೋಮಶೇಖರ್, ಆನಂದ್ ಸಿಂಗ್, ಭೈರತಿ ಬಸವರಾಜ್, ಕೆ.ಸಿ.ನಾರಾಯಣಗೌಡ, ಶ್ರೀಮಂತ್ ಪಾಟೀಲ್, ಕೆ.ಗೋಪಾಲಯ್ಯ ಅವರುಗಳು ದೇವರÀÀ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಬಿ.ಸಿ.ಪಾಟೀಲ್, ದೇವರು , ಕ್ಷೇತ್ರದ ಜನತೆ, ತಂದೆತಾಯಿ ಹಾಗೂ ಜಗಜ್ಯೋತಿ ಬಸವೇಶ್ವರರ ಹೆಸರಿನಲ್ಲಿ, ಶಿವರಾಮ್ ಹೆಬ್ಬಾರ್ ದೇವರು ಹಾಗೂ ಕ್ಷೇತ್ರದ ಜನರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಸಿದರು. ಎಸ್.ಟಿ.ಸೋಮಶೇಖರ್, ಗೋಪಾಲಯ್ಯ ಅವರು ರೇಷ್ಮೆ ಪಂಚೆ ಮತ್ತು ಶರ್ಟ್‍ನಲ್ಲಿ ಮಿಂಚಿದರೆ, ಸುಧಾಕರ್, ಭೈರತಿ ಬಸವರಾಜ್ ಸೇರಿದಂತೆ ಬಹಳಷ್ಟು ಮಂದಿ ಕೇಸರಿ ಶಾಲು ಹೊದ್ದು ಪ್ರಮಾಣವಚನ ಸ್ವೀಕರಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2ನೇ ಬಾರಿಯ ಸಂಪುಟ ವಿಸ್ತರಣೆ ಇದ್ದಾಗಿದೆ.

ಶಾಸಕರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಅಭಿಮಾನಿಗಳು, ಕಾರ್ಯಕರ್ತರ ಹರ್ಷೋದ್ಘಾರ ಮುಗಿಲುಮಟ್ಟಿತು. ಸಿಹಿ ಹಂಚಿ ಜೈಕಾರ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೊನೆಕ್ಷಣದಲ್ಲಿ ಏನಾದರೂ ಪವಾಡ ನಡೆದು ಸಂಪುಟಕ್ಕೆ ಹೊಸಬರು ಸೇರ್ಪಡೆಯಾಗಬಹುದೆಂಬ ನಿರೀಕ್ಷೆಯಲ್ಲಿ ಸಚಿವ ಆಕಾಂಕ್ಷಿಗಳು ರಾಜಭವನಕ್ಕೆ ಆಗಮಿಸಿದ್ದರು. ಆದರೆ ಅಂತಹ ಯಾವ ಪವಾಡಗಳು ನಡೆಯದೇ ಯಡಿಯೂರಪ್ಪನವರ ಸಂಪುಟಕ್ಕೆ ಇಂದು ಕೇವಲ 10 ಮಂದಿ ಶಾಸಕರು ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ವದಂತಿಗಳೆಲ್ಲವೂ ಹುಸಿಯಾಗಿಯೇ ಉಳಿಯಿತು.

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಇಂದು ಬೆಳಗ್ಗೆಯವರೆಗೆ ಸಂಪುಟಕ್ಕೆ ಸೇರ್ಪಡೆಯಾಗಲು ಕೊನೆಯ ಕ್ಷಣದವರೆಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ಭಾರೀ ಕಸರತ್ತು ನಡೆಸಿದರು.ಶತಾಯಗತಾಯ ತಮ್ಮನ್ನು ಸಚಿವರನ್ನಾಗಿ ಮಾಡಬೇಕೆಂದು ಕೊನೆಯ ಕ್ಷಣದವರೆಗೂ ಪ್ರಯತ್ನಗಳನ್ನು ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅದರಲ್ಲೂ ಉಮೇಶ್ ಕತ್ತಿಯಂತೂ ಮುಂಜಾನೆಯೇ ಯಡಿಯೂರಪ್ಪನವರನ್ನು ಭೇಟಿಯಾಗಿ ಸಚಿವರನ್ನಾಗಿ ಮಾಡಬೇಕೆಂದು ಪಟ್ಟು ಹಿಡಿದರು.

ಹೈಕಮಾಂಡ್ ನಿರ್ದೇಶನವಿರುವುದರಿಂದ ನಾನು ಕೂಡ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇನೆ. ನಿಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳಬಾರದೆಂಬ ದುರುದ್ದೇಶವಿಲ್ಲ. ಹತ್ತು ಮಂದಿಗೆ ಮಾತ್ರ ಅವಕಾಶ ಕೊಟ್ಟಿರುವುದರಿಂದ ನಿಮ್ಮನ್ನು ಸಂಪಟಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಸಂಪುಟ ಪುನಾರಚನೆಯಾಗಲಿದ್ದು, ನಿಮಗೆ ಖಂಡಿತ ಅವಕಾಶ ನೀಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಯಾರ ಕಣ್ಣಿಗೂ ಬೀಳದ ಉಮೇಶ್ ಕತ್ತಿ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಜೂನ್ ತಿಂಗಳಿನಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ 17 ಶಾಸಕರು ಸಿಡಿದೆದ್ದು ರಾಜೀನಾಮೆ ಕೊಟ್ಟಿದ್ದರು. ಪರಿಣಾಮ ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ರಾಜೀನಾಮೆ ನೀಡಿದ್ದ ಶಾಸಕರ ಸದಸ್ಯತ್ವನ್ನು ಪಕ್ಷಾಂತರ ಕಾಯ್ದೆಯಡಿ ಅನರ್ಹಗೊಳಿಸಲಾಗಿತ್ತು. ಸುದೀರ್ಘ ಕಾನೂನು ಹೋರಾಟ ನಡೆದ ಬಳಿಕ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಾರಿಯಾಗಿದ್ದ ಅನರ್ಹತೆಯನ್ನು ನ್ಯಾಯಾಲಯದಲ್ಲಿ ಅನೂರ್ಜಿತಗೊಳಿಸಲಾಯಿತು.

15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 12, ಕಾಂಗ್ರೆಸ್ 2 ಹಾಗೂ ಬಿಜೆಪಿ ಒಂದು ಸ್ಥಾನ ಪಡೆದುಕೊಂಡಿತ್ತು. ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ವಿರುದ್ದ ಪಕ್ಷೇತರ ಅಭ್ಯರ್ಥಿಯಾಗಿದ್ದ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದರು. ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಸಂಪುಟ ವಿಸ್ತರಣೆ ನಡೆಯಬೇಕಾಗಿತ್ತಾದರೂ ಒಂದಿಲ್ಲೊಂದು ಕಾರಣಗಳಿಂದ ಮುಂದೂಡಿಕೆಯಾಗಿತ್ತು.

ಬಳಿಕ ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆಗೆ ಅನುಮತಿ ಪಡೆದಿದ್ದರು.
ಈ ಮೊದಲು ಸಂಪುಟಕ್ಕೆ 13 ಮಂದಿಯನ್ನು ತೆಗೆದುಕೊಳ್ಳುವುದಾಗಿ ಹೇಳಲಾಗಿತ್ತು. ಆದರೆ ಮಾಜಿ ಸಚಿವ ಹಾಗೂ ಕಳೆದ ವಿಧಾನಸಭೆಯಲ್ಲಿ ಪರಾಭವಗೊಂಡಿದ್ದ ಸಿ.ಪಿ.ಯೋಗೇಶ್ವರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳವುದಕ್ಕೆ ಕೆಲ ಶಾಸಕರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರಿಂದ ಕೊನೆ ಕ್ಷಣದಲ್ಲಿ ಬದಲಾವಣೆಯಾಗಿ ಕೇವಲ 10 ಶಾಸಕರು ಮಾತ್ರ ಸಂಪುಟ ಸೇರ್ಪಡೆಯಾದ್ದಂತಾಗಿದೆ.


Spread the love

About Laxminews 24x7

Check Also

ಎಷ್ಟು ದೊಡ್ಡ ರಾಜ್ಯ ಕಟ್ಟಿದ್ರಿ ಅನ್ನೋದು ಮುಖ್ಯ ಅಲ್ಲ, ಯಾವ ಥರ ರಾಜನಾಗಿ ಬಾಳಿದ್ರಿ ಅನ್ನೋದು ಮುಖ್ಯ: ಕಿಚ್ಚ

Spread the love ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಕಾಂಟ್ರವರ್ಸಿಗಳೇ ಮೇಳೈಸುತ್ತಿವೆ. ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ವಿಚ್ಛೇದನ ಸುದ್ದಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ